ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ Claims & Objections ಅವಧಿಯಲ್ಲಿ ಸಲ್ಲಿಕೆಯಾಗಿರುವ ಫಾರ್ಮ್-7 ಅರ್ಜಿಗಳನ್ನು ಬೂತ್‌ವಾರು ಸಮಗ್ರವಾಗಿ ಪರಿಶೀಲಿಸಿ, ನೈಜ ಮತದಾರರ ಮತದಾನದ ಹಕ್ಕು ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
Claims & Objections ಅವಧಿಯ ಕೊನೆಯ ಒಂದು ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿರುವ ಪ್ರಕರಣಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು. ಕೆಲವು ಬೂತ್‌ಗಳಲ್ಲಿ ಒಬ್ಬ ವ್ಯಕ್ತಿಯೇ 30–40 ಅಥವಾ ಅದಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಿರುವುದು ಕಂಡುಬಂದರೆ, ಅಂತಹ ಅರ್ಜಿಗಳಲ್ಲಿನ ಕಾರಣ, ದಾಖಲೆಗಳು ಹಾಗೂ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ತಪ್ಪು ಮಾಹಿತಿ ನೀಡಿರುವುದು ತನಿಖೆಯಲ್ಲಿ ಸಾಬೀತಾದರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮುಶ್ರೀಫ್ ಆಗ್ರಹಿಸಿದರು.
ವಿಜಯಪುರ ನಗರ ಕ್ಷೇತ್ರದ ಎಲ್ಲ 287 ಬೂತ್‌ಗಳ ಫಾರ್ಮ್-7 ಅರ್ಜಿಗಳನ್ನು ಬೂತ್‌ವಾರು ಪರಿಶೀಲಿಸಬೇಕು. ಒಂದೇ ವ್ಯಕ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು, ಒಂದೇ ರೀತಿಯ ಕಾರಣ ಅಥವಾ ದಾಖಲೆಗಳೊಂದಿಗೆ ಸಲ್ಲಿಸಿರುವ ಅರ್ಜಿಗಳು ಹಾಗೂ ನಿರ್ದಿಷ್ಟ ಪ್ರದೇಶಕ್ಕೆ ಸಂಬಂಧಿಸಿದಂತೆ ಅಸಾಮಾನ್ಯ ಸಂಖ್ಯೆಯಲ್ಲಿ ಬಂದಿರುವ ಅರ್ಜಿಗಳ ಕುರಿತು ವಿಶೇಷ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಯಾವುದೇ ನೈಜ ಹಾಗೂ ಅರ್ಹ ಮತದಾರರ ಹೆಸರನ್ನು ಕೇವಲ ಫಾರ್ಮ್-7 ಅರ್ಜಿ ಸಲ್ಲಿಕೆಯ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು. ಸಂಬಂಧಪಟ್ಟ ಮತದಾರರಿಗೆ ಮಾಹಿತಿ ನೀಡಿ, ಅವರ ದಾಖಲೆಗಳು ಹಾಗೂ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
This video cannot be played in your browser. Open the video directly
ಅದೇ ರೀತಿ ಡುಪ್ಲಿಕೇಟ್ ಮತದಾರರ ಪರಿಶೀಲನೆ ಸಂದರ್ಭದಲ್ಲಿ ಕೇವಲ ಹೆಸರು ಅಥವಾ ಹೋಲುವ ಫೋಟೋವನ್ನು ಆಧಾರವಾಗಿಸದೆ, EPIC ಸಂಖ್ಯೆ, ವಿಳಾಸ, ಸಂಬಂಧಿಕರ ವಿವರ, ಫೋಟೋ ಸೇರಿದಂತೆ ಲಭ್ಯವಿರುವ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರವೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ನೈಜ ಮತದಾರರ ಮತದಾನದ ಹಕ್ಕು ಯಾವುದೇ ಕಾರಣಕ್ಕೂ ಕಸಿದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಅದೇ ವೇಳೆ ನಿಜವಾಗಿಯೂ ಡುಪ್ಲಿಕೇಟ್ ಅಥವಾ ಅನರ್ಹ ನೋಂದಣಿಗಳು ಕಂಡುಬಂದರೆ, ಅವುಗಳನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತವಾಗಿ ಸರಿಪಡಿಸಬೇಕು ಎಂದು ಮನವಿ ಮಾಡಿದರು.
ಈ ಕುರಿತು ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ 30-ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ERO ಮತ್ತು AERO ಅವರಿಗೆ ಅಗತ್ಯ ಸೂಚನೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಜಿಲ್ಲಾ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.





