ಪೊಲೀಸ್ ನೇಮಕಾತಿ ಪರೀಕ್ಷೆಗಳ ಕುರಿತು ತಮ್ಮ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿ ಸುಳ್ಳು ಮಾಹಿತಿ ಹರಡಿದ ಸುದ್ದಿ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿರುವ ಅವರು, ವಿಜಯಪುರ ಘಟನೆಗೆ ಸಂಬಂಧಿಸಿ ಬಿಜೆಪಿ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ತಮ್ಮ ರಾಜೀನಾಮೆ ಕೇಳಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ತಾವು ಉತ್ತರಿಸಿದ್ದೇ ಹೊರತು, ವಿದ್ಯಾರ್ಥಿಗಳ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ನನಗೆ ಕೇಳಿದ ಪ್ರಶ್ನೆ, ‘ವಿಜಯಪುರ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಪ್ರತಿಪಕ್ಷ ನಾಯಕ ಆರ್. ಅಶೋಕ್ ನಿಮ್ಮ ರಾಜೀನಾಮೆ ಕೇಳುತ್ತಿದ್ದಾರೆ. ನಿಮ್ಮ ಪ್ರತಿಕ್ರಿಯೆ ಏನು?’ ಎಂಬುದಾಗಿತ್ತು. ಅದಕ್ಕೆ ನಾನು, ‘ನನ್ನ ರಾಜೀನಾಮೆ ಕೇಳಿ ಬಿಜೆಪಿ 25 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರೆ, ನಾನು ರಾಜೀನಾಮೆ ಬಗ್ಗೆ ಯೋಚಿಸುತ್ತೇನೆ’ ಎಂದು ಉತ್ತರಿಸಿದ್ದೆ. ಈ ಹೇಳಿಕೆ ಬಿಜೆಪಿಯ ರಾಜಕೀಯ ನಾಟಕಕ್ಕೆ ಸಂಬಂಧಿಸಿದ್ದೇ ಹೊರತು, ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದಲ್ಲ” ಎಂದು ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಖರ್ಗೆ, ಪಿಎಸ್‌ಐ ನೇಮಕಾತಿ ಹಗರಣ ನಡೆದಿದ್ದು ಬಿಜೆಪಿ ಆಡಳಿತಾವಧಿಯಲ್ಲೇ ಎಂದು ಆರೋಪಿಸಿದ್ದಾರೆ. ಅಂದು ವಿಧಾನಸೌಧವನ್ನು “ವ್ಯಾಪಾರ ಸೌಧ”ವನ್ನಾಗಿ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆಯುವ ಪ್ರತಿಯೊಂದು ನೇಮಕಾತಿ ಪರೀಕ್ಷೆಯಲ್ಲೂ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ನ್ಯಾಯಸಮ್ಮತತೆಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಸೇರಿದಂತೆ 60 ರಾಷ್ಟ್ರಗಳ ಮೇಲಿನ ಟ್ರಂಪ್ ಹೊಸ ಸುಂಕಕ್ಕೆ ಅಮೆರಿಕದಲ್ಲೇ ವಿರೋಧ
ತಮ್ಮ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿ ಪ್ರಸಾರ ಮಾಡಿದ ಸುದ್ದಿ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಗೃಹ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ. “ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಮಾತ್ರವಲ್ಲದೆ, ಹಲವು ವರ್ಷಗಳಿಂದ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಸುವ ಉದ್ದೇಶದಿಂದ ಈ ಸುಳ್ಳು ಮಾಹಿತಿ ಹರಡಲಾಗಿದೆ. ಸುಳ್ಳು ಸುದ್ದಿ ಪತ್ರಿಕೋದ್ಯಮವಲ್ಲ; ಅದು ಜನರನ್ನು ದಾರಿ ತಪ್ಪಿಸುವ ಹಾಗೂ ಸಾರ್ವಜನಿಕ ನಂಬಿಕೆಯನ್ನು ಕುಂದಿಸುವ ದುರುದ್ದೇಶದ ತಪ್ಪು ಮಾಹಿತಿ” ಎಂದು ಖರ್ಗೆ ಕಿಡಿಕಾರಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, “ದಯವಿಟ್ಟು ಸಂಪೂರ್ಣ ಸಂಭಾಷಣೆಯನ್ನು ಸಾರ್ವಜನಿಕರ ಮುಂದೆ ಇಡಿ. ನನ್ನ ಮುಂದೆ ಮೈಕ್ ಹಿಡಿಯುವ ಮೊದಲು ಏನು ಮಾತುಕತೆ ನಡೆಯಿತು? ಯಾವ ವಿದ್ಯಾರ್ಥಿಗಳು ನನ್ನ ರಾಜೀನಾಮೆ ಕೇಳಿದ್ದರು? ರಾಜೀನಾಮೆ ಕೇಳಿದ್ದು ಬಿಜೆಪಿ, ಅದಕ್ಕೆ ನಾನು ಉತ್ತರಿಸಿದ್ದೆ. ಕನ್ನಡ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಸಂಪೂರ್ಣ ಹೇಳಿಕೆಯನ್ನು ದಾಖಲಿಸಿದ್ದರೂ, ಕೆಲವರು ಮಾತ್ರ ಆಯ್ದ ಭಾಗವನ್ನು ತೋರಿಸಿ ತಿರುಚಿ ಬಿಂಬಿಸಿದ್ದಾರೆ. ಈಗ ತನಿಖೆ ಆರಂಭವಾಗಿರುವುದರಿಂದ ಆಯ್ದ ತುಣುಕುಗಳನ್ನು ಅಲ್ಲ, ಸಂಪೂರ್ಣ ವಾಸ್ತವಾಂಶವನ್ನು ತನಿಖೆಯ ಮುಂದೆ ಇಡಿ” ಎಂದು ಒತ್ತಾಯಿಸಿದ್ದಾರೆ.




