ಜಾತಿ ನಿಂದನೆ ಮತ್ತು ಹಲ್ಲೆಗೆ ಒಳಗಾಗಿ ಮನನೊಂದ ದಲಿತ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಮುಜಫರ್‌ನಗರ ಜಿಲ್ಲೆಯ ಖತೌಲಿ ತಹಸಿಲ್‌ನ ಗಂಗಧಾಡಿ ಗ್ರಾಮದಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
25 ವರ್ಷದ ದಲಿತ ಯುವಕ ಹಿಮಾಂಶು ಕೆಲಸ ಮಾಡಲು ನಿರಾಕರಿಸಿದ ಎಂಬ ಕಾರಣಕ್ಕೆ ಆರೋಪಿ ಟಿಂಕು ಅಲಿಯಾಸ್ ಗೌರವ್ (28) ಎಂಬಾತ ಥಳಿಸಿ, ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಅವಮಾನದಿಂದ ಮನನೊಂದ ಹಿಮಾಂಶು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನ ದೇಹದ ಶೇ. 30 ಕ್ಕೂ ಹೆಚ್ಚು ಭಾಗ ಸುಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ | ಮೇಲ್ಜಾತಿಯವರಿಂದ ತಮ್ಮಂತೆಯೇ ಬಟ್ಟೆ ಧರಿಸಿದ್ದಕ್ಕೆ ಹಲ್ಲೆ: ದಲಿತ ಯುವಕ ಆತ್ಮಹತ್ಯೆ
ಈ ಬಗ್ಗೆ ಭಾನುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸಂಜಯ್ ಕುಮಾರ್, “ಪೊಲೀಸರು ಟಿಂಕು ಅಲಿಯಾಸ್ ಗೌರವ್ ವಿರುದ್ಧ ಬಿಎನ್‌ಎಸ್ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ” ಎಂದು ಹೇಳಿದ್ದಾರೆ.
ದೇಹದ ಶೇ. 30ಕ್ಕಿಂತ ಹೆಚ್ಚು ಸುಟ್ಟ ಗಾಯಗಳಿಂದ ಬಳಲುತ್ತಿರುವ ಹಿಮಾಂಶು ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಮಾಂಶು ಅವರ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.





