ಐದು ವರ್ಷಗಳ ಕಾಲ ಕೋರ್ಟ್‌ನಲ್ಲಿ ವಿಚ್ಛೇದನಕ್ಕಾಗಿ ಅಲೆದಾಡಿ , ವಾದ-ಪ್ರತಿವಾದಗಳನ್ನು ನಡೆಸಿ, ಕೊನೆಗೆ ವಿಚ್ಛೇದನ ಸಿಗುವ ಕೊನೆಯ ಕ್ಷಣದಲ್ಲಿ ದಂಪತಿಗಳು ವಿಚ್ಛೇದನ ಪ್ರತಿಯನ್ನು ಹರಿದು ಒಂದಾಗಲು ನಿರ್ಧರಿಸಿದ ಘಟನೆ ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದು, ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವೈರಲ್ ಆಗುತ್ತಿದೆ.
ಶಿಖಾ ಮತ್ತು ಸೌರಭ್ 2020ರಲ್ಲಿ ವಿವಾಹವಾಗಿದ್ದಾರೆ. ಆದರೆ ಹೊಂದಾಣಿಕೆ ಆಗದ ಕಾರಣ ವಿಚ್ಛೇದನ ಪಡೆಯುವ ನಿರ್ಧಾರಕ್ಕೆ ಬಂದಿದ್ದರು. ಕಳೆದ ಐದು ವರ್ಷಗಳಿಂದ ವಿಚ್ಛೇದನ ಅರ್ಜಿಯ ವಿಚಾರಣೆ ನಡೆಯುತ್ತಲಿತ್ತು.
ಇದನ್ನು ಓದಿದ್ದೀರಾ? ಪತಿ ಶ್ರೀಮಂತ: ವಿಚ್ಛೇದನ ಪರಿಹಾರವನ್ನು 5 ಲಕ್ಷದಿಂದ 1 ಕೋಟಿ ರೂ.ಗೆ ಏರಿಸಿದ ಕೋರ್ಟ್
ಇವೆಲ್ಲವುದರ ನಡುವೆ ಶಿಖಾ ಅವರ ಕುಟುಂಬದ ಮೇಲೆ ಭಾರೀ ಆರ್ಥಿಕ ಹೊರೆ ಉಂಟಾಯಿತು. ಆಕೆಯ ತಂದೆ ತನ್ನೆಲ್ಲ ಉಳಿತಾಯದ ವೆಚ್ಚವನ್ನು ಮಗಳ ವಿಚ್ಛೇದನದ ಕಾನೂನು ಹೋರಾಟಕ್ಕಾಗಿ ವ್ಯಯಿಸಿದ್ದರು.
ಈ ನಡುವೆ ಇತ್ತೀಚೆಗೆ ಶಿಖಾ ಅವರ ತಂದೆ ಹೃದಯಾಘಾತಕ್ಕೆ ಒಳಗಾಗಿದ್ದರು. ಈ ವೇಳೆ ಶಿಖಾ ಕುಟುಂಬಕ್ಕೆ ತೀವ್ರ ಆರ್ಥಿಕ ಸಂಕಷ್ಟವಿತ್ತು. ಕುಟುಂಬವು ಆರಂಭದಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿತ್ತು. ಇತ್ತ ಕೋರ್ಟ್‌ನಲ್ಲಿ ವಾದ-ವಿವಾದಗಳು ನಡೆಯುತ್ತಿತ್ತು.
ಈ ವೇಳೆ ತನ್ನ ಮಾವನ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದ ಸೌರಭ್ ಅವರನ್ನು ಗುರುಗ್ರಾಮದಲ್ಲಿರುವ ಉತ್ತಮ ಸುಸಜ್ಜಿತ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡಿದ್ದಾರೆ. ಇದರಿಂದಾಗಿ ಸಕಾಲಿಕ ಚಿಕಿತ್ಸೆ ಪಡೆದು ಶಿಖಾ ತಂದೆ ಗುಣಮುಖರಾಗಿದ್ದಾರೆ. ವಿಚ್ಛೇದನ ಪ್ರಕ್ರಿಯೆ ನಡುವೆಯೂ ಈ ಸಹಾಯ ಮಾಡಿರುವುದು ಶಿಖಾ ಮನಸ್ಸನ್ನು ಬದಲಾಯಿಸುವಂತೆ ಮಾಡಿದೆ.
ಮರುದಿನವೇ, ದಂಪತಿಗಳು ತಮ್ಮ ವಿಚ್ಛೇದನ ಪ್ರಕರಣದ ಮತ್ತೊಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಕೀಲರು ವರ್ಷಗಳ ಕಾಲ ಮಾಡಿದಂತೆ ತಮ್ಮ ವಾದಗಳನ್ನು ಮಂಡಿಸುತ್ತಲೇ ಇದ್ದರು. ನ್ಯಾಯಾಧೀಶರು ಸೌರಭ್‌ಗೆ ಇನ್ನೂ ವಿಚ್ಛೇದನ ಬೇಕೇ ಎಂದು ಕೇಳಿದಾಗ, ಸೌರಭ್ ಶಿಖಾ ಕಡೆಗೆ ನೋಡಿ ಮಂದಹಾಸ ಬೀರಿದ್ದರು. ಬಳಿಕ ಇಬ್ಬರೂ ಭಾವೋದ್ವೇಗಕ್ಕೆ ಒಳಗಾಗಿ ಅಪ್ಪಿಕೊಂಡಿದ್ದಾರೆ. ವಿಚ್ಛೇದನ ಪತ್ರಿ ಹರಿದು ತಾವು ಒಂದಾಗುವುದಾಗಿ ಹೇಳಿದ್ದಾರೆ. ಸದ್ಯ ಈ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್ ಆಗುತ್ತಿದೆ.





