ರಾಜಧಾನಿಯ ಜಂತರ್ ಮಂತರ್ ಬಳಿ ಜುಲೈ 20ರಂದು ನಡೆದ ಸಿಜೆಪಿ (CJP) ಪ್ರತಿಭಟನೆ ವೇಳೆ ಪೊಲೀಸರು ಸಾದಾ ಉಡುಪಿನಲ್ಲಿ ಲಾಠಿ ಹಿಡಿದು ಕಾರ್ಯಾಚರಣೆ ನಡೆಸಿದ್ದನ್ನು ದೆಹಲಿ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಇದು ಜನಸಂದಣಿಯನ್ನು ನಿಯಂತ್ರಿಸುವ ಉದ್ದೇಶಪೂರ್ವಕ ಯೋಜಿತ ತಂತ್ರವೇ ಹೊರತು ಅಕ್ರಮ ಬಲಪ್ರಯೋಗವಲ್ಲ ಎಂದು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಪೊಲೀಸ್ ಉಪ ಆಯುಕ್ತ (ಡಿಸಿಪಿ) ಸಚಿನ್ ಶರ್ಮಾ ಅವರು ನ್ಯಾಯಾಲಯಕ್ಕೆ ಪ್ರತಿ-ಅಫಿಡವಿಟ್ ಸಲ್ಲಿಸಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ವಿಶೇಷ ವಿಭಾಗ, ಕ್ರೈಂ ಬ್ರಾಂಚ್ ಹಾಗೂ ಸ್ಥಳೀಯ ಠಾಣೆಯ ಸಿಬ್ಬಂದಿಯನ್ನು ಗುಂಪಿನೊಳಗೆ ‘ಸ್ಪಾಟರ್ಸ್’ (ಮೇಲ್ವಿಚಾರಕರು) ಆಗಿ ಸಾದಾ ಉಡುಪಿನಲ್ಲಿ ನಿಯೋಜಿಸಲಾಗಿತ್ತು ಎಂದು ತಿಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂತಹ ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಇಂತಹ ಕಣ್ಗಾವಲು ತಂತ್ರವನ್ನು ಅನುಸರಿಸಲಾಗುತ್ತದೆ; ಸಾದಾ ಉಡುಪಿನಲ್ಲಿ ಕರ್ತವ್ಯ ನಿರ್ವಹಿಸುವುದು ಕಾನೂನುಬಾಹಿರವೇನಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಸತ್ ಭವನದ ಕಡೆಗೆ ಜಾಥಾ ನಡೆಸಲು ಅನುಮತಿ ನೀಡಿರಲಿಲ್ಲ. ಆದರೂ ಪ್ರತಿಭಟನಾಕಾರರು ಹಲವು ಹಂತದ ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗಲು ಯತ್ನಿಸಿದಾಗ ಮತ್ತು ಭದ್ರತಾ ಸಿಬ್ಬಂದಿಯ ರಕ್ಷಣಾ ಕವಚಗಳನ್ನು ಕಿತ್ತು ಅವರ ಮೇಲೆ ಹಲ್ಲೆ ನಡೆಸಿದಾಗ ಅನಿವಾರ್ಯವಾಗಿ ಬಲಪ್ರಯೋಗ ಮಾಡಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ನೆರೆದಿದ್ದ 30 ಸಾವಿರಕ್ಕೂ ಹೆಚ್ಚು ಜನರ ನಿಯಂತ್ರಣಕ್ಕೆ ಕೇವಲ 5,000 ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಸಂಘರ್ಷದಲ್ಲಿ 240ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹಾಗೂ ಸುಮಾರು 200 ಮಂದಿ ಪ್ರತಿಭಟನಾಕಾರರು ಮತ್ತು ಸಾರ್ವಜನಿಕರು ಗಾಯಗೊಂಡಿದ್ದಾರೆ ಎಂದು ವಿವರಿಸಲಾಗಿದೆ.
ಪ್ರತಿಭಟನೆಯಲ್ಲಿ ಸಮಾಜಘಾತುಕ ಶಕ್ತಿಗಳು ನುಸುಳಿದ್ದು, ಕೊಲೆ, ದರೋಡೆ, ಅತ್ಯಾಚಾರ ಹಾಗೂ ಪೋಕ್ಸೊ (POCSO) ಪ್ರಕರಣಗಳ ಹಿನ್ನೆಲೆಯುಳ್ಳ 2,873ಕ್ಕೂ ಅಧಿಕ ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಭಾಗಿಯಾಗಿದ್ದರು ಎಂದು ಅಫಿಡವಿಟ್‌ನಲ್ಲಿ ಆರೋಪಿಸಲಾಗಿದೆ. ಈ ಕುರಿತು ಕೂಲಂಕಷ ತನಿಖೆ ನಡೆಸಲು ದೆಹಲಿ ಪೊಲೀಸ್ ಆಯುಕ್ತರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ ಎಂದು ತಿಳಿಸಲಾಗಿದೆ.
ಪೊಲೀಸರು ಮೊಳೆ ಹೊಡೆದ ಲಾಠಿಗಳನ್ನು ಬಳಸಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿರುವ ಇಲಾಖೆ, ವಿಡಿಯೊದಲ್ಲಿ ಕಂಡುಬಂದ ಕೋಲು ಪ್ರತಿಭಟನಾಕಾರನೊಬ್ಬನ ಕೈಯಲ್ಲಿದ್ದ ರಾಷ್ಟ್ರಧ್ವಜ ಕಟ್ಟಿದ್ದ ಕೋಲೇ ಹೊರತು ಪೊಲೀಸರ ಬಳಿಯಿದ್ದ ಲಾಠಿಯಲ್ಲ ಎಂದು ಸ್ಪಷ್ಟಪಡಿಸಿದೆ. ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು (ಫೇಶಿಯಲ್ ರೆಕಗ್ನಿಷನ್) ಗಂಭೀರ ಅಪರಾಧ ಹಿನ್ನೆಲೆಯುಳ್ಳವರ ಪತ್ತೆಗಾಗಿ ನಿಯಮಾನುಸಾರ ಬಳಸಲಾಗಿದೆಯೇ ಹೊರತು ಅಡ್ಡಾದಿಡ್ಡಿಯಾಗಿ ಅಲ್ಲ ಎಂದಿರುವ ಪೊಲೀಸರು, ಘಟನೆಯ ತನಿಖೆಗೆ ಸುಪ್ರೀಂ ಕೋರ್ಟ್ ನೇಮಿಸುವ ಯಾವುದೇ ಸಮಿತಿಯೊಂದಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದ್ದಾರೆ.




