ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರ ಭಾಷಣದ ನಂತರ ವೇದಿಕೆ ಶುದ್ಧೀಕರಣಗೊಳಿಸಿದ ಘಟನೆಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಸ್ಪೃಶ್ಯತೆ ಆಚರಣೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ರಾಷ್ಟ್ರಪತಿಗಳಿಗೆ ಮನವಿ ಮಾಡಿದೆ.
ಉತ್ತರಾಖಂಡಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಭಾಷಣ ಮಾಡಿ ನಿರ್ಗಮಿಸಿದ ತಕ್ಷಣ, ಅವರು ಕುಳಿತಿದ್ದ ವೇದಿಕೆಯನ್ನು ಶುದ್ಧೀಕರಣಗೊಳಿಸಿದ ಘಟನೆಯು ದೇಶದ ನಾಗರಿಕರಲ್ಲಿ ತೀವ್ರ ಆಘಾತ ಮತ್ತು ನೋವನ್ನು ಉಂಟುಮಾಡಿದೆ. ಬಹಿರಂಗವಾಗಿ ನಡೆದ ಈ ಕೃತ್ಯವು ಕೇವಲ ಒಬ್ಬ ವ್ಯಕ್ತಿ ಅಥವಾ ರಾಜಕೀಯ ನಾಯಕನಿಗೆ ಮಾಡಿದ ಅವಮಾನವಲ್ಲ. ಬದಲಾಗಿ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಎಸಗಿದ ದ್ರೋಹವಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಭಾರತ ದೇಶವು ಬ್ರಿಟಿಷ್ ರಿಂದ ಸ್ವಾತಂತ್ರ್ಯಗೊಂಡರೂ ಈ ದೇಶವು ಮನುವಾದ(ಬ್ರಾಹ್ಮಣವಾದಿ)ಗಳಿಂದ ಇನ್ನೂ ಸ್ವಾತಂತ್ರ್ಯ ಗೊಂಡಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾರ್ಚ್ 20,1927 ರಂದು ಮಹಾಡ್ ಚೌಡರ್ ಕೆರೆ ಚಳವಳಿ ಸಂಧರ್ಭದಲ್ಲಿ ಕುಡಿಯುವ ನೀರು ಎಲ್ಲರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿ ಕೆರೆಯ ನೀರನ್ನು ಕುಡಿಯುವುದರ ಮೂಲಕ ಭಾರತಕ್ಕೆ ಸಾಮಾಜಿಕ ಸಮಾನತೆಯ ಕ್ರಾಂತಿಯ ಸಂದೇಶ ಸಾರಿದ್ದರು. ಆಗ ಮನುವಾದಿಗಳು ಆ ಕೆರೆಗೆ ಹಸುವಿನ ಸೆಗಣಿ, ಉಚ್ಚೆ, ಸುರಿದು ಶುದ್ದೀಕರಣ ಮಾಡಿದ್ದರು.
ಖರ್ಗೆಯವರು ಇದ್ದ ವೇದಿಕೆಯನ್ನು ಶುದ್ಧೀಕರಣ ಮಾಡಿರುವುದು ನೇರವಾಗಿ ಸಂವಿಧಾನದ ಉಲ್ಲಂಘನೆಯಾಗಿದೆ. ಭಾರತದ ಸಂವಿಧಾನದ ವಿಧಿ 17 ರ ಪ್ರಕಾರ ಯಾವುದೇ ರೂಪದ ಅಸ್ಪೃಶ್ಯತೆಯ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಘಟನೆಯು ಸಂವಿಧಾನ ನೀಡಿದ ಸಮಾನತೆಯ ಹಕ್ಕಿಗೆ ಅಪಮಾನ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ (SC/ST Prevention of Atrocities Act) ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ದೇಶದ ಪ್ರಥಮ ಪ್ರಜೆಯಾಗಿ ಹಾಗೂ ಸಂವಿಧಾನದ ರಕ್ಷಕರಾಗಿ ತಾವೂ ಈ ವಿಷಯದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಬೇಕು. ಉತ್ತರಾಖಂಡ ಸರ್ಕಾರದಿಂದ ಈ ಘಟನೆಯ ಕುರಿತು ಸಮಗ್ರ ವರದಿ ತರಿಸಿಕೊಂಡು, ಈ ರೀತಿಯ ಅಸ್ಪೃಶ್ಯತೆಯ ಮನಸ್ಥಿತಿ ಮೆರೆದ ಅಪರಾಧಿಗಳ ವಿರುದ್ಧ ಸೂಕ್ತ ತನಿಖೆ ಮತ್ತು ಶಿಸ್ತಿನ ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದರು.
ಹಕ್ಕೊತ್ತಾಯಗಳು:
ಘಟನೆಗೆ ಕಾರಣರಾದವರ ಹಾಗೂ ವೇದಿಕೆ ಶುದ್ಧೀಕರಣದ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ತಕ್ಷಣವೇ ನಿಷ್ಪಕ್ಷಪಾತ ಉನ್ನತ ಮಟ್ಟದ ತನಿಖೆ ನಡೆಸಬೇಕು.
ಸಂವಿಧಾನದ ವಿಧಿ 17ರ ಉಲ್ಲಂಘನೆ ಮತ್ತು ಜಾತಿ ಆಧಾರಿತ ತಾರತಮ್ಯ ಎಸಗಿರುವುದಕ್ಕಾಗಿ ತಪ್ಪಿತಸ್ಥರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆಯಡಿ (SC/ST Act) ಎಫ್.ಐ.ಆರ್ (FIR) ದಾಖಲಿಸಿ ಬಂಧಿಸಬೇಕು.
ಘಟನೆಗೆ ಹೊಣೆಗಾರರಾದ ವ್ಯಕ್ತಿಗಳು ಅಥವಾ ಸಂಘಟಕರು ಈ ದಲಿತ ವಿರೋಧಿ ಹಾಗೂ ತಾರತಮ್ಯದ ಕೃತ್ಯಕ್ಕಾಗಿ ಬಹಿರಂಗವಾಗಿ ದೇಶದ ಜನತೆಯ ಬಳಿ ಕ್ಷಮೆಯಾಚಿಸಬೇಕು.
ಉತ್ತರಾಖಂಡ ರಾಜ್ಯ ಸರ್ಕಾರವು ಈ ಘಟನೆಯ ಕುರಿತು ಸಮಗ್ರ ತನಿಖಾ ವರದಿಯನ್ನು ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳಿಗೆ ತಕ್ಷಣವೇ ಸಲ್ಲಿಸಬೇಕು.
ಸಾರ್ವಜನಿಕ ಜೀವನದಲ್ಲಿ ಮತ್ತು ರಾಜಕೀಯ ವೇದಿಕೆಗಳಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಜಾತಿ ಆಧಾರಿತ ತಾರತಮ್ಯ ಅಥವಾ ಅಸ್ಪೃಶ್ಯತೆ ಆಚರಣೆಯಾಗದಂತೆ ತಡೆಯಲು ಕಟ್ಟುನಿಟ್ಟಿನ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರಬೇಕು.
ಪ್ರತಿಭಟನೆ ವೇಳೆ, ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರವಿಕುಮಾರ್, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಲ್ಲಾಭಕ್ಷಿ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಬಣ್ಣದಮನೆ, ಸಣ್ಣ ಮಾರೆಪ್ಪ, ನಿಂಬಗಲ್ ರಾಮಕೃಷ್ಣ, ಡಿ.ವೆಂಕಟರಮಣ, ಮಾರೆಣ್ಣ, ಸಣ್ಣವೀರಪ್ಪ, ಶಿವಕುಮಾರ್, ಕಮಲಾಪುರದ ಕಣ್ಣೇಶ್, ಚಾಂದ್ ಬಾಷ, ಯುವ ಕಾಂಗ್ರಸ್ ನ ಪ್ರಧೀಪ್ ಬಾವಿಕಟ್ಟಿ, ಗಣೇಶ್ ಪಾಟಿಲ್, ಅರುಣ್ ಶೇಕ್, ಪ್ರಮೋದ್ ಪುಣ್ಯಮೂರ್ತಿ, ಉಂಡೇಕರ್ ಜಮೀರ್, ಅಲ್ತಾಫ್ ಶೇಕ್, ಸಜ್ಜದ್ ಖಾನ್, ಗಿರೀಶ್, ಮೋಹನ್, ಹುಲುಗಪ್ಪ, ಮಹಿಳಾ ಕಾಂಗ್ರೆಸ್ ನ ಯೋಗ ಲಕ್ಷ್ಮೀ, ಅನಿತಾ ಸೇರಿದಂತೆ ಅನೇಕರು ಇದ್ದರು.




