ತುಮಕೂರು ನಗರದ ಎನ್.ಆರ್. ಕಾಲೋನಿಯಲ್ಲಿರುವ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಸ್ಮಶಾನ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಿ, ಸ್ಮಶಾನ ಉಳಿಸುವಂತೆ ಹಾಗೂ ಪ್ರಕರಣದ ಪ್ರಮುಖ ಆರೋಪಿ ಸ್ಪೂರ್ತಿ ಡೆವಲಪರ್ಸ್ ಮಾಲೀಕ ಚಿದಾನಂದ್ ಅವರ ನ್ನು ಬಂಧಿಸುವಂತೆ ಆಗ್ರಹಿಸಿ ಎನ್.ಆರ್. ಕಾಲೋನಿ ಸ್ಮಶಾನ ಅಭಿವೃದ್ಧಿ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್, ವಿವಾದಿತ ಸರ್ವೇ ನಂಬರ್ 299/1ರ ಭೂಮಿ ಸರ್ಕಾರಿ ಬೀಳು ಜಾಗವೆಂದು ದಾಖಲೆಗಳಿಂದ ತಿಳಿದುಬಂದಿದೆ ಎಂದು ಹೇಳಿದರು.
ಸರ್ಕಾರಿ ಭೂಮಿ ಯಾವುದೇ ರೀತಿಯಲ್ಲಿ ಪರಭಾರೆಯಾಗಿದ್ದರೂ ಅಂತಹ ವ್ಯವಹಾರವನ್ನು ರದ್ದುಪಡಿಸುವ ಅಧಿಕಾರ ಸರ್ಕಾರಕ್ಕಿದೆ. ಇತ್ತೀಚೆಗೆ ಕೊಂಡಾಪುರದಲ್ಲಿ 106 ಎಕರೆ ಸರ್ಕಾರಿ ಜಾಗವನ್ನು ರಕ್ಷಿಸಿರುವುದು ಇದಕ್ಕೆ ಉದಾಹರಣೆಯಾಗಿದೆ. ಅದೇ ರೀತಿಯಲ್ಲಿ ಈ ಭೂಮಿಯ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಂಡು ಸ್ಮಶಾನದ ಸ್ವರೂಪವನ್ನು ರಕ್ಷಿಸಲಾಗುವುದು. ಸ್ಮಶಾನಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತದಿಂದ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 19 ಮತ್ತು 20ನೇ ವಾರ್ಡ್‌ಗಳ ಎನ್.ಆರ್. ಕಾಲೋನಿ, ನಿರ್ವಾಣಿ ಲೇಔಟ್ ಹಾಗೂ ಅಂಬೇಡ್ಕರ್ ನಗರ ಪ್ರದೇಶಗಳಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಸುಮಾರು 2 ಸಾವಿರ ಕುಟುಂಬಗಳು ವಾಸಿಸುತ್ತಿವೆ. ಈ ಪ್ರದೇಶದ ಜನರಿಗೆ ಇರುವ ಏಕೈಕ ಸ್ಮಶಾನವನ್ನು ಯಾವುದೇ ಅನುಮತಿ ಪಡೆಯದೆ ಅತಿಕ್ರಮಿಸಿ 25ಕ್ಕೂ ಹೆಚ್ಚು ಸಮಾಧಿಗಳನ್ನು ಧ್ವಂಸ ಮಾಡಿರುವುದು ಖಂಡನೀಯ ಎಂದರು.
ಈ ಸಂಬಂಧ ಈಗಾಗಲೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಎಫ್‌ಐಆರ್ ಆಗಿದ್ದು, ಕೆಲವು ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ. ಆದರೆ ಪ್ರಕರಣದ ಪ್ರಮುಖ ಆರೋಪಿ ಎಂದು ಆರೋಪಿಸಲಾಗಿರುವ ಸ್ಪೂರ್ತಿ ಡೆವಲಪರ್ಸ್ ಮಾಲೀಕ ಚಿದಾನಂದನನ್ನು ಇದುವರೆಗೆ ಬಂಧಿಸಿಲ್ಲ. ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮುದಾಯದ ಮುಖಂಡರಾದ ವಾಲೇಚಂದ್ರಯ್ಯ, ನರಸಿಂಹಯ್ಯ, ನಾರಾಯಣಮೂರ್ತಿ, ಹೆಚ್.ಆರ್. ಹನುಮಂತರಾಯಪ್ಪ, ಮೋಹನ್‌ಕುಮಾರ್, ನರಸಿಯಪ್ಪ, ಜಯಮೂರ್ತಿ, ಜಿ.ಬಿ. ವೆಂಕಟೇಶ್, ಬಾಲಕೃಷ್ಣ ಹಾಗೂ ರಘುಕೇಬಲ್ ಮಾತನಾಡಿ, ಸ್ಮಶಾನಕ್ಕೆ ಅಕ್ರಮವಾಗಿ ಪ್ರವೇಶಿಸಿ ಜೆಸಿಬಿ, ಟ್ರ್ಯಾಕ್ಟರ್ ಸೇರಿದಂತೆ ಯಂತ್ರೋಪಕರಣಗಳ ಮೂಲಕ ಪೂರ್ವಿಕರ ಸಮಾಧಿಗಳನ್ನು ನೆಲಸಮಗೊಳಿಸಲಾಗಿದೆ. ಇದರಿಂದ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಹಾಗೂ ಖರಾಬ್ ಭೂಮಿಯನ್ನು ಪರಿಶೀಲಿಸಿ ಸ್ಮಶಾನವನ್ನು ಸಮುದಾಯಕ್ಕೆ ಉಳಿಸಿಕೊಡಬೇಕು. ಸ್ಮಶಾನ ಭೂಮಿಗೆ ಸಂಬಂಧಿಸಿದ ದಾಖಲೆಗಳ ಸೃಷ್ಟಿ ಹಾಗೂ ಅಕ್ರಮ ಪರಭಾರೆ ಕುರಿತು ಸಮಗ್ರ ತನಿಖೆ ನಡೆಸಬೇಕು. ಪ್ರಮುಖ ಆರೋಪಿಗಳನ್ನು ಎರಡು ದಿನಗಳಲ್ಲಿ ಬಂಧಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೃಹತ್ ಪ್ರತಿಭಟನೆ ಹಾಗೂ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಟಿ. ಸಿರಾಮಯ್ಯ, ಕಿರಣ್‌ಕುಮಾರ್, ಅರುಣ್, ಗೋಪಾಲಯ್ಯ, ಕಿಶೋರ್, ಹರೀಶ್, ಅಭಿಷೇಕ್, ಮೋಹನ್, ಪಲ್ಟಿಕುಮಾರ್, ಅಂಜಿನಮೂರ್ತಿ, ದಯಾನಂದ್, ಯೋಗಿಶ್, ಮೂರ್ತಣ್ಣ, ಅಕ್ಷಯ್, ಕೆಂಪರಾಜು, ಸುನೀಲ್, ಆಕಾಶ್, ಕೃಷ್ಣ, ಮಂಜುನಾಥ್, ಪುಟ್ಟರಾಜು, ಚೆನ್ನ ಹಾಗೂ ಗಂಗಾಧರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಹಾಗೂ ರೂಪ ಶೆಟ್ಟಾಳಯ್ಯ ಸೇರಿದಂತೆ ಎನ್.ಆರ್. ಕಾಲೋನಿ, ನಿರ್ವಾಣಿ ಲೇಔಟ್ ಮತ್ತು ಅಂಬೇಡ್ಕರ್ ನಗರದ ಹಿರಿಯರು, ಮಹಿಳೆಯರು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




