ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ, ಸಾಮಾಜಿಕ ಜಾಲತಾಣದ ಖ್ಯಾತ ಇನ್‌ಫ್ಲುಯೆನ್ಸರ್ ಧ್ರುವ್ ರಾಠಿ ಅವರ ‘ಮಾನಹಾನಿಕರ’ ಯೂಟ್ಯೂಬ್ ವಿಡಿಯೋವನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ ಎಂದು ಗೂಗಲ್ ಸಂಸ್ಥೆ ಮಂಗಳವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಕೇಂದ್ರದ ‘ಕುಂದುಕೊರತೆ ಮೇಲ್ಮನವಿ ಸಮಿತಿ’ಯು ನೀಡಿದ ನಿರ್ದೇಶನದ ಮೇರೆಗೆ ವಿಡಿಯೋ ನಿರ್ಬಂಧದ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರಿದ್ದ ಪೀಠಕ್ಕೆ ಗೂಗಲ್ ಮಾಹಿತಿ ನೀಡಿದೆ. ಆದರೆ, ಈ ವಿಡಿಯೊವನ್ನು ಜಾಗತಿಕವಾಗಿ ನಿರ್ಬಂಧಿಸುವ ಕುರಿತಾದ ವಿಷಯವು ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ ಎಂದು ಗೂಗಲ್ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ.
ಗೂಗಲ್ ಕ್ರಮದ ಕುರಿತು ಪ್ರತಿಕ್ರಿಯಿಸಿದ ಅರ್ಜಿದಾರರಾದ ವಕೀಲೆ ಅಮಿತಾ ಸಚ್‌ದೇವ್ ಅವರು, “ಇದು ಆದೇಶದ ಭಾಗಶಃ ಪಾಲನೆಯಷ್ಟೇ,” ಎಂದು ವಾದಿಸಿದರು. “ಕಳೆದ ಮಾರ್ಚ್ 21ರಂದು ಧ್ರುವ್ ರಾಠಿ ಅವರು ಯೂಟ್ಯೂಬ್‌ನಲ್ಲಿ ವಿಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದರು. ಅದರಲ್ಲಿ ಶ್ರೀರಾಮ, ಶ್ರೀಕೃಷ್ಣ ಮತ್ತು ಸೀತಾಮಾತೆಯನ್ನು ಅವಮಾನಿಸುವ ಸುಳ್ಳು, ದಾರಿತಪ್ಪಿಸುವ ಹಾಗೂ ಪ್ರಚೋದನಕಾರಿ ಹೇಳಿಕೆಗಳಿದ್ದವು. ಆ ವಿಡಿಯೋ ಮಿಲಿಯನ್‌ಗಟ್ಟಲೆ (ಲಕ್ಷಾಂತರ) ವೀಕ್ಷಣೆಗಳನ್ನು ಪಡೆದುಕೊಂಡಿದೆ,” ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
“ಈ ಆಕ್ಷೇಪಾರ್ಹ ವಿಡಿಯೋವನ್ನು 24 ಗಂಟೆಗಳ ಒಳಗೆ ತೆಗೆದುಹಾಕುವಂತೆ ಜುಲೈ 15ರಂದೇ ಸಮಿತಿಯು ಗೂಗಲ್‌ಗೆ ನಿರ್ದೇಶನ ನೀಡಿತ್ತು. ಆದರೆ, ಆ ವೇದಿಕೆಯು ಆದೇಶವನ್ನು ಪಾಲಿಸುವಲ್ಲಿ ವಿಫಲವಾಗಿದೆ,” ಎಂದು ಅರ್ಜಿದಾರರು ದೂರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಶರ್ಮಾ ಅವರು, “ವಿಡಿಯೋ ಮೇಲಿನ ಜಾಗತಿಕ ತಡೆಯಾಜ್ಞೆಗೆ ಸಂಬಂಧಿಸಿದ ವಿಷಯವು ಈಗಾಗಲೇ ವಿಭಾಗೀಯ ಪೀಠದ ಮುಂದೆ ಬಾಕಿ ಇದೆ. ಪ್ರಸ್ತುತ ಗೂಗಲ್ ತನ್ನ ವ್ಯಾಪ್ತಿಯಲ್ಲಿ ಏನು ಮಾಡಬಹುದಿತ್ತೋ, ಅದನ್ನು ಈಗಾಗಲೇ ಮಾಡಿದೆ,” ಎಂದು ಅಭಿಪ್ರಾಯಪಟ್ಟು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಿದರು.




