ಉತ್ತರ ಕನ್ನಡ: ಮುಖ್ಯಮಂತ್ರಿಗಳ ನಿರ್ದೇಶನದಂತೆ ಪಾರದರ್ಶಕ ಹಾಗೂ ಜನಪರ ಆಡಳಿತ ನೀಡಲು ಜಿಲ್ಲೆಯ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವಾಗಿ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.
ಕ್ರಿಮ್ಸ್‌ನಲ್ಲಿ ನಡೆದ ಸರ್ಕಾರಿ ನೌಕರರು ಹಾಗೂ ಮುಖ್ಯಮಂತ್ರಿ ಅವರೊಂದಿಗಿನ ಸಂವಾದ ಕಾರ್ಯಕ್ರಮದ ಬಳಿಕ, ಜಿಲ್ಲೆಯ ಸರ್ಕಾರಿ ನೌಕರರು ಕೈಗೊಳ್ಳಬೇಕಾದ ಸಾರ್ವಜನಿಕ ಸೇವೆ, ಪಾರದರ್ಶಕ ಆಡಳಿತ ಹಾಗೂ ಇಲಾಖೆಗಳ ಕಾರ್ಯನಿರ್ವಹಣೆ ಕುರಿತು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು. ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ನಿಯೋಜಿತ ಕೇಂದ್ರಸ್ಥಾನದಲ್ಲೇ ಕಡ್ಡಾಯವಾಗಿ ವಾಸಿಸಬೇಕು.
ಕೇಂದ್ರಸ್ಥಾನದಿಂದ ಹೊರಗಡೆ ವಾಸವಿದ್ದು ಕರ್ತವ್ಯ ನಿರ್ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಆಗಸ್ಟ್ 15ರೊಳಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹೆಸರು, ಕಚೇರಿ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ವಾಸದ ವಿಳಾಸ ಸೇರಿದಂತೆ ಅಗತ್ಯ ಮಾಹಿತಿಯನ್ನು ಕ್ರೋಢೀಕರಿಸಿ ಅಧಿಕೃತ ಕೈಪಿಡಿ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು. ಸರ್ಕಾರಿ ಕಚೇರಿಗಳಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು. ಭ್ರಷ್ಟಾಚಾರದ ಕುರಿತು ಸಾರ್ವಜನಿಕರು ದೂರು ನೀಡಲು ಅನುಕೂಲವಾಗುವಂತೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಹಾಗೂ ಅಗತ್ಯ ಮಾಹಿತಿಯ ಫಲಕಗಳನ್ನು ಕಚೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು ಹೈಕೋರ್ಟ್ ಪೀಠಕ್ಕೆ ಉ.ಕನ್ನಡ ಸೇರ್ಪಡೆಗೆ ವಿರೋಧ: ಆ.13ರಂದು ಕಾರವಾರದಲ್ಲಿ ಪಾದಯಾತ್ರೆ
ಸಾರ್ವಜನಿಕರಿಂದ ಸಲ್ಲಿಕೆಯಾಗುವ ದೂರುಗಳ ಮೇಲೆ ಮುಖ್ಯಮಂತ್ರಿಗಳ ಕಚೇರಿಯಿಂದಲೂ ನಿಗಾ ವಹಿಸಲಾಗುತ್ತಿದೆ. ಕರ್ತವ್ಯ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವ ಉದ್ದೇಶದಿಂದ ‘ಪ್ರಜಾಸೇವೆ’ ಇಲಾಖೆ ರೂಪಿಸಲಾಗಿದ್ದು, ಹಿರಿಯ ಅಧಿಕಾರಿಗಳ ತಂಡ ಇದರ ಮೇಲ್ವಿಚಾರಣೆ ನಡೆಸಲಿದೆ. ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಸಭೆಗಳನ್ನು ನಡೆಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಶೇ.100ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಪರಿಶೀಲಿಸಿಕೊಳ್ಳಬೇಕು. ಹೆಸರು ಅಥವಾ ಇತರ ವಿವರಗಳಲ್ಲಿ ವ್ಯತ್ಯಾಸವಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ತಿದ್ದುಪಡಿ ಮಾಡಿಕೊಳ್ಳಬಹುದು ಎಂದರು. ಅನಗತ್ಯವಾಗಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ನಡೆದಿರುವ ಹೆಸರುಗಳ ಡಿಲೀಷನ್‌ಗಳ ಕುರಿತು ಬಿಎಲ್‌ಒಗಳು ಮರುಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಲಾಗುವ ನಿರ್ದೇಶನಗಳು ಹಾಗೂ ಸೂಚನೆಗಳು ಕೆಳಹಂತದ ಸಿಬ್ಬಂದಿಗೂ ತಲುಪಿ, ಅವುಗಳ ಸಮರ್ಪಕ ಅನುಷ್ಠಾನವಾಗಬೇಕು. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಣೆಗೆ ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರಿದ್ದು, ಅದನ್ನು ಮತ್ತಷ್ಟು ವೃದ್ಧಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.




