ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಅವರ ಪತ್ನಿ ಪಾಯಲ್ ಅಬ್ದುಲ್ಲಾ ಅವರ 31 ವರ್ಷಗಳ ವೈವಾಹಿಕ ಸಂಬಂಧಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಅಧಿಕೃತ ಅಂತ್ಯ ಹಾಡಿದೆ. ಕಳೆದ 15 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿಗೆ ಸಂವಿಧಾನದ 142ನೇ ವಿಧಿಯಡಿ ವಿಚ್ಛೇದನ ಮಂಜೂರು ಮಾಡಲಾಗಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠವು, ದಂಪತಿ ಪರಸ್ಪರ ಒಪ್ಪಿಗೆಯೊಂದಿಗೆ ಸ್ವತಂತ್ರ ಜೀವನ ನಡೆಸಲು ನಿರ್ಧರಿಸಿರುವುದನ್ನು ದಾಖಲಿಸಿಕೊಂಡು, ಷರತ್ತುಗಳೊಂದಿಗೆ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಒಮರ್ ಅಬ್ದುಲ್ಲಾ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ದಂಪತಿಯ ನಡುವಿನ ಕೌಟುಂಬಿಕ ವಿವಾದಗಳು ಇತ್ಯರ್ಥಗೊಂಡಿದ್ದು, ಇಬ್ಬರೂ ತಮ್ಮ ಜೀವನದಲ್ಲಿ ಪ್ರತ್ಯೇಕ ದಾರಿ ಹಿಡಿಯಲು ನಿರ್ಧರಿಸಿದ್ದಾರೆ. ಆದ್ದರಿಂದ ಸಂವಿಧಾನದ 142ನೇ ವಿಧಿಯಡಿ ವಿಚ್ಛೇದನ ಮಂಜೂರು ಮಾಡಬೇಕು ಎಂದು ಕೋರಿದರು. ವಿಚ್ಛೇದನದ ಬಳಿಕ ಬಾಕಿ ಇರುವ ಇತರೆ ಎಲ್ಲ ಪ್ರಕರಣಗಳನ್ನು ಹಿಂಪಡೆಯುವುದಾಗಿಯೂ ನ್ಯಾಯಾಲಯಕ್ಕೆ ತಿಳಿಸಲಾಯಿತು.
ಒಮರ್ ಅಬ್ದುಲ್ಲಾ ಅವರು 2024ರ ಜುಲೈನಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಾವು ಮತ್ತು ಪತ್ನಿ ಪಾಯಲ್ ಕಳೆದ 15 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ವೈವಾಹಿಕ ಸಂಬಂಧ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ವಿವಾಹವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ: ಮಧ್ಯಪ್ರದೇಶ | ಕಾಡಿಗೆ ಕಂಟಕವಾದ ಜೀರುಂಡೆ ಹಿಡಿದು ₹42 ಲಕ್ಷ ಗಳಿಸಿದ ಆದಿವಾಸಿಗಳು
ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್ 2023ರ ಡಿಸೆಂಬರ್‌ನಲ್ಲಿ ಒಮರ್ ಅಬ್ದುಲ್ಲಾ ಅವರ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತ್ತು. ಆ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಬಳಿಕ 2024ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ಪಾಯಲ್ ಅಬ್ದುಲ್ಲಾ ಅವರಿಂದ ಪ್ರತಿಕ್ರಿಯೆ ಕೋರಿತ್ತು. 2016ರಲ್ಲಿ ಕೌಟುಂಬಿಕ ನ್ಯಾಯಾಲಯವೂ ಒಮರ್ ಅಬ್ದುಲ್ಲಾ ಅವರ ಪತ್ನಿಯ ವಿರುದ್ಧ ಮಾಡಿದ್ದ ಆರೋಪಗಳು ಸಮರ್ಪಕವಾಗಿ ಸಾಬೀತಾಗಿಲ್ಲ ಎಂದು ಹೇಳಿ ವಿಚ್ಛೇದನ ನೀಡಲು ನಿರಾಕರಿಸಿತ್ತು.
ಒಮರ್ ಅಬ್ದುಲ್ಲಾ ಮತ್ತು ಪಾಯಲ್ ಅಬ್ದುಲ್ಲಾ ಅವರು 1994ರ ಸೆಪ್ಟೆಂಬರ್ 1ರಂದು ವಿವಾಹವಾಗಿದ್ದರು. 2009ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.



