ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಆಮ್ ಆದ್ಮಿ ಪಕ್ಷ (ಎಎಪಿ) ತಮ್ಮನ್ನು ಕೆಳಗಿಳಿಸಿದ ಬೆನ್ನಲ್ಲೇ, ಸಂಸದ ರಾಘವ್ ಚಡ್ಡಾ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ‘ಕೆಟ್ಟ ದೃಷ್ಟಿ’ ಇಮೋಜಿಯನ್ನು ಹಂಚಿಕೊಳ್ಳುವ ಮೂಲಕ ಮೌನವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರಾಜ್ಯಸಭೆಯಲ್ಲಿ ತಾವು ಈ ಹಿಂದೆ ಮಾಡಿದ್ದ ಭಾಷಣಗಳ ಪ್ರಮುಖ ತುಣುಕುಗಳಿರುವ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅವರು, ಯಾವುದೇ ಪದಗಳನ್ನು ಬರಯದೆ ಕೇವಲ ‘ಕೆಟ್ಟ ದೃಷ್ಟಿ’ ಇಮೋಜಿಯನ್ನು ಮಾತ್ರ ಬಳಸಿದ್ದಾರೆ. ಇಂದು ಪಕ್ಷವೂ ಅವರ ಸ್ಥಾನಕ್ಕೆ ಅಶೋಕ್ ಮಿತ್ತಲ್ ಅವರನ್ನು ರಾಜ್ಯಸಭೆಯ ನೂತನ ಉಪನಾಯಕರನ್ನಾಗಿ ನೇಮಕ ಮಾಡಿತ್ತು. ಈ ದಿಢೀರ್ ಬೆಳವಣಿಗೆಯಿಂದಾಗಿ ಎಎಪಿ ಹೈಕಮಾಂಡ್ ಮತ್ತು ರಾಘವ್ ಚಡ್ಡಾ ಅವರ ನಡುವಿನ ಆಂತರಿಕ ಭಿನ್ನಾಭಿಪ್ರಾಯದ ವದಂತಿಗಳಿಗೆ ಪುಷ್ಟಿ ಸಿಕ್ಕಾಂತಾಗಿದೆ.
ಇಷ್ಟೇ ಅಲ್ಲದೆ, ಪಕ್ಷದ ಕೋಟಾದಡಿ ರಾಜ್ಯಸಭೆಯಲ್ಲಿ ಮಾತನಾಡುವ ಸಮಯವನ್ನು ರಾಘವ್ ಚಡ್ಡಾ ಅವರಿಗೆ ನೀಡಬಾರದು ಎಂದು ಕೋರಿ ಆಮ್ ಆದ್ಮಿ ಪಕ್ಷವು ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಅಧಿಕಾರಕ್ಕಾಗಿ ಹಲವು ಅವತಾರಗಳು: ವೋಟಿಗಾಗಿ ನಾಯಕರು ಹಾಕುವ ‘ಹಗಲುವೇಷ’ಗಳೆಷ್ಟು?
ವರದಿಗಳ ಪ್ರಕಾರ, ಅಶಿಸ್ತು ಮತ್ತು ಪಕ್ಷದ ನಿಯಮಗಳಿಗೆ ಬದ್ಧರಾಗಿರದ ಕಾರಣಕ್ಕಾಗಿ ಚಡ್ಡಾ ಅವರನ್ನು ಮೂಲೆಗುಂಪು ಮಾಡಲಾಗಿದೆ ಎನ್ನಲಾಗಿದೆ. ಗಮನಾರ್ಹವೆಂದರೆ , ದೆಹಲಿ ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ಇತ್ತೀಚಿಗೆ ಬಿಡುಗಡೆಯಾದ ಬಳಿಕ ಚಡ್ಡಾ ಅವರು ಮೌನ ವಹಿಸಿದ್ದರು. ಅಲ್ಲದೆ, ಬಿಡುಗಡೆಯ ನಂತರ ಕೇಜ್ರಿವಾಲ್ ಅವರು ಪತ್ರಿಕಾಗೋಷ್ಠಿ ನಡೆಸಿದಾಗಲೂ ಚಡ್ಡಾ ಅವರು ಪಕ್ಷದ ಕಚೇರಿಗೆ ಗೈರಾಗಿದ್ದರು.
ಇದಕ್ಕೂ ಮುನ್ನ, 2024ರ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರು ಬಂಧನಕ್ಕೊಳಗಾದಾಗಲೂ ಚಡ್ಡಾ ಯಾವುದೇ ಹೇಳಿಕೆ ನೀಡಿರಲಿಲ್ಲ. ಬ್ರಿಟನ್‌ನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವುದಾಗಿ ಅವರು ಆಗ ಕಾರಣ ನೀಡಿದ್ದರು.
ಈ ನಡುವೆ, ರಾಜ್ಯಸಭೆಯ ನೂತನ ಉಪನಾಯಕ ಅಶೋಕ್ ಮಿತ್ತಲ್ ಅವರು ಚಡ್ಡಾ ಅವರ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಇದೊಂದು ಸಾಮಾನ್ಯ ಸಾಂಸ್ಥಿಕ ಪ್ರಕ್ರಿಯೆಯಾಗಿದ್ದು, ಇದರ ಹಿಂದೆ ಬೇರೆ ಯಾವುದೇ ನಿರ್ದಿಷ್ಟ ಕಾರಣಗಳಿಲ್ಲ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.




