ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶ ವಿಭಜನೆಯ ಸಂದರ್ಭವನ್ನು ಉಲ್ಲೇಖಿಸಿ, “ಪಶ್ಚಿಮ ಬಂಗಾಳವು ಪಾಕಿಸ್ತಾನಕ್ಕೆ ಸೇರಿಬಿಡುತ್ತಿತ್ತು. ಬಂಗಾಳವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂದು ವಾದಿಸಿದ್ದ ಶಕ್ತಿಗಳ ಮುಂದೆ ಕಾಂಗ್ರೆಸ್ ಮಂಡಿಯೂರಿತ್ತು. ಆದರೆ, ಶ್ಯಾಮಾಪ್ರಸಾದ್ ಮುಖರ್ಜಿ ಅವರು ಏಕಾಂಗಿಯಾಗಿ ಹೋರಾಡಿ ಅದನ್ನು ತಡೆದರು” ಎಂದು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮೋದಿ ಅವರ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ನಿಜಕ್ಕೂ ಬಂಗಾಳವನ್ನು ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿಕೊಂಡಿತ್ತೇ? ಮುಖರ್ಜಿ ಅವರು ಏಕಾಂಗಿಯಾಗಿ ಹೋರಾಟ ನಡೆಸಿ, ಬಂಗಾಳವನ್ನು ಭಾರತದಲ್ಲಿ ಉಳಿಸಿದರೇ? ಅಸಲಿ ಸತ್ಯವೇನು ಎಂಬುದನ್ನು ಪರಿಶೀಲಿಸೋಣ…
ಪ್ರಧಾನಿ ಮೋದಿ ಅವರ ಹೇಳಿಕೆ ಏನು?
ಜೂನ್ 20ರಂದು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ನಡೆದ ‘ಪಶ್ಚಿಮಬಂಗ ದಿವಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೋದಿ ಮಾತನಾಡಿದ್ದರು. “1947ರಲ್ಲಾದ ದೇಶ ವಿಭಜನೆಯ ಸಮಯದಲ್ಲಿ ಇಡೀ ಬಂಗಾಳವನ್ನು ಪಾಕಿಸ್ತಾನದ ಭಾಗವಾಗಿಸುವ ಸಂಚು ನಡೆಯುತ್ತಿತ್ತು. ಭಾರತ ವಿರೋಧಿ ಶಕ್ತಿಗಳು ಬಂಗಾಳವನ್ನು ದೇಶದಿಂದ ಬೇರ್ಪಡಿಸಲು ಬಯಸಿದ್ದವು. ಆ ಸಂದರ್ಭದಲ್ಲಿ ಕಾಂಗ್ರೆಸ್ ಆ ಸಂಚುಕೋರ ಶಕ್ತಿಗಳ ಮುಂದೆ ಮಂಡಿಯೂರಿತ್ತು. ಶರಣಾಗತಿಯ ನೀತಿಯನ್ನು ಅನುಸರಿಸಿತ್ತು. ಇಡೀ ಬಂಗಾಳವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಾಗಿತ್ತು. ಆದರೆ, ಹಿಂದೂ ಮಹಾಸಭಾದ ನಾಯಕರಾಗಿದ್ದ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ಏಕಾಂಗಿಯಾಗಿ ಹೋರಾಟ ನಡೆಸಿ ಆ ಸಂಚುವನ್ನು ವಿಫಲಗೊಳಿಸಿದರು ಪಶ್ಚಿಮ ಬಂಗಾಳವನ್ನು ಭಾರತದಲ್ಲೇ ಉಳಿಸಿಕೊಂಡರು” ಎನ್ನುವುದು ಪ್ರಧಾನಿ ಮೋದಿ ಅವರ ವಾದ.

ಸತ್ಯವೇನು? ಇತಿಹಾಸದ ವಾಸ್ತವ ಮತ್ತು ಅಂದಿನ ಬಂಗಾಳದ ಪರಿಸ್ಥಿತಿ
1947ರ ವಿಭಜನೆಗೂ ಮುನ್ನ ಅವಿಭಜಿತ ಬಂಗಾಳದಲ್ಲಿ ಮುಸ್ಲಿಮರ ಜನಸಂಖ್ಯೆ ಸುಮಾರು 54ರಿಂದ 55% ಇತ್ತು. ಹಿಂದೂಗಳ ಜನಸಂಖ್ಯೆ ಸುಮಾರು 45%ರಷ್ಟಿತ್ತು. ಬಂಗಾಳವು ಮುಸ್ಲಿಂ ಬಹುಸಂಖ್ಯಾತ ಪ್ರಾಂತ್ಯವಾಗಿದ್ದರಿಂದ, ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಇಡೀ ಬಂಗಾಳವನ್ನು ಪಾಕಿಸ್ತಾನಕ್ಕೆ ಸೇರಿಸಲು ತೀವ್ರ ಪ್ರಯತ್ನ ನಡೆಸುತ್ತಿತ್ತು.
ಇದೇ ಸಂದರ್ಭದಲ್ಲಿ, ಬಂಗಾಳದ ಅಂದಿನ ಮುಖ್ಯಮಂತ್ರಿ (ಪ್ರಧಾನಿ) ಎಚ್. ಎಸ್. ಸುಹ್ರಾವರ್ದಿ ಮತ್ತು ಕಾಂಗ್ರೆಸ್ ನಾಯಕ ಶರತ್ ಚಂದ್ರ ಬೋಸ್ (ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹಿರಿಯ ಸೋದರ) ಸೇರಿ ಬಂಗಾಳವನ್ನು ವಿಭಜಿಸದೆ, ಅದನ್ನೊಂದು ಸ್ವತಂತ್ರ ಸಾರ್ವಭೌಮ ದೇಶವನ್ನಾಗಿ ಮಾಡಬೇಕು ಎಂಬ ‘ಯುನೈಟೆಡ್ ಬಂಗಾಳ’ (ಬಂಗಾಳ ಒಕ್ಕೂಟ) ಪ್ರಸ್ತಾಪವನ್ನು ಮುಂದಿಟ್ಟಿದ್ದರು.
ಆದರೆ, ಬಂಗಾಳವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಅಥವಾ ಪ್ರತ್ಯೇಕ ರಾಷ್ಟ್ರವಾಗಿಸಲು ಕಾಂಗ್ರೆಸ್ ಸಿದ್ದವಿರಲಿಲ್ಲ. ಒಂದು ವೇಳೆ, ಇಡೀ ಬಂಗಾಳವು ಪಾಕಿಸ್ತಾನಕ್ಕೆ ಸೇರಿದರೆ ಅಥವಾ ಅದು ಪ್ರತ್ಯೇಕ ದೇಶವಾದರೆ ಅಲ್ಲಿನ ಹಿಂದು ಅಲ್ಪಸಂಖ್ಯಾತರು ಮುಸ್ಲಿಂ ಲೀಗ್‌ನ ಆಡಳಿತದಡಿಯಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ಅರಿತಿದ್ದರು.
1947ರ ಏಪ್ರಿಲ್ 4ರಂದು ತರಲಾದ ಬಂಗಾಳ ಪ್ರಾಂತೀಯ ಕಾಂಗ್ರೆಸ್ ಸಮಿತಿಯ (BPCC) ಅಧಿಕೃತ ನಿರ್ಣಯದಲ್ಲಿ; “ದೇಶ ವಿಭಜನೆಯಾಗುವುದು ಖಚಿತವಾದರೆ, ಬಂಗಾಳವನ್ನೂ ಕಡ್ಡಾಯವಾಗಿ ವಿಭಜಿಸಬೇಕು ಮತ್ತು ಹಿಂದು ಬಹುಸಂಖ್ಯಾತರಿರುವ ಪಶ್ಚಿಮ ಭಾಗವನ್ನು (ಇಂದಿನ ಪಶ್ಚಿಮ ಬಂಗಾಳ) ಭಾರತದಲ್ಲೇ ಉಳಿಸಿಕೊಳ್ಳಬೇಕು” ಎಂದು ಕಾಂಗ್ರೆಸ್ ಅಧಿಕೃತವಾಗಿ ಒತ್ತಾಯಿಸಿತ್ತು.
ಅಂದು ಭಾರತವನ್ನು ಒಗ್ಗೂಡಿಸುವ ಪ್ರಕ್ರಿಯೆಯ ರೂವಾರಿಗಳಾಗಿದ್ದ ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೂ ಸಹ ಸುಹ್ರಾವರ್ದಿ ಅವರ ‘ಸ್ವತಂತ್ರ ಬಂಗಾಳ’ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿದ್ದರು. ಬಂಗಾಳದ ವಿಭಜನೆಯೇ ಪಶ್ಚಿಮ ಬಂಗಾಳದ ಹಿಂದುಗಳನ್ನು ರಕ್ಷಿಸಲು ಇರುವ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದ್ದರು.
ಶ್ಯಾಮಾಪ್ರಸಾದ್ ಮುಖರ್ಜಿ ಅವರ ಪಾತ್ರವೇನು? ಅವರು ಏಕಾಂಗಿ ಹೋರಾಟ ಮಾಡಿದ್ದರೇ?
ಪಶ್ಚಿಮ ಬಂಗಾಳವನ್ನು ಭಾರತದಲ್ಲಿ ಉಳಿಸಿಕೊಳ್ಳಲು ಡಾ. ಶ್ಯಾಮಾಪ್ರಸಾದ್ ಮುಖರ್ಜಿ ಅವರು ಹೋರಾಟ ಮಾಡಿದ್ದು ಸತ್ಯ. ಆದರೆ, ಅವರು ಏಕಾಂಗಿಯಾಗಿ ಹೋರಾಟ ಮಾಡಿರಲಿಲ್ಲ. ಮುಖರ್ಜಿ ನೇತೃತ್ವದ ಹಿಂದು ಮಹಾಸಭಾ ಮತ್ತು ಬಂಗಾಳದ ಪ್ರಾಂತೀಯ ಕಾಂಗ್ರೆಸ್ ನಾಯಕರು ಒಟ್ಟಾಗಿಯೇ ಈ ಹೋರಾಟವನ್ನು ಮುನ್ನಡೆಸಿದ್ದರು. ಕಾಂಗ್ರೆಸ್ ನಾಯಕರಾದ ಕಿರಣ್ ಶಂಕರ್ ರಾಯ್, ಡಾ. ಬಿ. ಸಿ. ರಾಯ್ ಸೇರಿದಂತೆ ಬಂಗಾಳದ ಬಹುಸಂಖ್ಯಾತ ಹಿಂದು ಉದ್ಯಮಿಗಳು, ಬುದ್ಧಿಜೀವಿಗಳು ಹಾಗೂ ಸಾರ್ವಜನಿಕರು ಬಂಗಾಳದ ವಿಭಜನೆಯ ಪರವಾಗಿ ಜಂಟಿ ಒಕ್ಕೊರಲ ದನಿ ಎತ್ತಿದ್ದರು.
ಈ ಲೇಖನ ಓದಿದ್ದೀರಾ?: ವಿದ್ಯುತ್ ಖಾಸಗೀಕರಣ: ಉಚಿತ ಯೋಜನೆಗಳ ಅಂತ್ಯಕ್ಕೆ ನಾಂದಿ
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯು ‘ಅರ್ಧ ಸತ್ಯ’ ಮತ್ತು ರಾಜಕೀಯ ಪ್ರೇರಿತವಾಗಿದೆ. ಪಶ್ಚಿಮ ಬಂಗಾಳವು ಭಾರತದ ಭಾಗವಾಗಿ ಉಳಿಯುವಲ್ಲಿ ಶ್ಯಾಮಾಪ್ರಸಾದ್ ಮುಖರ್ಜಿ ಅವರ ಕೊಡುಗೆ ಇದೆ ಎಂಬುದು ನಿಜವೇ ಆಗಿದ್ದರೂ, ಅವರು ಏಕಾಂಗಿಯಾಗಿ ಹೋರಾಡಿದರು ಮತ್ತು ಕಾಂಗ್ರೆಸ್ ಮಂಡಿಯೂರಿತ್ತು ಎನ್ನುವುದು ಅಷ್ಟೇ ಸುಳ್ಳು.
ವಾಸ್ತವದಲ್ಲಿ, ಮುಸ್ಲಿಂ ಲೀಗ್‌ನ ಆಸೆಗಳಿಗೆ ತಣ್ಣೀರೆರಚಲು ಮತ್ತು ಹಿಂದು ಬಹುಸಂಖ್ಯಾತ ಪಶ್ಚಿಮ ಬಂಗಾಳವನ್ನು ಭಾರತದಲ್ಲೇ ಉಳಿಸಿಕೊಳ್ಳಲು ಅಂದಿನ ಕಾಂಗ್ರೆಸ್ ಕೂಡ ಬಲವಾಗಿ ಹೋರಾಟ ನಡೆಸಿತ್ತು. ಅದರ ಪರಿಣಾಮವಾಗಿಯೇ, ಪಶ್ಚಿಮ ಬಂಗಾಳವು ಭಾರತದ ಭಾಗಿವಾಗಿ ಉಳಿದಿದೆ ಎಂಬುದೇ ಸತ್ಯ.



