ತಂತ್ರಜ್ಞಾನ ಸುಧಾರಿಸಿ, ನಷ್ಟ ಕಡಿಮೆಯಾಗಬಹುದು ಎಂಬ ವಾದಗಳಿದ್ದರೂ, ಸಾರ್ವಜನಿಕರಲ್ಲಿ ಹತ್ತಾರು ಅನುಮಾನಗಳು ಮೂಡಿವೆ. ಮುಖ್ಯವಾಗಿ, ಭವಿಷ್ಯದಲ್ಲಿ ವಿದ್ಯುತ್ ದರ ದುಬಾರಿಯಾಗಬಹುದು ಮತ್ತು ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆಗಳು ನಿಂತುಹೋಗಬಹುದು ಎಂಬ ಭೀತಿ ರೈತರು ಹಾಗೂ ಬಡ ಕುಟುಂಬಗಳನ್ನು ಕಾಡುತ್ತಿದೆ.
ಕರ್ನಾಟಕದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯು ರಾಜ್ಯದಲ್ಲಿ ಸದ್ಯ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಟಾಟಾ ಪವರ್ ಕಂಪನಿಯು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮಾಡಲು ಅನುಮತಿ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ.
ಆದರೆ, ವಿದ್ಯುತ್ ಎಂಬುದು ಕೇವಲ ವಾಣಿಜ್ಯ ವ್ಯವಹಾರವಲ್ಲದೆ ಕೃಷಿ, ಕೈಗಾರಿಕೆ ಹಾಗೂ ಜನಸಾಮಾನ್ಯರ ದೈನಂದಿನ ಬದುಕಿಗೆ ಬೇಕಾದ ಮೂಲಭೂತ ಸೌಲಭ್ಯವಾಗಿರುವುದರಿಂದ, ಈ ಖಾಸಗೀಕರಣದ ಪ್ರಯತ್ನಕ್ಕೆ ರೈತ ಸಂಘಟನೆಗಳು, ವಿದ್ಯುತ್ ಇಲಾಖೆಯ ನೌಕರರು ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಈ ವ್ಯವಸ್ಥೆಯನ್ನು ಬೆಂಬಲಿಸುವವರು ಖಾಸಗಿ ಕಂಪನಿಗಳ ಪ್ರವೇಶದಿಂದ ತಂತ್ರಜ್ಞಾನ ಸುಧಾರಿಸುತ್ತದೆ ಮತ್ತು ವಿದ್ಯುತ್ ಕಳ್ಳತನ ಹಾಗೂ ಪ್ರಸರಣ ನಷ್ಟ ಕಡಿಮೆಯಾಗುತ್ತದೆ ಎಂದು ವಾದಿಸುತ್ತಾರೆ. ಅಲ್ಲದೆ, ಪ್ರಸ್ತುತ ರಾಜ್ಯದ ಸರ್ಕಾರಿ ಎಸ್ಕಾಂಗಳು ಸಾವಿರಾರು ಕೋಟಿ ರೂಪಾಯಿ ನಷ್ಟದಲ್ಲಿರುವುದರಿಂದ ಖಾಸಗಿ ಹೂಡಿಕೆಯು ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಬಹುದು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ಸಿಗಬಹುದು ಎಂಬುದು ಅವರ ಆಶಯವಾಗಿದೆ.
ಆದರೆ, ಖಾಸಗೀಕರಣವನ್ನು ವಿರೋಧಿಸುವವರು ಹತ್ತಾರು ಆತಂಕಗಳನ್ನು ಮುಂದಿಡುತ್ತಿದ್ದಾರೆ. ಖಾಸಗಿ ಕಂಪನಿಗಳು ಸಾಮಾಜಿಕ ಜವಾಬ್ದಾರಿಗಿಂತ ತಮ್ಮ ಲಾಭಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಭವಿಷ್ಯದಲ್ಲಿ ವಿದ್ಯುತ್ ದರ ದುಬಾರಿಯಾಗಬಹುದು ಎಂಬ ಭೀತಿ ಇದೆ. ಮುಖ್ಯವಾಗಿ, ಪ್ರಸ್ತುತ ಸರ್ಕಾರ ನೀಡುತ್ತಿರುವ ರೈತರ ಉಚಿತ ವಿದ್ಯುತ್ ಯೋಜನೆ ಹಾಗೂ ಬಡವರಿಗಾಗಿ ಇರುವ ಕಲ್ಯಾಣ ಯೋಜನೆಗಳು ಮುಂದುವರಿಯುತ್ತವೆಯೇ ಎಂಬ ದೊಡ್ಡ ಅನುಮಾನ ಮೂಡಿದೆ. ಇದರೊಂದಿಗೆ ಸರ್ಕಾರಿ ಎಸ್ಕಾಂಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ನೌಕರರ ಉದ್ಯೋಗ ಭದ್ರತೆಗೂ ಧಕ್ಕೆಯಾಗುವ ಆತಂಕ ಎದುರಾಗಿದೆ.
ಈ ಮಧ್ಯೆ, ಬೆಸ್ಕಾಂ, ಮೆಸ್ಕಾಂ ಸೇರಿದಂತೆ ರಾಜ್ಯದ ಐದು ಸರ್ಕಾರಿ ವಿದ್ಯುತ್ ಕಂಪನಿಗಳೂ ಈ ಅರ್ಜಿಗೆ ಕಾನೂನಾತ್ಮಕವಾಗಿ ಆಕ್ಷೇಪಣೆ ಸಲ್ಲಿಸಿವೆ. ಈಗಾಗಲೇ ಇರುವ ವ್ಯವಸ್ಥೆಯೊಳಗೆ ಮತ್ತೊಂದು ಖಾಸಗಿ ಕಂಪನಿಗೆ ಅವಕಾಶ ನೀಡಿದರೆ ಆಡಳಿತಾತ್ಮಕ ಗೊಂದಲಗಳು ಸೃಷ್ಟಿಯಾಗುತ್ತವೆ ಎನ್ನುವುದು ಅವರ ವಾದವಾಗಿದೆ.
ಈ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು “ಈಗಾಗಲೇ ಕೃಷಿ ಬಂಡವಾಳ ಹೆಚ್ಚಾಗಿ, ರೈತರು ಪರದಾಡುತ್ತಿದ್ದಾರೆ. ಇಂತಹ ಕಾಲದಲ್ಲಿ ಐಪಿ ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿದರೆ ವಿದ್ಯುತ್ ಮತ್ತಷ್ಟು ದುಬಾರಿಯಾಗಲಿದೆ. ಇದರಿಂದ ರೈತರು ವಿದ್ಯುತ್ ಬಿಲ್ ಕಟ್ಟಲಾಗದೆ ಆತ್ಮಹತ್ಯೆಯ ದಾರಿ ತುಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಜಿ. ಎಸ್. ಶರಣು “ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ವಹಿಸುವ ನಿರ್ಧಾರವು ಅತ್ಯಂತ ಕಳವಳಕಾರಿಯಾಗಿದೆ. ರೈತರಿಗೆ ಉಚಿತ ವಿದ್ಯುತ್, ಗ್ರಾಮೀಣ ಭಾಗಗಳಿಗೆ ನಿರಂತರ ಪೂರೈಕೆ ಹಾಗೂ ಬಡ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ವಿದ್ಯುತ್ ನೀಡುವುದು ಸರ್ಕಾರದ ಸಾಮಾಜಿಕ ಜವಾಬ್ದಾರಿ. ಲಾಭಕೋರತನದ ಖಾಸಗಿ ಕಂಪನಿಗಳಿಂದ ಸಾರ್ವಜನಿಕ ಕಲ್ಯಾಣ ಸಾಧ್ಯವಿಲ್ಲ. ಸರ್ಕಾರ ಸುಧಾರಣೆಯ ನೆಪದಲ್ಲಿ ಖಾಸಗೀಕರಣಕ್ಕೆ ಮುಂದಾಗುವ ಬದಲು, ಸಾರ್ವಜನಿಕ ವಲಯದ ಎಸ್ಕಾಂಗಳಲ್ಲಿರುವ ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ಲೋಪಗಳನ್ನು ಸರಿಪಡಿಸಬೇಕು. ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು” ಎಂದು ಪ್ರತಿಕ್ರಿಯಿಸಿದರು.
“ಇಂದು 19 ಜಿಲ್ಲೆಗಳ ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಲು ಹೊರಟಿರುವುದು ರೈತರು, ಕಾರ್ಮಿಕರು ಮತ್ತು ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ರೈತರ ಉಚಿತ ವಿದ್ಯುತ್, ಬಡವರ ಸಬ್ಸಿಡಿ ಮತ್ತು ಎಸ್ಕಾಂ ನೌಕರರ ಉದ್ಯೋಗ ಭದ್ರತೆಗೆ ಧಕ್ಕೆಯಾಗದಂತೆ ಸರ್ಕಾರ ಕಾನೂನುಬದ್ಧ ಭರವಸೆ ನೀಡಬೇಕು. ಜನರೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಇಂತಹ ನಿರ್ಧಾರ ತರುವುದು ಸರಿಯಲ್ಲ” ಎಂದು ಕಾನೂನು ವಿದ್ಯಾರ್ಥಿ ದೇವರಾಜು ಆರ್ ತಿಳಿಸಿದರು.
ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆ ತರಲು ಖಾಸಗೀಕರಣ ಒಂದೇ ದಾರಿಯಲ್ಲ. ಸರ್ಕಾರಿ ಕಂಪನಿಗಳನ್ನೇ ಆರ್ಥಿಕವಾಗಿ ಬಲಪಡಿಸಿ, ಪಾರದರ್ಶಕತೆ ತರುವ ಮೂಲಕವೂ ಉತ್ತಮ ಸೇವೆ ನೀಡಬಹುದು. ಹೀಗಾಗಿ, ಸರ್ಕಾರ ಮತ್ತು ವಿದ್ಯುತ್ ನಿಯಂತ್ರಣ ಆಯೋಗವು ಲಕ್ಷಾಂತರ ರೈತರು ಹಾಗೂ ಜನಸಾಮಾನ್ಯರ ಹಿತದೃಷ್ಟಿಯಿಂದ ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಅತ್ಯಂತ ಎಚ್ಚರಿಕೆಯಿಂದ ಸಮತೋಲಿತ ತೀರ್ಮಾನ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.




