ಅಂತರ್ಜಾತಿ ವಿವಾಹವಾದಳು ಎಂಬ ಕಾರಣಕ್ಕೆ 21 ವರ್ಷದ ಸ್ವಂತ ಮಗಳನ್ನೇ ಗುಂಡಿಕ್ಕಿ ಕೊಂದಿದ್ದ ದೆಹಲಿ ಮೂಲದ ದಂಪತಿಗೆ ಮಥುರಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಸುಮಾರು ನಾಲ್ಕು ವರ್ಷಗಳ ಹಿಂದೆ (2022ರ ನವೆಂಬರ್) ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ‘ಆಯುಷಿ ಹತ್ಯೆ’ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗಳಾದ ಆಕೆಯ ತಂದೆ ನಿತೇಶ್ ಯಾದವ್ ಹಾಗೂ ತಾಯಿ ಬ್ರಜಬಾಲಾ ಅವರನ್ನು ದೋಷಿಗಳು ಎಂದು ಪರಿಗಣಿಸಿದೆ. ಸ್ವಂತ ಮಗಳನ್ನೇ ಬರ್ಬರವಾಗಿ ಕೊಂದಿದ್ದಲ್ಲದೆ, ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಘಟನೆಯ ಹಿನ್ನೆಲೆ:
ದೆಹಲಿಯ ಕಾಲೇಜೊಂದರಲ್ಲಿ ಬಿ.ಸಿ.ಎ. (BCA) ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ಆಯುಷಿ, ಭರತ್‌ಪುರ ಮೂಲದ ತನ್ನ ಸಹಪಾಠಿ ಛತ್ರಪಾಲ್ ಗುರ್ಜರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಪೋಷಕರ ವಿರೋಧದ ನಡುವೆಯೂ ಆರ್ಯ ಸಮಾಜ ಮಂದಿರದಲ್ಲಿ ಆತನನ್ನು ವಿವಾಹವಾಗಿದ್ದಳು. ಮಗಳ ಈ ಅಂತರ್ಜಾತಿ ಪ್ರೇಮ ವಿವಾಹದಿಂದ ಪೋಷಕರು ತೀವ್ರ ಆಕ್ರೋಶಗೊಂಡಿದ್ದರು. ಸಮಾಜದಲ್ಲಿ ತಮ್ಮ ಮರ್ಯಾದೆ ಹಾಳಾಯಿತು ಎಂದು ಕುದಿಯುತ್ತಿದ್ದರು.
2022ರ ನವೆಂಬರ್ 17ರಂದು ಪತಿಯ ಮನೆಯಿಂದ ಹಿಂದಿರುಗಿದ್ದ ಆಯುಷಿ ಹಾಗೂ ಪೋಷಕರ ನಡುವೆ ಇದೇ ವಿಚಾರವಾಗಿ ತೀವ್ರ ವಾಗ್ವಾದ ನಡೆದಿತ್ತು. “ನಾನು ಪ್ರಾಪ್ತ ವಯಸ್ಕಳು, ನನ್ನ ನಿರ್ಧಾರ ತೆಗೆದುಕೊಳ್ಳಲು ನನಗೆ ಹಕ್ಕಿದೆ” ಎಂದು ಆಯುಷಿ ವಾದಿಸಿದ್ದಳು. ಇದರಿಂದ ಕೋಪೋದ್ರಿಕ್ತನಾದ ತಂದೆ ನಿತೇಶ್ ಯಾದವ್, ತನ್ನ ಬಳಿಯಿದ್ದ ಪರವಾನಗಿ ಹೊಂದಿದ್ದ ರಿವಾಲ್ವರ್‌ನಿಂದ ಮಗಳ ಎದೆ ಮತ್ತು ತಲೆಗೆ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಭೀಕರ ಕೃತ್ಯಕ್ಕೆ ತಾಯಿ ಬ್ರಜಬಾಲಾ ಕೂಡ ಮೂಕಸಾಕ್ಷಿಯಾಗಿ, ಬಳಿಕ ಸಾಕ್ಷ್ಯ ನಾಶಕ್ಕೆ ಪತಿಗೆ ಸಾಥ್ ನೀಡಿದ್ದಳು.
ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದ್ದ ಶವ:
ಹತ್ಯೆಯ ಬಳಿಕ ಆಯುಷಿಯ ಮೃತದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ, ಕೆಂಪು ಬಣ್ಣದ ದೊಡ್ಡ ಟ್ರಾಲಿ ಬ್ಯಾಗ್‌ನಲ್ಲಿ (ಸೂಟ್‌ಕೇಸ್) ತುಂಬಲಾಗಿತ್ತು. ಬಳಿಕ ದೆಹಲಿಯಿಂದ ಕಾರಿನಲ್ಲಿ ಶವವನ್ನು ತಂದು ಉತ್ತರ ಪ್ರದೇಶದ ಮಥುರಾ ಬಳಿಯ ಯಮುನಾ ಎಕ್ಸ್‌ಪ್ರೆಸ್‌ವೇ ಸರ್ವಿಸ್ ರಸ್ತೆಯ ಪೊದೆಯಲ್ಲಿ ಎಸೆದು ದಂಪತಿ ಪರಾರಿಯಾಗಿದ್ದರು.
ನವೆಂಬರ್ 18ರಂದು ರಕ್ತಸಿಕ್ತವಾಗಿದ್ದ ಟ್ರಾಲಿ ಬ್ಯಾಗ್ ಅನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಪರಿಚಿತ ಶವವಾಗಿ ಪತ್ತೆಯಾಗಿದ್ದ ಆಯುಷಿಯ ಗುರುತನ್ನು ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಕರೆಗಳ ಮಾಹಿತಿ ಹಾಗೂ ವಿವಾಹ ನೋಂದಣಿ ಪ್ರಮಾಣಪತ್ರದಂತಹ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಮಥುರಾ ಪೊಲೀಸರು ಭೇದಿಸಿದ್ದರು.
ಬಳಿಕ ಪೋಷಕರನ್ನೇ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಹತ್ಯೆಯ (Honour Killing) ಕರಾಳ ಸತ್ಯ ಬಟಾಬಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡು, ಹತ್ಯೆಗೆ ಬಳಸಿದ್ದ ರಿವಾಲ್ವರ್ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದ ಪೊಲೀಸರು, ನ್ಯಾಯಾಲಯಕ್ಕೆ ಬಲವಾದ ಸಾಕ್ಷ್ಯಾಧಾರಗಳೊಂದಿಗೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು. ಇದೀಗ ನಾಲ್ಕು ವರ್ಷಗಳ ಕಾನೂನು ಹೋರಾಟದ ಬಳಿಕ, ಹೆತ್ತ ಮಗಳನ್ನೇ ಕೊಂದ ಅಪರಾಧಿಗಳಿಗೆ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ.




