ಸಾಮಾಜಿಕ ನ್ಯಾಯ ಸೇರಿದಂತೆ ಪಕ್ಷದ ಪ್ರಮುಖ ವಿಚಾರಗಳ ಕುರಿತು ಕಾಂಗ್ರೆಸ್‌ನ ನಿಲುವನ್ನು ನಾಯಕರು ಹಾಗೂ ಪದಾಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡುತ್ತಿದ್ದಾರೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡುವಂತೆ ಕಾಂಗ್ರೆಸ್ ಸಂಸದ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಪಕ್ಷದ ಹಲವು ನಾಯಕರು ಸಾರ್ವಜನಿಕವಾಗಿ ಪಕ್ಷದ ನಿಲುವುಗಳನ್ನು ಸಮರ್ಥವಾಗಿ ಮುಂದಿಡುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲೇ ರಾಹುಲ್ ಗಾಂಧಿ ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಹಲ್ದ್ವಾನಿ ಘಟನೆ ಬಗ್ಗೆ ಖರ್ಗೆ ಅಸಮಾಧಾನ
ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳವನ್ನು ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತರು ‘ಶುದ್ಧೀಕರಣ’ ಮಾಡಿದ್ದರು ಎನ್ನಲಾದ ಘಟನೆ ಬಗ್ಗೆಯೂ ಖರ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಜಾತಿ ತಾರತಮ್ಯದ ಕೃತ್ಯ ಎಂದು ಬಣ್ಣಿಸಿದ ಅವರು, ಈ ವಿಚಾರದಲ್ಲಿ ಪಕ್ಷದಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಸಭೆಯಲ್ಲಿ ಕೆಲ ನಾಯಕರು ಪಕ್ಷದ ಪದಾಧಿಕಾರಿಗಳು ಪ್ರತಿಭಟನೆಗಳನ್ನು ಆಯೋಜಿಸಿ, ಅವುಗಳಲ್ಲಿ ಭಾಗವಹಿಸಿದ್ದರು ಎಂದು ಹೇಳಿದಾಗಲೂ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಚೆನ್ನಾಗಿ ಬರೆಯುವವರು, ಚೆನ್ನಾಗಿ ಕಾಣುವವರು” ಈ ವಿಚಾರವನ್ನು ಸಾರ್ವಜನಿಕವಾಗಿ ಬಲವಾಗಿ ಪ್ರಸ್ತಾಪಿಸಲಿಲ್ಲ ಎಂದು ಅವರು ಪರೋಕ್ಷವಾಗಿ ಟೀಕಿಸಿ, ಮುಂದಿನ ದಿನಗಳಲ್ಲಿ ಇಂತಹ ವಿಷಯಗಳಲ್ಲಿ ಹೆಚ್ಚು ಸಕ್ರಿಯವಾಗಿ ಧ್ವನಿ ಎತ್ತುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: SIR | ʼರಾಜ್ಯದಲ್ಲಿ ಆಧಾರ್ ಹೊಂದಿರುವ ಪಾಕಿಸ್ತಾನಿ, ಬಾಂಗ್ಲಾದೇಶಿಗರು ಪತ್ತೆಯಾಗಿಲ್ಲʼ
ಇದೇ ಸಭೆಯಲ್ಲಿ ವಿದ್ಯಾರ್ಥಿ ಚಳವಳಿಗಳ ಇತಿಹಾಸ ಮತ್ತು ಬೆಳವಣಿಗೆ ಕುರಿತು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ದೇಶದಲ್ಲಿ ನಡೆದ ಪ್ರಮುಖ ನಾಲ್ಕು ವಿದ್ಯಾರ್ಥಿ ಚಳವಳಿಗಳು, ಅದರಲ್ಲೂ ಮಂಡಲ್ ಆಯೋಗದ ವಿರುದ್ಧ ನಡೆದ ಪ್ರತಿಭಟನೆ ಸೇರಿದಂತೆ ಹಲವು ಚಳವಳಿಗಳು ಸ್ವಯಂಪ್ರೇರಿತವಾಗಿ ನಡೆದಿದ್ದವು. ಅವುಗಳನ್ನು ರಾಜಕೀಯ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು ಮುನ್ನಡೆಸಿರಲಿಲ್ಲ ಎಂದು ತಿವಾರಿ ವಾದಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ, ವಿದ್ಯಾರ್ಥಿಗಳು ಬಹಳ ದೀರ್ಘಕಾಲ ಕಾಂಗ್ರೆಸ್ ಜತೆಗಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸಭೆಯ ಮರುದಿನ ಈ ಚರ್ಚೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಂತೆ ಕಂಡ ತಿವಾರಿ, ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಟೀಕೆ ಹಿತಕರವಾಗಿರದೇ ಇರಬಹುದು, ಆದರೆ ಅದು ಅಗತ್ಯ. ದೇಹದಲ್ಲಿ ನೋವು ಅನಾರೋಗ್ಯದ ಬಗ್ಗೆ ಎಚ್ಚರಿಸುವಂತೆ, ಟೀಕೆಯೂ ಸಮಸ್ಯೆಯತ್ತ ಗಮನ ಸೆಳೆಯುತ್ತದೆ” ಎಂಬ ಮಾತನ್ನು ಅವರು ಪೋಸ್ಟ್ ಮಾಡಿದ್ದಾರೆ.




