ಕಿರಿಯ ಸಹೋದ್ಯೋಗಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ‘ತೆಹಲ್ಕಾ’ ಪತ್ರಿಕೆಯ ಸಂಸ್ಥಾಪಕ ತರುಣ್ ತೇಜ್‌ಪಾಲ್ ಅವರಿಗೆ ಬಾಂಬೆ ಹೈಕೋರ್ಟ್ ವಿಧಿಸಿರುವ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಹೆಚ್ಚಿಸಿ, ಅವರಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಬೇಕೆಂದು ಕೋರಿ ಗೋವಾ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ತೇಜ್‌ಪಾಲ್‌ಗೆ ವಿಧಿಸಲಾಗಿರುವ 10 ವರ್ಷಗಳ ಜೈಲು ಶಿಕ್ಷೆಯು ಅಪರಾಧದ ಗಂಭೀರತೆಗೆ ತಕ್ಕುದಾಗಿಲ್ಲ ಹಾಗೂ ತೀರಾ ಅಸಮರ್ಪಕವಾಗಿದೆ ಎಂದು ಗೋವಾ ಸರ್ಕಾರ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದೆ. ಸಂಸ್ಥೆಯ ಮುಖ್ಯಸ್ಥ, ಮಾರ್ಗದರ್ಶಕ ಹಾಗೂ ವಿಶ್ವಾಸಾರ್ಹ ವ್ಯಕ್ತಿಯ ಸ್ಥಾನದಲ್ಲಿದ್ದುಕೊಂಡು ತೇಜ್‌ಪಾಲ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯ ಎಸಗಿದ್ದಾರೆ. ಈ ಎಲ್ಲಾ ಗಂಭೀರ ಸನ್ನಿವೇಶಗಳನ್ನು ಒಟ್ಟಾರೆಯಾಗಿ ಪರಿಗಣಿಸುವಲ್ಲಿ ಹೈಕೋರ್ಟ್ ವಿಫಲವಾಗಿದೆ ಎಂದು ಸರ್ಕಾರ ಆಕ್ಷೇಪಿಸಿದೆ. ಅಲ್ಲದೆ, ಎರಡು ಪ್ರತ್ಯೇಕ ಘಟನೆಗಳಿಗೆ ಏಕಕಾಲದಲ್ಲಿ (ಕನ್‌ಕರೆಂಟ್) ಶಿಕ್ಷೆ ಅನುಭವಿಸಲು ಅವಕಾಶ ನೀಡಿರುವುದನ್ನು ವಿರೋಧಿಸಿರುವ ಸರ್ಕಾರ, ಘಟನೆ ನಡೆದು 13 ವರ್ಷಗಳಾಗಿವೆ ಎಂಬ ಕಾರಣಕ್ಕೆ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
2013ರಲ್ಲಿ ಗೋವಾದ ರೆಸಾರ್ಟ್ ಒಂದರಲ್ಲಿ ಪತ್ರಿಕೆಯ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಹೋಟೆಲ್ ಲಿಫ್ಟ್ ಒಳಗೆ ಕಿರಿಯ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ತೇಜ್‌ಪಾಲ್ (62) ಮೇಲಿತ್ತು. ಈ ಪ್ರಕರಣದಲ್ಲಿ 2021ರಲ್ಲಿ ವಿಚಾರಣಾ ನ್ಯಾಯಾಲಯವು ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಆದರೆ, ವಿಚಾರಣಾ ನ್ಯಾಯಾಲಯದ ತೀರ್ಪನ್ನು “ದೋಷಪೂರಿತ” ಎಂದು ತರಾಟೆಗೆ ತೆಗೆದುಕೊಂಡಿದ್ದ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು, ಆಗಸ್ಟ್ 6ರಂದು ಕೆಳಹಂತದ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ತೇಜ್‌ಪಾಲ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಜತೆಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ, ನಾಲ್ಕು ವಾರಗಳ ಒಳಗಾಗಿ ಪೊಲೀಸರಿಗೆ ಶರಣಾಗುವಂತೆ ಆದೇಶಿಸಿತ್ತು.
ಮತ್ತೊಂದೆಡೆ, ತಮ್ಮನ್ನು ‘ರಾಜಕೀಯ ಸಂತ್ರಸ್ತ’ ಎಂದು ಹೇಳಿಕೊಂಡಿರುವ ತೇಜ್‌ಪಾಲ್, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಶಿಕ್ಷೆ ಪ್ರಕಟಣೆಯ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದ ಅವರು, ತಮ್ಮ 62 ವರ್ಷ ವಯಸ್ಸು ಹಾಗೂ ಕುಟುಂಬದ ಹಿನ್ನೆಲೆಯನ್ನು ಪರಿಗಣಿಸಿ ಶಿಕ್ಷೆಯಲ್ಲಿ ರಿಯಾಯಿತಿ ನೀಡುವಂತೆ ಮನವಿ ಮಾಡಿದ್ದರು.
ಇದೀಗ ತೇಜ್‌ಪಾಲ್ ಸಲ್ಲಿಸಲಿರುವ ಮೇಲ್ಮನವಿ ಹಾಗೂ ಶಿಕ್ಷೆಯ ಪ್ರಮಾಣವನ್ನು ಜೀವಾವಧಿಗೆ ಹೆಚ್ಚಿಸುವಂತೆ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.




