ಮಹಿಳಾ ಮೀಸಲಾತಿ ಕಾಯ್ದೆ ಮತ್ತು ಕ್ಷೇತ್ರ ಮರುವಿಂಗಡಣೆ (Delimitation) ಪ್ರಕ್ರಿಯೆಯ ಬಗ್ಗೆ ಕೇಂದ್ರ ಸರ್ಕಾರ ಸರ್ವ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಸಿಪಿಐ(ಎಂ) ಹೇಳಿದೆ.
ಕ್ಷೇತ್ರ ಮರುವಿಂಗಡಣೆ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 816ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದ್ದು, ಅದರಲ್ಲಿ 273 ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿರಿಸಲು ಉದ್ದೇಶಿಸಿದೆ.
ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಕಡ್ಡಾಯವಾಗಿ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡಲು ತಾವು ಬದ್ಧರಾಗಿರುವುದಾಗಿ ತಿಳಿಸಿದೆ. ಆದರೆ, ಮಹಿಳಾ ಕೋಟಾವನ್ನು ಕ್ಷೇತ್ರಗಳ ಮರುವಿಗಡಣೆದೊಂದಿಗೆ ಅನುಷ್ಠಾನಗೊಳಿಸುತ್ತಿರುವ ಉದ್ದೇಶ ಕಳವಳಕಾರಿಯಾಗಿದೆ ಎಂದಿದೆ.
‘ನಾರಿ ಶಕ್ತಿ ವಂದನ್ ಅಧಿನಿಯಮ’ದಲ್ಲಿ ಪ್ರಸ್ತಾಪಿಸಿರುವಂತೆ, ಮಹಿಳಾ ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯೊಂದಿಗೆ ಅನುಷ್ಠಾನಕ್ಕೆ ತರುವುದನ್ನು ಪಕ್ಷ ವಿರೋಧಿಸಿದ್ದರೂ ಸಹ ಮಸೂದೆಯನ್ನು ಬೆಂಬಲಿಸಿದ್ದೇವೆ ಎಂದು ಪಕ್ಷ ಹೇಳಿದೆ. 2008ರಲ್ಲಿ ಯುಪಿಎ ಸರ್ಕಾರ ಮಂಡಿಸಿದ್ದ 108ನೇ ಸಾಂವಿಧಾನಿಕ ತಿದ್ದುಪಡಿಯನ್ನೂ ಪಕ್ಷ ಬೆಂಬಲಿಸಿತ್ತು, ಆ ತಿದ್ದುಪಡಿ ಕೂಡ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಪ್ರಸ್ತಾಪಿಸಿತ್ತು.
“ಮಹಿಳಾ ಮೀಸಲಾತಿ ಅನುಷ್ಠಾನವನ್ನು ಕ್ಷೇತ್ರ ಮರುವಿಂಗಡಣೆ ಮಾಡುವಾಗ ಜಾರಿ ಮಾಡಿದರೆ ವಿಳಂಬವಾಗಲಿದೆ ಮತ್ತು ಇದರಿಂದಾಗಿ ಮಹಿಳೆಯರಿಗೆ 2029ರ ಚುನಾವಣೆಯಲ್ಲೂ ಮೀಸಲಾತಿಯ ಹಕ್ಕು ನಿರಾಕರಿಸಲ್ಪಟ್ಟಂತಾಗುತ್ತದೆ. ಎರಡು ವರ್ಷಗಳು ಕಳೆದರೂ ಕ್ಷೇತ್ರ ಮರುವಿಂಗಡಣಾ ಆಯೋಗವನ್ನು ರಚಿಸಿಲ್ಲ ಮತ್ತು ಭರವಸೆ ನೀಡಿದಂತೆ ಜನಗಣತಿಯನ್ನೂ ಆರಂಭಿಸಿಲ್ಲ. ಅಲ್ಲದೆ, ವಿರೋಧ ಪಕ್ಷಗಳೊಂದಿಗೆ ಯಾವುದೇ ಚರ್ಚೆ ನಡೆಸದೆ ಮೋದಿ ಸರ್ಕಾರ ಈ ಪ್ರಸ್ತಾಪಗಳನ್ನು ತಂದಿದೆ ಎಂದು ಪಕ್ಷ ಆರೋಪಿಸಿದೆ.
ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವಾಗ ಈ ಪ್ರಸ್ತಾಪವನ್ನು ಮಂಡಿಸಿರುವುದು ಆಕ್ಷೇಪಾರ್ಹ. ಇದು ಚುನಾವಣಾ ಲಾಭಕ್ಕಾಗಿಯೇ ಪ್ರಸ್ತಾಪಿಸಲಾಗಿದೆ ಎಂದು ಸಿಪಿಐ(ಎಂ) ಹೇಳಿದೆ.




