2021ರ ವಿಧಾನಸಭಾ ಚುನಾವಣೆಯಲ್ಲಿ, 35 ಸ್ಥಾನಗಳಲ್ಲಿ ಸೋಲು-ಗೆಲುವಿನ ಅಂತರ 5,000ಕ್ಕಿಂತ ಕಡಿಮೆ ಆಗಿತ್ತು. ಸುಮಾರು 70ಕ್ಕೂ ಹೆಚ್ಚು ಸ್ಥಾನಗಳಲ್ಲಿ 15,000ಕ್ಕಿಂತ ಕಡಿಮೆ ಮತಗಳ ಅಂತರವಿದೆ. ಈ ಕ್ಷೇತ್ರದಲ್ಲಿ ಶೇಕಡ 9ರಿಂದ 31ರವರೆಗೆ ಅಲ್ಪಸಂಖ್ಯಾತ ಮತದಾರರು ಇದ್ದರು. ಇದೀಗ ಈ ಕ್ಷೇತ್ರಗಳಲ್ಲೇ ಹೆಚ್ಚಾಗಿ ಮುಸ್ಲಿಂ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ.
ಚುನಾವಣಾ ಆಯೋಗ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಂದರೆ SIR ಮೊದಲ ಬಾರಿಗೆ ಪ್ರಯೋಗಿಸಿದ್ದು ಬಿಹಾರದಲ್ಲಿ. ಅಲ್ಲಿ ಬಹುತೇಕ ಯಶಸ್ಸು ಕಂಡಿತು. ತೀವ್ರ ವಿರೋಧಗಳ ನಡುವೆಯೂ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಸಿದೆ. ಕಣ್ಣಿಗೆ ರಾಚುವಂತೆ ‘ಗೋಲ್‌ಮಾಲ್’ ಆಗಿದೆ. ಇನ್ನು ಕೆಲವೇ ವಾರಗಳಲ್ಲಿ ವಿಧಾನಸಭೆ ಚುನಾವಣೆಯನ್ನು ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಈ SIR ಪ್ರಕ್ರಿಯೆ ದೊಡ್ಡ ರಾಜಕೀಯ ಸಂಚಲನವನ್ನೇ ಸೃಷ್ಟಿಸಿದೆ.
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಸಿ ಸುಮಾರು 90 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ಇದು ಬರೀ ಅಂಕಿಅಂಶವಲ್ಲ. ಇದು ರಾಜ್ಯದ 35 ರಿಂದ 70 ಕ್ಷೇತ್ರಗಳ ಫಲಿತಾಂಶವನ್ನೇ ಬದಲಿಸಬಲ್ಲ ಗಂಭೀರ ವಿದ್ಯಮಾನ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಎಸ್‌ಐಆರ್ ಪ್ರಕ್ರಿಯೆಯು ರಾಜ್ಯದ ಮುಂಬರುವ ಚುನಾವಣಾ ಫಲಿತಾಂಶವನ್ನು ಬುಡಮೇಲು ಮಾಡುವ ಸಾಧ್ಯತೆ ಅಧಿಕವಾಗಿದೆ.
ಇದನ್ನು ಓದಿದ್ದೀರಾ? ಬಂಗಾಳದ ಮತುವಾಗಳು ಯಾರು?ಎಸ್‌ಐಆರ್‌ಗೆ ಇವರೇಕೆ ಬಲಿಪಶುಗಳು!
ಮತದಾರರ ಪಟ್ಟಿ ಮತ್ತು ಅಂಕಿ-ಅಂಶಗಳ ಆಟ
ಎಸ್‌ಐಆರ್ ಬಳಿಕ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದ 90 ಲಕ್ಷ ಮಂದಿಯ ಪೈಕಿ ಶೇಕಡ 63ರಷ್ಟು ಅಂದರೆ ಅಂದಾಜು 57.47 ಲಕ್ಷ ಮಂದಿ ಹಿಂದೂಗಳು. ಶೇ.34 ರಷ್ಟು ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇ.27ರಷ್ಟು ಇರುವುದು. ಪಟ್ಟಿಯಿಂದ ಹೊರಬಿದ್ದವರಲ್ಲಿ ಮುಸ್ಲಿಮರ ಪ್ರಮಾಣ ಶೇ.34ಕ್ಕಿಂತ ಅಧಿಕವಿದೆ! ಅಂದರೆ ಶೇಕಡ 7ಕ್ಕೂ ಅಧಿಕ ಮಂದಿ ಮುಸ್ಲಿಮರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ.
ಈ ಬೃಹತ್ ಪ್ರಮಾಣದ ಮತದಾರರ ಕಡಿತವು ಸಣ್ಣ ಅಂತರದ ಗೆಲುವು-ಸೋಲು ನಿರ್ಧರಿಸುವ ಕ್ಷೇತ್ರಗಳಲ್ಲಿ ಅತಿ ನಿರ್ಣಾಯಕವಾಗಿದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿಯೇತರ ಪಕ್ಷಗಳ ಭದ್ರಕೋಟೆಯಾಗಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ಇವೆಲ್ಲವೂ ಬಿಜೆಪಿಗೆ ಚುನಾವಣಾ ಲಾಭ ತಂದುಕೊಡಬಹುದು ಎಂಬ ಚರ್ಚೆಗಳಿವೆ.
ಇದನ್ನು ಓದಿದ್ದೀರಾ? ‘ರಾಹುಲ್ ದಾದಾ, ಬಂಗಾಳಕ್ಕೂ ಬನ್ನಿ..’ ಮತುವಾಗಳ ಮನವಿ, ಬಿಜೆಪಿಯಲ್ಲಿ ಆತಂಕ ತಂದಿದ್ದೇಕೆ?
2021ರ ವಿಧಾನಸಭಾ ಚುನಾವಣೆಯಲ್ಲಿ, 35 ಸ್ಥಾನಗಳಲ್ಲಿ ಸೋಲು-ಗೆಲುವಿನ ಅಂತರ 5,000ಕ್ಕಿಂತ ಕಡಿಮೆ ಆಗಿತ್ತು. ಸುಮಾರು 70ಕ್ಕೂ ಹೆಚ್ಚು ಸ್ಥಾನಗಳಲ್ಲಿ 15,000ಕ್ಕಿಂತ ಕಡಿಮೆ ಮತಗಳ ಅಂತರವಿದೆ. ಈ ಕ್ಷೇತ್ರದಲ್ಲಿ ಶೇಕಡ 9ರಿಂದ 31ರವರೆಗೆ ಅಲ್ಪಸಂಖ್ಯಾತ ಮತದಾರರು ಇದ್ದರು. ಅಂದರೆ ಈ ಬಿಗಿಯಾದ ಸ್ಪರ್ಧೆಗಳಲ್ಲಿ ಹೊಸ ಮೈತ್ರಿಕೂಟವು ಅಲ್ಪಸಂಖ್ಯಾತ ಮತಗಳ ಒಂದು ಸಣ್ಣ ಪಾಲನ್ನು ಸಹ ಕಸಿದುಕೊಳ್ಳುವಲ್ಲಿ ಯಶಸ್ವಿಯಾದರೆ, ಫಲಿತಾಂಶವೇ ಬದಲಾಗಬಹುದು.
2021ರಲ್ಲಿ ಬಿಜೆಪಿ ನಿಕಟ ಸ್ಪರ್ಧೆಯಿದ್ದ ಈ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ಅಗಾಧವಾಗಿ ಟಿಎಂಸಿಯನ್ನು ಬೆಂಬಲಿಸಿದ್ದರು. ಇದೀಗ ಈ ಕ್ಷೇತ್ರಗಳಲ್ಲೇ ಹೆಚ್ಚಾಗಿ ಮುಸ್ಲಿಂ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಮುರ್ಷೀದಾಬಾದ್‌ನಲ್ಲಿ 11.01 ಲಕ್ಷ ಮುಸ್ಲಿಂ ಮತದಾರರಲ್ಲಿ 4.55 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ. ಉತ್ತರ 24 ಪರಗಣಾದಲ್ಲಿ 3.25 ಲಕ್ಷ ಮುಸ್ಲಿಂ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಮಾಲ್ಡಾದಲ್ಲಿ 2.39 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಜಿಲ್ಲೆಗಳು ಸಾಂಪ್ರದಾಯಿಕವಾಗಿ ಟಿಎಂಸಿ ಅಥವಾ ಕಾಂಗ್ರೆಸ್-ಎಡರಂಗದ ಭದ್ರಕೋಟೆಗಳಾಗಿದ್ದವು. ಈಗ ಇಲ್ಲಿನ ಮತದಾರರ ಸಂಖ್ಯೆಯಲ್ಲಿನ ಇಳಿಕೆಯು ಅಂತಿಮವಾಗಿ ಬಿಜೆಪಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸುವುದು ಖಂಡಿತ.
ಇವೆಲ್ಲವುದರ ನಡುವೆ ಅತಂತ್ರ ಸ್ಥಿತಿಯಲ್ಲಿರುವುದು ಮತುವಾ ಸಮುದಾಯ. ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಂತಿರುವ ಉತ್ತರ 24 ಪರಗಣಾ ಮತ್ತು ನಾಡಿಯಾ ಜಿಲ್ಲೆಗಳಲ್ಲಿ ‘ಮತುವಾ’ ಸಮುದಾಯದ ಪ್ರಭಾವ ಅತಿಹೆಚ್ಚು. ಪಟ್ಟಿಯಿಂದ ಕೈಬಿಡಲಾದ ಹಿಂದೂಗಳಲ್ಲಿ ಪರಿಶಿಷ್ಟ ಜಾತಿಯ ಮತುವಾ ಸಮುದಾಯದವರೇ ಹೆಚ್ಚಿದ್ದಾರೆ. ಈ ಸಮುದಾಯಕ್ಕೆ ಪೌರತ್ವ ನೀಡುವುದಾಗಿ ಬಿಜೆಪಿ ಈ ಹಿಂದೆ ಭರವಸೆ ನೀಡಿತ್ತು. ಆದರೆ ಸ್ಮಶಾನಗಳಲ್ಲಿ ಕೆಲಸ ಮಾಡುತ್ತಿರುವ ಈ ಸಮುದಾಯವು, ಭರವಸೆಗಳು ಈಡೇರದ ಕಾರಣ ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿದೆ. ಆದ್ದರಿಂದ ಬಿಜೆಪಿಯೇತರ ಪಕ್ಷಗಳೆಡೆ ಒಲವು ತೋರಿದೆ. ಆದರೆ ಈ ಸಮುದಾಯದವರನ್ನೇ ಅಧಿಕವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಮತದಾರರ ಪಟ್ಟಿಯಿಂದ ಇಷ್ಟು ದೊಡ್ಡ ಪ್ರಮಾಣದ ಹೆಸರನ್ನು ಕೈಬಿಟ್ಟಿರುವುದು ಒಂದು ಕಡೆ ಬಿಜೆಪಿಗೆ ಅನುಕೂಲಕರ ವಾತಾವರಣ ನಿರ್ಮಿಸಬಹುದು ಎಂಬ ಚರ್ಚೆ ಇದೆ. ಪಟ್ಟಿಯಿಂದ ಹೊರಬಿದ್ದಿರುವವರಲ್ಲಿ ಹಿಂದೂಗಳೇ ಅದರಲ್ಲೂ ಮತುವಾ ಸಮುದಾಯ ಅಧಿಕವಾಗಿರುವುದು ಚುನಾವಣಾ ಫಲಿತಾಂಶವನ್ನು ಯಾವ ದಿಕ್ಕಿಗೆ ಬೇಕಾದರೂ ತಿರುಗಿಸಬಹುದು. ಸದ್ಯ ಇದು ಕೇವಲ ಮತದಾರರ ಪಟ್ಟಿಯ ವಿಚಾರವಾಗಿ ಉಳಿಯದೆ, ಪಶ್ಚಿಮ ಬಂಗಾಳದ ಅಸ್ಮಿತೆ ಮತ್ತು ನಾಗರಿಕತ್ವದ ಹೋರಾಟದ ಭಾಗವಾಗಿ ಮಾರ್ಪಟ್ಟಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



