ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಅಂಗವಾಗಿ ‘ಬಹು ಗಾಯಕರ ವಿಭಾಗ’ದಲ್ಲಿ 12 ದಿನ, 12 ಗಂಟೆ,
12 ನಿಮಿಷಗಳ ಕಾಲ ನಿರಂತರ ಗಾಯನ ಪ್ರಸ್ತುತಪಡಿಸುವ ಮೂಲಕ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್’ ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದೆ.
ಸಮಾರಂಭದ ಅಧ್ಯಕ್ಷೀಯ ಭಾಷಣ ಮಾಡಿದ ಡಾ. ರೊನಾಲ್ಡ್ ಕೊಲಾಸೊ “ದಾಖಲೆಗಳನ್ನು ಮುರಿಯುವುದಕ್ಕೆ ಮತ್ತು ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ಮಾಂಡ್ ಸೊಭಾಣ್ ಹೆಸರುವಾಸಿಯಾಗಿದೆ. ಈ ಹಿಂದೆ ವಿಶ್ವ ಕೊಂಕಣಿ ಸಮ್ಮೇಳನಕ್ಕೆ ಭಾರತದ ರಾಷ್ಟ್ರಪತಿಗಳನ್ನೇ ಕರೆತಂದ ಹೆಗ್ಗಳಿಕೆ ಈ ಸಂಸ್ಥೆಗಿದೆ. ಬಹು ಗಾಯಕರ ವಿಭಾಗದಲ್ಲಿ 12 ದಿನ ಮತ್ತು 12 ನಿಮಿಷಗಳ ನಿರಂತರ ಗಾಯನವು ಒಂದು ಅಮೋಘ ಸಾಧನೆಯಾಗಿದೆ” ಎಂದು ಹೇಳಿದರು.
ಗಿನ್ನಿಸ್ ದಾಖಲೆ ಬಗ್ಗೆ ಹರ್ಷ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಎರಿಕ್ ಒಝೇರಿಯೊ ಅವರು “ಕೊಂಕಣಿ ಭಾಷೆ ಮತ್ತು ಸಂಸ್ಕೃತಿಗೆ ಹೊಸ ಆಯಾಮ ನೀಡಿ, ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದಂತಹ ಕಾರ್ಯಕ್ರಮಗಳು ಜಾತಿ, ಮತ, ಧರ್ಮಗಳನ್ನು ಮೀರಿದ ಏಕತೆಗೆ ಉತ್ತಮ ನಿದರ್ಶನವಾಗಿವೆ” ಎಂದು ಅಭಿಪ್ರಾಯಪಟ್ಟರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಲುವಿ ಜೆ. ಪಿಂಟೊ, “ಈ ಸಮ್ಮೇಳನವು ಕೇವಲ ದಾಖಲೆ ನಿರ್ಮಿಸುವ ಉದ್ದೇಶವನ್ನು ಹೊಂದಿರಲಿಲ್ಲ, ಬದಲಾಗಿ ಜಾಗತಿಕ ಕೊಂಕಣಿ ಪ್ರತಿಭೆಗಳನ್ನು ಒಂದೇ ಸೂರಿನಡಿ ತರುವ ಎರಿಕ್ ಒಝೇರಿಯೊ ಅವರ ಕನಸನ್ನು ನನಸಾಗಿಸುವ ಪ್ರಯತ್ನವಾಗಿತ್ತು. ಈ ಕಾರ್ಯಕ್ರಮದ ಮೂಲಕ 300 ತಂಡಗಳು, 7,235 ಗಾಯಕರು ಮತ್ತು 4,596 ಹಾಡುಗಳನ್ನು ಒಂದೆಡೆ ಸೇರಿಸಿದ್ದೇವೆ” ಎಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೈಕೆಲ್ ಡಿಸೋಜ, ಜಾಯ್ಸ್ ಒಝೇರಿಯೊ, ಸ್ವಪ್ನಿಲ್ ದಂಗಾರಿಕರ್, ಸ್ವಾಗತ ಸಮಿತಿ ಉಪಾಧ್ಯಕ್ಷ ರಾಯ್ ಕ್ಯಾಸ್ಟೆಲಿನೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಗೋವಾ ಸಂಯೋಜಕ ಮೈಕೆಲ್ ಗ್ರೇಸಿಯಸ್, ಕಲಾಂಗಣ ಅಧ್ಯಕ್ಷ ರೊನಾಲ್ಡ್ ಡಿ’ಮೆಂಡೋನ್ಸಾ, ನವೀನ್ ಲೋಬೊ ಮತ್ತು ಎಲ್ರಾನ್ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.




