ಕೇಂದ್ರ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ತೀವ್ ಪರಿಷ್ಕರಣೆಯ ನಂತರ ಗುಜರಾತ್ ನಲ್ಲಿ ರಾಜ್ಯದಾದ್ಯಂತ ಇರುವ 15 ನಗರಪಾಲಿಕೆಗಳು, 84 ನಗರಸಭೆಗಳು, 34 ಜಿಲ್ಲಾ ಪಂಚಾಯಿತಿಗಳು ಹಾಗೂ 260 ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆದಿದೆ.
ಬಿಜೆಪಿ ತನ್ನ ವಿರೋಧ ಪಕ್ಷಗಳ ಅಭ್ಯರ್ಥಿಗಳ ಮೇಲೆ ಒತ್ತಡ ಹೇರಿ ಅವರ ನಾಮಪತ್ರಗಳನ್ನು ವಾಪಾಸ್ ಪಡೆಯುವಂತೆ ಮಾಡಿದೆ ಎಂಬ ಗಂಭಿರ ಆರೋಪಗಳು ಕೂಡ ಕೇಳಿ ಬಂದಿತ್ತು. ಈ ಬೆನ್ನಲ್ಲೇ, ಬಿಜೆಪಿಯ 736 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. 2021ರಲ್ಲಿ ಈ ಸಂಖ್ಯೆ 220 ಹಾಗೂ 2015ರಲ್ಲಿ ಕೇವಲ 37 ಆಗಿತ್ತು ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ.
ಗುಜರಾತ್ ನ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರವೇಶಿಸಿರುವುದರಿಂದ ಪ್ರಬಲ ಪೈಪೋಟಿ ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ, ಏ.15ರಂದು ನಾಮಪತ್ರ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ ವಡೋದರ, ಸೂರತ್, ಮೆಹ್ಸಾನ ಹಾಗೂ ಬನಸ್ಕಾಂತದಾದ್ಯಂತ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಸುಮಾರು 400ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದುಳಿದರು.
ಏ.26( ರವಿವಾರ) ಬೆಳಗ್ಗೆ 7ರಿಂದ ಆರಂಭಗೊಂಡ ಮತದಾನ ಪ್ರಕ್ರಿಯೆ, ಸಂಜೆ 6 ಗಂಟೆಯ ತನಕ ನಡೆದಿತ್ತು. ಗುಜರಾತ್ ನಾದ್ಯಂತ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 25,537 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ : ಮತದಾನದ ಹಕ್ಕನ್ನು ತರಿದು ಹಾಕುವ ಹುನ್ನಾರದ ವಿರುದ್ಧದ ‘ಪ್ರತೀಕಾರ’ವೇ ಮತ ಪ್ರಮಾಣದ ಏರಿಕೆಗೆ ಕಾರಣ?
ಇನ್ನು, ಈ ಬಾರಿ ನದಿಯಾಡ್, ಸುರೇಂದ್ರನಗರ್, ಆನಂದ್, ನವ್ ಸಾರಿ, ವಾಪಿ, ಮೊರ್ಬಿ, ಗಾಂಧಿಧಾಮ್, ಪೋರಬಂದರ್ ಹಾಗೂ ಮೆಹ್ಸಾನ ಒಳಗೊಂಡಂತೆ ಒಟ್ಟು ಒಂಬತ್ತು ಹೊಸ ನಗರ ಪಾಲಿಕೆಗಳನ್ನು ರಚನೆ ಮಾಡಲಾಗಿದ್ದು, ಇದೇ ಮೊಟ್ಟಮೊದಲ ಬಾರಿಗೆ ಈ ನಗರ ಪಾಲಿಕೆಗಳಿಗೆ ಚುನಾವಣೆ ನಡೆದಿದೆ. ನಾಳೆ ಏ. 28ರಂದು ಮತ ಎಣಿಕೆ ನಡೆಯಲಿದೆ.
ಗುಜರಾತ್‌ನಲ್ಲಿ ಭಾರತೀಯ ಚುನಾವಣಾ ಆಯೋಗವು ನಡೆಸಿದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ನಂತರ ಒಟ್ಟು 77 ಲಕ್ಷಕ್ಕೂಹೆಚ್ಚು(ಅಂದಾಜು77.6 ಲಕ್ಷ) ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಗುಜರಾತ್‌ನ ಒಟ್ಟು ಮತದಾರರ ಸಂಖ್ಯೆ 5.08 ಕೋಟಿಯಿಂದ 4.40 ಕೋಟಿಗೆ ಇಳಿಕೆಯಾಗಿದ್ದು, ಶೇ. 13.4 ರಷ್ಟು ಮತಪಟ್ಟಿಯಲ್ಲಿ ಕಡಿಮೆಯಾಗಿದೆ. ಫೆಬ್ರವರಿ 2026 ರಲ್ಲಿ ಪ್ರಕಟವಾದ ಅಂತಿಮ ಮತದಾರರ ಪಟ್ಟಿಯ ಪ್ರಕಾರ, ಗುಜರಾತ್‌ನಲ್ಲಿ ಈಗ ಒಟ್ಟು 4,40,30,725 ಮತದಾರರಿದ್ದಾರೆ.
1995ರಿಂದಲೂ ಗುಜರಾತ್ ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಾ ಬಂದಿದೆ.






