ಗೋಮಾಂಸ ಸಂಗ್ರಹ ಮಾಡಿದ್ದಾನೆ ಎಂಬ ಶಂಕೆಯಲ್ಲಿ ಬಂಧಿಸಲಾಗಿದ್ದ 64 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಕೊಲ್ಲಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಸ್ಥಳೀಯರು ಪ್ರತಿಭಟಿಸಿದ್ದಾರೆ. ಕುಟುಂಬ ಈ ಘಟನೆ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ. ಇವೆಲ್ಲವುದರ ನಡುವೆ ಗುಜರಾತ್‌ನ ಕಠಿಣ ಗೋಸಂರಕ್ಷಣಾ ಕಾನೂನು ಬಗ್ಗೆ ಮತ್ತೆ ತೀವ್ರ ಕಳವಳ ವ್ಯಕ್ತವಾಗಿದೆ.
ಅಹಮದಾಬಾದ್‌ನ ಜುಹಾಪುರ ಪ್ರದೇಶದ ನಿವಾಸಿ ಜಹೀರ್ ಶೇಖ್ ಅವರನ್ನು ಅಹಮದಾಬಾದ್‌ನ ವೆಜಲ್‌ಪುರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಬಂಧಿಸಿದ್ದರು. ಕಸ್ಟಡಿಯಲ್ಲಿದ್ದಾಗ ಶೇಖ್‌ಗೆ ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದರಿಂದ ಶೇಖ್ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಈ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಪೊಲೀಸ್ ಕಸ್ಟಡಿ ಸಾವು: 10 ಲಕ್ಷ ರೂ. ಪರಿಹಾರಕ್ಕೆ ಎನ್‌ಎಚ್‌ಆರ್‌ಸಿ ಆದೇಶ; ವ್ಯವಸ್ಥೆಗೆ ಎಚ್ಚರಿಕೆಯ ಗಂಟೆ
ಈ ತಿಂಗಳ ಆರಂಭದಲ್ಲಿ ಜುಹಾಪುರದ ತೆರೆದ ಮೈದಾನದಲ್ಲಿ 500 ಕಿಲೋಗ್ರಾಂಗಳಿಗೂ ಹೆಚ್ಚು ಶಂಕಿತ ಗೋಮಾಂಸ, ಜೀವಂತ ಕರು, ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದಾದ ಬಳಿಕ ಪೊಲೀಸರು ಶೇಖ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಮೇ 18ರಂದು ಬಂಧಿಸಿದ್ದರು.
ಇನ್ನು ಆಸ್ಪತ್ರೆಯಲ್ಲಿ ತನ್ನ ತಂದೆಯ ಸ್ಥಿತಿಯನ್ನು ನೋಡಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವ ಶೇಖ್ ಪುತ್ರ ತೋಫಿಕ್, ತಮ್ಮ ತಂದೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಪೊಲೀಸರು ಹೊಡೆದು ಹಣ ನೀಡುವಂತೆ, ಯಾವುದೋ ಪಾನೀಯವನ್ನು ಸೇವಿಸುವಂತೆ ಒತ್ತಾಯಿಸಿದ್ದಾರೆ ಎಂದು ದೂರಿದ್ದಾರೆ.
“ಇಷ್ಟು ವೃದ್ಧರಾಗಿರುವ ವ್ಯಕ್ತಿಯನ್ನೂ ಪೊಲೀಸರು ಅಮಾನವೀಯ ರೀತಿಯಲ್ಲಿ ನಡೆಸಿಕೊಂಡಿದ್ದಾರೆ. ನನ್ನ ತಂದೆಗೆ ಥಳಿಸಿದ್ದಾರೆ. ಅವರ ಗಡ್ಡವನ್ನು ಎಳೆದಿದ್ದಾರೆ. ಗುಪ್ತಾಂಗಗಳಿಗೆ ಹೊಡೆದಿದ್ದಾರೆ” ಎಂದು ತಿಳಿಸಿರುವುದಾಗಿ ದಿ ವೈರ್ ವರದಿ ಮಾಡಿದೆ.
ಇನ್ನು ಪೊಲೀಸ್ ಕಸ್ಟಡಿಯಲ್ಲಿದ್ದ ಶೇಖ್ ಸಾವನ್ನಪ್ಪುತ್ತಿದ್ದಂತೆ ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರು ಸ್ವತಂತ್ರ ತನಿಖೆ ಮತ್ತು ಚಿತ್ರಹಿಂಸೆ ನೀಡಿ ಕೊಂದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಪೊಲೀಸರು, ಶೇಖ್ ಅವರ ಪತ್ನಿ ತಂದಿದ್ದ ಔಷಧಿಯನ್ನು ಸೇವಿಸಿದ ಬಳಿಕ ಶೇಖ್ ಆರೋಗ್ಯ ಹದಗೆಟ್ಟಿದ್ದು ಎಂದು ಹೇಳಿಕೊಂಡಿದ್ದಾರೆ.
ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಅಧ್ಯಕ್ಷ ಮತ್ತು ಗುಜರಾತ್‌ನ ವಡ್ಗಾಮ್‌ನ ಶಾಸಕ ಜಿಗ್ನೇಶ್ ಮೇವಾನಿ ಮಾಧ್ಯಮಗಳೊಂದಿಗೆ ಮಾತನಾಡಿ, “ಕುಟುಂಬವು ಕಸ್ಟಡಿ ಹಿಂಸೆಯ ಆರೋಪ ಮಾಡುತ್ತಿದ್ದಾರೆ. ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಬೇಕು. ಬಂಧಿತರ ಗುಪ್ತಾಂಗಕ್ಕೆ ಹೊಡೆಯಲಾಗಿದೆ ಎಂಬ ಆರೋಪವಿದೆ. ಎರಡು ವರ್ಷಗಳ ಹಿಂದೆಯೂ ಸಹ, ಅದೇ ಪೊಲೀಸ್ ಠಾಣೆಯ ಪೊಲೀಸರು ಕಸ್ಟಡಿ ಹಿಂಸೆ ನೀಡಿ ಕೊಂದ ಆರೋಪವಿದೆ. 10-15 ದಿನಗಳ ಹಿಂದೆಯೂ ಸಹ, ವೆಜಲ್ಪುರ ಪೊಲೀಸರು ಮುಸ್ಲಿಂ ವ್ಯಕ್ತಿಯನ್ನು ಪೊಲೀಸ್ ವಾಹನಕ್ಕೆ ಕಟ್ಟಿ ಹೊಡೆಯುವುದನ್ನು ಚಿತ್ರೀಕರಿಸಲಾಗಿದೆ. ಪೊಲೀಸರು ಕಾನೂನು ಮತ್ತು ಸಂವಿಧಾನದ ಮಿತಿಯೊಳಗೆ ಕಾರ್ಯನಿರ್ವಹಿಸಬೇಕು. ಯಾರಾದರೂ ಅಪರಾಧ ಮಾಡಿದ್ದರೆ, ಅವರನ್ನು ಬಂಧಿಸಿ, ಅಗತ್ಯ ಕ್ರಮ ಕೈಗೊಳ್ಳಿ ಆದರೆ ಇದು ಅನಗತ್ಯ” ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾ ಕೂಡ ಘಟನೆಯನ್ನು ಖಂಡಿಸಿದ್ದಾರೆ. “ಡಿಜಿಪಿ ನಮಗೆ ಅಗತ್ಯ ಕ್ರಮ ಮತ್ತು ತನಿಖೆಯ ಭರವಸೆ ನೀಡಿದ್ದಾರೆ. ಆದರೆ ಕಸ್ಟಡಿಯಲ್ಲಿ ಹಿಂಸೆಯ ಪ್ರಕರಣಗಳು ಗುಜರಾತ್‌ನಲ್ಲಿ ವಾಸ್ತವ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇವೆಲ್ಲವುದಕ್ಕೂ ಮುಖ್ಯವಾಗಿ ಜುಹಾಪುರದ ತೆರೆದ ಮೈದಾನದಲ್ಲಿ ಪೊಲೀಸರು ವಶಕ್ಕೆ ಪಡೆದ ಮಾಂಸ ಗೋಮಾಂಸವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ ಗೋಮಾಂಸ ವಿಚಾರದಲ್ಲಿ ಪೊಲೀಸರಿಂದಲೇ ಕೊಲೆ ನಡೆದಾಗಿದೆ. 2017ರಲ್ಲಿ ಗುಜರಾತ್ ರಾಜ್ಯ ವಿಧಾನಸಭೆಯು ಗೋವುಗಳ ಹತ್ಯೆಯನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸುವ ಕಾನೂನನ್ನು ಅಂಗೀಕರಿಸಿದ ನಂತರ ಮುಸ್ಲಿಮರ ಮೇಲೆ ದಾಳಿ ಅಧಿಕವಾಗಿದೆ.
ಗುಜರಾತ್‌ನಲ್ಲಿ ಗೋಮಾಂಸ ಮತ್ತು ಜಾನುವಾರು ಕಳ್ಳಸಾಗಣೆ ನೆಪದಲ್ಲಿ ನಡೆಯುತ್ತಿರುವ ಕಸ್ಟಡಿ ಸಾವುಗಳು ಮತ್ತು ದೌರ್ಜನ್ಯಗಳು ಆತಂಕಕಾರಿ ಮಟ್ಟಿಗೆ ಹೆಚ್ಚಾಗಿದ್ದು, ರಾಷ್ಟ್ರಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಗುಜರಾತ್‌ನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಗೃಹ ಸಚಿವಾಲಯ ಮತ್ತು ಮಾನವ ಹಕ್ಕುಗಳ ಆಯೋಗದ ವರದಿಗಳು ಉಲ್ಲೇಖಿಸಿವೆ.




