ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಜಾರ್ಖಂಡ್ ಸರ್ಕಾರ ರದ್ದುಪಡಿಸಿದ್ದ 11ನೇ ಮತ್ತು 13ನೇ ಜಾರ್ಖಂಡ್ ಲೋಕಸೇವಾ ಆಯೋಗ (ಜೆಪಿಎಸ್‌ಸಿ) ಪರೀಕ್ಷೆಗಳು ಹಾಗೂ ನೇಮಕಾತಿಗಳಿಗೆ ಜಾರ್ಖಂಡ್ ಹೈಕೋರ್ಟ್ ತಡೆ ನೀಡಿದೆ. ಸರ್ಕಾರದ ನಿರ್ಧಾರ ಪ್ರಶ್ನಿಸಿ ಈಗಾಗಲೇ ನೇಮಕಗೊಂಡ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು 25 ದಿನಗಳ ಕಾಲ ನಡೆಸಿದ ಪ್ರತಿಭಟನೆಯ ಬಳಿಕ, ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ಸರ್ಕಾರ ಜೆಪಿಎಸ್‌ಸಿ ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್‌ಎಸ್‌ಸಿ) ನಡೆಸಿದ್ದ 44 ನೇಮಕಾತಿ ಪರೀಕ್ಷೆಗಳನ್ನು ರದ್ದುಪಡಿಸಿತ್ತು. ಅಲ್ಲದೆ, ಎರಡೂ ಆಯೋಗಗಳ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಮಿತಿಯೊಂದನ್ನೂ ರಚಿಸಿತ್ತು.
ರದ್ದಾದ ಪರೀಕ್ಷೆಗಳಲ್ಲಿ ಔಷಧ ನಿರೀಕ್ಷಕರು, ಸಹಾಯಕ ಪ್ರಾಧ್ಯಾಪಕರು, ಉಪ ಜಿಲ್ಲಾಧಿಕಾರಿಗಳು, ದಂತ ವೈದ್ಯರು, ಸಹಾಯಕ ಎಂಜಿನಿಯರ್‌ಗಳು, ಸಿವಿಲ್ ನ್ಯಾಯಾಧೀಶರು, ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಹಾಗೂ ಅರಣ್ಯ ವಲಯಾಧಿಕಾರಿಗಳ ನೇಮಕಾತಿ ಪರೀಕ್ಷೆಗಳು ಸೇರಿವೆ. ಸರ್ಕಾರಿ ಪಾಲಿಟೆಕ್ನಿಕ್‌ಗಳ ಉಪನ್ಯಾಸಕರು, ಹಿರಿಯ ವೈಜ್ಞಾನಿಕ ಅಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಆಡಳಿತಾತ್ಮಕ ಮತ್ತು ತಾಂತ್ರಿಕ ಹುದ್ದೆಗಳ ಪರೀಕ್ಷೆಗಳೂ ರದ್ದಾಗಿದ್ದವು.
ಇದನ್ನೂ ಓದಿ: ಸಲಿಂಗಿಗಳ ‘ಲಿವ್-ಇನ್’ ಸಂಬಂಧಕ್ಕೆ ಕಾನೂನಿನ ಅಡ್ಡಿಯಿಲ್ಲ: ದೆಹಲಿ ಹೈಕೋರ್ಟ್
ಸರ್ಕಾರ ಪರೀಕ್ಷೆ ಹಾಗೂ ಅದರ ಆಧಾರದ ಮೇಲಿನ ನೇಮಕಾತಿಗಳನ್ನು ಏಕಪಕ್ಷೀಯವಾಗಿ ರದ್ದುಪಡಿಸಿದೆ ಎಂಬುದು ಅರ್ಜಿದಾರರ ವಾದವಾಗಿದೆ. ತಮ್ಮ ವಾದ ಮಂಡಿಸಲು ಅವಕಾಶ ನೀಡದೆ ನೇಮಕಾತಿ ರದ್ದುಪಡಿಸಿರುವುದು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಈ ಪೈಕಿ ಹಲವರು ಈಗಾಗಲೇ ನೇಮಕಗೊಂಡು ಸರ್ಕಾರಿ ಸೇವೆಗೆ ಹಾಜರಾಗಿದ್ದರು. ಹೀಗಾಗಿ ಸರ್ಕಾರದ ನಿರ್ಧಾರದಿಂದ ತಮ್ಮ ಉದ್ಯೋಗವೇ ಅಪಾಯಕ್ಕೆ ಸಿಲುಕಿದೆ ಎಂದು ಅವರು ವಾದಿಸಿದ್ದಾರೆ. ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಅಭ್ಯರ್ಥಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬಹುದು. ಆದರೆ ಯಾವುದೇ ವೈಯಕ್ತಿಕ ವಿಚಾರಣೆ ನಡೆಸದೆ ಎಲ್ಲಾ ಯಶಸ್ವಿ ಅಭ್ಯರ್ಥಿಗಳನ್ನೂ ಉದ್ಯೋಗದಿಂದ ತೆಗೆದುಹಾಕುವುದು ಅನ್ಯಾಯ ಎಂದು ಅರ್ಜಿದಾರರು ವಾದಿಸಿದ್ದರು.




