ಭಾರತೀಯ ಸಮಾಜದಲ್ಲಿ ‘ಇಂಗ್ಲಿಷ್’ ಭಾಷೆಯು ಹೊಂದಿರುವ ಆಳವಾದ ಬೇರುಗಳನ್ನು ಗಮನಿಸಿದರೆ, ಸಿಬಿಎಸ್‌ಇಯ ನೂತನ ತ್ರಿಭಾಷಾ ಸೂತ್ರದ ಅಡಿಯಲ್ಲಿ ಅದನ್ನು ‘ದೇಶೀಯವಲ್ಲದ’ (non-indigenous) ಭಾಷೆ ಎಂದು ಪರಿಗಣಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ. ಅಲ್ಲದೆ, ಈ ರೀತಿ ಪರಿಗಣಿಸುವ ನಿಯಮದ ಸಾಂವಿಧಾನಿಕತೆಯನ್ನು ಪರಿಶೀಲಿಸಬೇಕಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನ್ವಯ 2026-27ನೇ ಶೈಕ್ಷಣಿಕ ಸಾಲಿನಿಂದ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸುವ ಸಿಬಿಎಸ್‌ಇ (CBSE) ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಈ ವಿಚಾರಣೆ ನಡೆಸಿತು.
ಶಾಲೆಗಳಲ್ಲಿ ಹೊಸ ಭಾಷೆಗಳನ್ನು ಕಲಿಸಲು ಇನ್ನೂ ಸಮರ್ಪಕವಾದ ಮೂಲಸೌಕರ್ಯಗಳು ಮತ್ತು ಅಗತ್ಯ ಶಿಕ್ಷಕರಿಲ್ಲದ ಕಾರಣ, ಪ್ರಸ್ತುತ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡಿ, ಮುಂದಿನ ವರ್ಷದಿಂದ ನೀತಿಯನ್ನು ಜಾರಿಗೊಳಿಸಬಹುದೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸಿಬಿಎಸ್‌ಇ ಮಂಡಳಿಗೆ ನ್ಯಾಯಪೀಠ ಇದೇ ವೇಳೆ ಸೂಚಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ತ್ರಿಭಾಷಾ ನೀತಿಯು ಇಂಗ್ಲಿಷ್ ಅನ್ನು ಸ್ಥಳೀಯವಲ್ಲದ (non-native) ಭಾಷೆ ಎಂದು ಪರಿಗಣಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ’ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಿಎಸ್‌ಇ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, “ಸಂವಿಧಾನದ ಪ್ರಕಾರ ಇಂಗ್ಲಿಷ್ ಒಂದು ಅಧಿಕೃತ ಭಾಷೆಯಾಗಿದೆ. ಅದನ್ನು ವಿದೇಶಿ ಭಾಷೆ ಎಂದು ಪರಿಗಣಿಸಲಾಗುವುದಿಲ್ಲ, ಆದರೆ ಸ್ಥಳೀಯ (native) ಭಾಷೆ ಎಂದೂ ಹೇಳಲಾಗುವುದಿಲ್ಲ. ಭಾಷೆಯೆಂಬುದು ಸಂಸ್ಕೃತಿಯ ವಾಹಕ” ಎಂದು ಸಮರ್ಥಿಸಿಕೊಂಡರು.
ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ, “ಹೊಸ ಶಿಕ್ಷಣ ನೀತಿಯಲ್ಲಿ ಬಳಸಲಾದ ‘ನೇಟಿವ್’ (ಸ್ಥಳೀಯ) ಎಂಬ ಪದದ ಬಗ್ಗೆ ನನಗೆ ವೈಯಕ್ತಿಕವಾಗಿ ಆಕ್ಷೇಪವಿದೆ. ಇದು ವಸಾಹತುಶಾಹಿ ಮನಸ್ಥಿತಿಯನ್ನು ಬಿಂಬಿಸುತ್ತದೆ. ಅದರ ಬದಲು ‘ಇಂಡಿಜಿನಸ್’ (ದೇಶೀಯ) ಎಂಬ ಪದವನ್ನು ಬಳಸಬೇಕಿತ್ತು. ಭಾರತದಲ್ಲಿ ಇಂಗ್ಲಿಷ್ ಭಾಷೆಯ ಐತಿಹಾಸಿಕ ಹಿನ್ನೆಲೆಯನ್ನು ನೋಡಿದಾಗ, ಅದನ್ನು ದೇಶೀಯವಲ್ಲದ ಭಾಷೆ ಎಂದು ವರ್ಗೀಕರಿಸಬಹುದೇ ಎಂಬುದನ್ನು ಸಾಂವಿಧಾನಿಕ ದೃಷ್ಟಿಕೋನದಿಂದ ನಾವು ಪರಿಶೀಲಿಸಬೇಕಾಗಿದೆ” ಎಂದು ತಿಳಿಸಿದರು.
ಸಿಬಿಎಸ್‌ಇ ತ್ರಿಭಾಷಾ ಸೂತ್ರದ ಅಡಿಯಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿ ಮೂರು ಭಾಷೆಗಳನ್ನು ಕಲಿಯುವುದು ಕಡ್ಡಾಯವಾಗಿದ್ದು, ಅದರಲ್ಲಿ ಕನಿಷ್ಠ ಎರಡು “ಭಾರತೀಯ ಭಾಷೆಗಳು” ಆಗಿರಬೇಕು ಎಂಬ ನಿಯಮವಿದೆ.
ಈ ನಿಯಮದ ಪ್ರಾಯೋಗಿಕ ಜಾರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, “ದೇಶದಲ್ಲಿ ಕೇವಲ ಶೇ. 4ರಷ್ಟು ಶಾಲೆಗಳು ಮಾತ್ರ ಸಿಬಿಎಸ್‌ಇ ವ್ಯಾಪ್ತಿಗೆ ಬರುತ್ತವೆ. ಉಳಿದ ಶೇ. 96ರಷ್ಟು ಶಾಲೆಗಳು ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿವೆ. ಏಕಾಏಕಿ ಹೊಸ ಭಾಷೆಯನ್ನು ಕಡ್ಡಾಯಗೊಳಿಸಿದರೆ, ಉದಾಹರಣೆಗೆ ಸಂಸ್ಕೃತವನ್ನು ಕಲಿಸಲು ಬಿ.ಇಡಿ (B.Ed) ಪದವಿ ಪಡೆದ ಎಷ್ಟು ಶಿಕ್ಷಕರಿದ್ದಾರೆ? ಶಿಕ್ಷಕರು ಸಂಸ್ಕೃತದಲ್ಲಿ ವಿದ್ವಾಂಸರಾಗಿರಬಹುದು, ಆದರೆ ಬಿ.ಇಡಿ ಅರ್ಹತೆ ಇದೆಯೇ ಎಂಬುದು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿಗಳಿಗೆ ಈ ಹೊಸ ಬದಲಾವಣೆಗೆ ಹೊಂದಿಕೊಳ್ಳಲು ಮತ್ತು ಮೂಲಸೌಕರ್ಯ ಕಲ್ಪಿಸಲು ಸಾಕಷ್ಟು ಸಮಯಾವಕಾಶ ಬೇಕು. ಹಾಗಾಗಿ, ಈ ಬಗ್ಗೆ ಮಂಡಳಿಯು ಮರುಪರಿಶೀಲನೆ ನಡೆಸಬೇಕು” ಎಂದು ಕಿವಿಮಾತು ಹೇಳಿತು. ಈ ಕುರಿತು ತಜ್ಞರೊಂದಿಗೆ ಚರ್ಚಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡುವುದಾಗಿ ಸಿಬಿಎಸ್‌ಇ ಪರ ವಕೀಲರು ತಿಳಿಸಿದ್ದಾರೆ.




