ಸರ್ಕಾರಿ ಶಾಲೆಗಳಲ್ಲಿ ಯಾವುದೇ ಮಗುವನ್ನು ಹಿಂದೂ ಪ್ರಾರ್ಥನೆಗಳನ್ನು ಪಠಿಸಲು ಬಲವಂತಪಡಿಸುವಂತಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.
ಜೂನ್ 12 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಅಬ್ದುಲ್ ಸಲಾಮ್ ರಿಜ್ವಿ, ಮಹೇಂದ್ರ ಛಾಬ್ಡಾ ಮತ್ತು ಶಫೀಕ್ ಅಹ್ಮದ್ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸುತ್ತೋಲೆಯು ಶಾಲೆಗಳಲ್ಲಿ ಸರಸ್ವತಿ ವಂದನೆ, ಗಾಯತ್ರಿ ಮಂತ್ರ, ಗುರು ಮಂತ್ರ, ದೀಪ ಮಂತ್ರ, ಭೋಜನ ಮಂತ್ರ ಮತ್ತು ಶಾಂತಿ ಮಂತ್ರಗಳನ್ನು ಪಠಿಸುವುದನ್ನು ಕಡ್ಡಾಯಗೊಳಿಸಿತ್ತು. ಅಲ್ಲದೆ, ಮಹಾನ್ ವ್ಯಕ್ತಿಗಳ ಜೀವನಚರಿತ್ರೆಯನ್ನು ಓದುವುದನ್ನು ಸಹ ಇದು ಕಡ್ಡಾಯಗೊಳಿಸಿತ್ತು.
ಸುತ್ತೋಲೆಯನ್ನು ಜೂನ್ ಆರಂಭದಲ್ಲಿ ಹೊರಡಿಸಿದ್ದರೂ, ಅದರ ಅನುಷ್ಠಾನ ಇನ್ನೂ ಪ್ರಾರಂಭವಾಗಿಲ್ಲ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು.
ಒಂದು ವೇಳೆ ಯಾವುದೇ ಮಗುವನ್ನು ಪ್ರಾರ್ಥನೆಯಲ್ಲಿ ಭಾಗವಹಿಸಲು ಬಲವಂತಪಡಿಸಿದರೆ, ಅರ್ಜಿದಾರರು ಮತ್ತೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ನ್ಯಾಯಪೀಠವು ತಿಳಿಸಿದೆ. ಅಂತಹ ಬಲವಂತದ ಪ್ರಕರಣಗಳು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ಇದನ್ನೂ ಓದಿ: ಮಹಾರಾಷ್ಟ್ರ | ಬಕ್ರೀದ್‌ಗಾಗಿ ಕುರಿ ಕಟ್ಟಿದ್ದ ಮುಸ್ಲಿಮರ ಶೆಡ್ಡಿಗೆ ‘ಹಂದಿ’ ಬಿಡಲು ಯತ್ನಿಸಿ ಹಿಂದುತ್ವವಾದಿಗಳ ದಾಂಧಲೆ
ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದ ಮಂತ್ರಗಳನ್ನು ಕಡ್ಡಾಯಗೊಳಿಸುವುದು ಸಂವಿಧಾನದ ಜಾತ್ಯತೀತ ತತ್ವಗಳಿಗೆ ಮತ್ತು ಧಾರ್ಮಿಕ ತಟಸ್ಥತೆಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಈ ಸುತ್ತೋಲೆಯು ವಿದ್ಯಾರ್ಥಿಗಳ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಮತ್ತು ಪ್ರಾರ್ಥನೆಯಲ್ಲಿ ಭಾಗವಹಿಸಲು ಇಚ್ಛಿಸದ ವಿದ್ಯಾರ್ಥಿಗಳಿಗೆ ಯಾವುದೇ ವಿನಾಯಿತಿ ನೀಡಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಸರ್ಕಾರಿ ಧನಸಹಾಯ ಪಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಧರ್ಮದ ಆಚರಣೆಗಳನ್ನು ಪ್ರಚಾರ ಮಾಡುವುದು ಅಸಂವಿಧಾನಿಕ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.




