ಡಿಜಿಟಲ್ ಯುಗದಲ್ಲಿ ವೇಗವಾಗಿ ಹರಡುತ್ತಿರುವ ಸುಳ್ಳು ಸುದ್ದಿಗಳು ಹಾಗೂ ಸಂವೇದನಾರಹಿತ ವರದಿಗಾರಿಕೆಯಿಂದಾಗಿ ಮಾಧ್ಯಮಗಳ ಮೇಲಿನ ಸಾರ್ವಜನಿಕರ ವಿಶ್ವಾಸ ಕುಸಿಯುತ್ತಿದೆ. ಈ ನಂಬಿಕೆಯನ್ನು ಮರಳಿ ಗಳಿಸಲು ಕೇವಲ ಕ್ಷೇತ್ರ ಮಟ್ಟದ ನೈಜ ವರದಿಗಾರಿಕೆ (Ground Reporting), ತನಿಖಾ ಪತ್ರಿಕೋದ್ಯಮ (Investigative Journalism), ಸುದೀರ್ಘ ಹಾಗೂ ವಿವರಣಾತ್ಮಕ ಬರವಣಿಗೆಗಳಿಂದ ಮಾತ್ರ ಸಾಧ್ಯ ಎಂದು ಹಿರಿಯ ಪತ್ರಕರ್ತ ಹಾಗೂ ‘ದಿ ಹಿಂದೂ’ ಸಮೂಹದ ಪ್ರಕಾಶಕ ಎನ್ ರಾಮ್ ಪ್ರತಿಪಾದಿಸಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಚಲಿತ ಬೆಳವಣಿಗೆಗಳು ಮತ್ತು ಪತ್ರಿಕೋದ್ಯಮದ ಭವಿಷ್ಯದ ಕುರಿತು ಮಾತನಾಡುತ್ತಾ, ಪ್ರಸ್ತುತ ಮಾಧ್ಯಮ ವಲಯವು ಎದುರಿಸುತ್ತಿರುವ ಸವಾಲುಗಳನ್ನು ಉಲ್ಲೇಖಿಸಿದರು. ತಳಮಟ್ಟದ ನೈಜ ಸ್ಥಿತಿಯನ್ನು ಜನರ ಮುಂದೆ ತಡುವ ವರದಿಗಳು ಮಾಧ್ಯಮದ ಬೆನ್ನೆಲುಬಾಗಬೇಕು. ಮೇಲ್ಮೈ ಸುದ್ದಿಗಳಿಗಿಂತ ಘಟನಾ ಸ್ಥಳಕ್ಕೆ ತೆರಳಿ ಸತ್ಯಶೋಧನೆ ಮಾಡುವುದು ಅತ್ಯಗತ್ಯ ಎಂದು ಹೇಳಿದರು.
ಇದನ್ನೂ ಓದಿ: ಭಾರತದ ಚುನಾವಣೆ ತಿರುವು ಪಡೆಯುತ್ತಿದೆಯೆ? ಹಿರಿಯ ಪತ್ರಕರ್ತ ಎನ್ ರಾಮ್ ಪ್ರಶ್ನೆ
ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ, ಭ್ರಷ್ಟಾಚಾರ ಹಾಗೂ ಸಾಮಾಜಿಕ ಅನ್ಯಾಯಗಳನ್ನು ಬಯಲಿಗೆಳೆಯುವ ತನಿಖಾ ವರದಿಗಳು ಪತ್ರಿಕೋದ್ಯಮದ ಪ್ರಾಮಾಣಿಕತೆಯನ್ನು ಹೆಚ್ಚಿಸುತ್ತವೆ. ಘಟನೆಗಳ ಹಿನ್ನೆಲೆ, ಪರಿಣಾಮ ಮತ್ತು ಆಳವಾದ ವಿಶ್ಲೇಷಣೆ ನೀಡುವ ಸುದೀರ್ಘ ಲೇಖನಗಳು ಓದುಗರಿಗೆ ವಿಷಯದ ಸ್ಪಷ್ಟತೆಯನ್ನು ನೀಡುತ್ತವೆ. ಇದು ಆತುರದ ಮತ್ತು ಅರ್ಧಮರ್ಧ ಮಾಹಿತಿಗಳ ನಡುವೆ ಸಾರ್ವಜನಿಕರಿಗೆ ನಿಖರ ದಾರಿ ತೋರುತ್ತದೆ ಎಂದು ತಿಳಿಸಿದರು.
ಆಧುನಿಕ ಮಾಧ್ಯಮ ಪರಿಸರದಲ್ಲಿ ಶೀರ್ಷಿಕೆಗಳ ಹಾವಳಿ ಮತ್ತು ಆಕರ್ಷಕ ಸುದ್ದಿಗಳ ನಡುವೆ, ನೈಜತೆ ಹಾಗೂ ಜವಾಬ್ದಾರಿಯುತ ಬರವಣಿಗೆಗಳು ಮಾತ್ರ ಸಾರ್ವಜನಿಕರಲ್ಲಿ ಪತ್ರಿಕೋದ್ಯಮದ ಮೇಲಿನ ಗಂಭೀರತೆಯನ್ನು ಉಳಿಸಬಲ್ಲವು ಎಂದು ಅಭಿಪ್ರಾಯಪಟ್ಟಿದ್ದಾರೆ.




