ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ಹಸಿದ ತನ್ನ ಮಗುವಿಗಾಗಿ ಹಾಲು ಕಾಯಿಸುತ್ತಿದ್ದ ವಸತಿಹೀನ ಬಡಪಾಯಿ ಮಹಿಳೆಯೊಬ್ಬರನ್ನು ಕ್ಯಾಮೆರಾ ಮುಂದೆಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ದರ್ಪ ಮೆರೆದ ಪಶ್ಚಿಮ ಬಂಗಾಳದ ಸಚಿವೆ ಅಗ್ನಿಮಿತ್ರಾ ಪಾಲ್ ಅವರ ಅಮಾನವೀಯ ವರ್ತನೆಗೆ ಇದೀಗ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕನಿಷ್ಠ ಮಾನವೀಯತೆಯನ್ನೂ ತೋರದೆ, ಬಡ ಕುಟುಂಬದ ಬೆರಳೆಣಿಕೆಯಷ್ಟು ವಸ್ತುಗಳನ್ನು ಎಸೆದು ಅವರ ಸೂರು ಕಸಿದ ಸಚಿವರ ಈ ‘ಒಕ್ಕಲೆಬ್ಬಿಸುವ ಕಾರ್ಯಾಚರಣೆ’ಯನ್ನು ಸಾರ್ವಜನಿಕರು, ಕಲಾವಿದರು, ಸಾಹಿತಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಕಟುವಾಗಿ ಟೀಕಿಸಿದ್ದು, ಸಚಿವೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದಿದ್ದಾರೆ.
ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್‌ನ ಫುಟ್‌ಪಾತ್ ಮೇಲೆ ನಿರ್ಗತಿಕ ಕುಟುಂಬವೊಂದು ಆಶ್ರಯ ಪಡೆದಿತ್ತು. ಬಟ್ಟೆಯಿಲ್ಲದ ಮಗುವೊಂದು ಅಲ್ಲಿ ಆಟವಾಡುತ್ತಿದ್ದರೆ, ಆ ಮಗುವಿನ ಅಜ್ಜಿ ಸಣ್ಣದೊಂದು ಸ್ಟವ್ ಉರಿಸಿ ಹಾಲು ಕಾಯಿಸುತ್ತಿದ್ದರು. ಈ ವೇಳೆ ಪೊಲೀಸ್ ಪಡೆ ಹಾಗೂ ಮಾಧ್ಯಮಗಳ ಕ್ಯಾಮೆರಾಗಳೊಂದಿಗೆ ಏಕಾಏಕಿ ಅಲ್ಲಿಗೆ ಆಗಮಿಸಿದ ಸಚಿವೆ ಅಗ್ನಿಮಿತ್ರಾ ಪಾಲ್, ‘ಫುಟ್‌ಪಾತ್ ಮೇಲೆ ಏಕೆ ಅಡುಗೆ ಮಾಡುತ್ತಿದ್ದೀರಿ? ಇದೇನು ನಿಮ್ಮ ಮನೆಯೇ’ ಎಂದು ವೃದ್ಧೆಯನ್ನು ಗದರಿದ್ದರು. ತಾನು ಕೇವಲ ಮಗುವಿಗೆ ಹಾಲು ಕಾಯಿಸುತ್ತಿರುವುದಾಗಿ ಅಜ್ಜಿ ದೈನ್ಯತೆಯಿಂದ ಹೇಳಿದರೂ ಕೇಳದ ಸಚಿವೆ, ಆ ಕುಟುಂಬದ ಚಾಪೆ, ಬಟ್ಟೆಬರೆ ಸೇರಿದಂತೆ ಪಾತ್ರೆಗಳನ್ನು ಎಸೆಯಲು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ದರ್ಪದ ವಿಡಿಯೊವನ್ನು ಸ್ವತಃ ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಸಮರ್ಥಿಸಿಕೊಳ್ಳುವ ಯತ್ನ ಮಾಡಿದ್ದರು.
ಸಚಿವರ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ತೀವ್ರ ಟೀಕಾಪ್ರಹಾರಗಳು ಶುರುವಾಗಿವೆ. ವಾಣಿಜ್ಯ ಉದ್ದೇಶಕ್ಕಾಗಿ ಫುಟ್‌ಪಾತ್ ಒತ್ತುವರಿ ಮಾಡುವವರನ್ನು ಹಾಗೂ ಹಸಿದ ಮಗುವಿಗಾಗಿ ಹಾಲು ಕಾಯಿಸುತ್ತಿದ್ದ ಅಜ್ಜಿಯನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಎಷ್ಟು ಸರಿ ಎಂದು ಖ್ಯಾತ ನಟಿ ಶ್ರೀಲೇಖಾ ಮಿತ್ರಾ ಪ್ರಶ್ನಿಸಿದ್ದಾರೆ. ನಟ ರಿದ್ಧಿ ಸೇನ್, ಗಾಯಕ ದುರ್ನಿಬಾರ್ ಸಹಾ ಮತ್ತು ಕವಿ ಶ್ರೀಜಾತೋ ಸೇರಿದಂತೆ ಹಲವು ಗಣ್ಯರು ಸಚಿವರ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ. “ಬಡವರನ್ನು ದಮನ ಮಾಡುವುದು ಹಾಗೂ ಅವರ ಗುಡಿಸಲುಗಳನ್ನು ಕಿತ್ತುಕೊಳ್ಳುವುದು ಅಭಿವೃದ್ಧಿಯಲ್ಲ. ಈ ಘಟನೆಯು ಸರ್ಕಾರದ ಮೇಲಿನ ನಂಬಿಕೆಯನ್ನೇ ಹುಸಿಗೊಳಿಸಿದೆ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ನಂತರ ವಿರೋಧ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಕುನಾಲ್ ಘೋಷ್ ಅವರು ಸ್ಥಳಕ್ಕೆ ಭೇಟಿ ನೀಡಿ ಆ ನಿರ್ಗತಿಕ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜಾಗ ಖಾಲಿ ಮಾಡದಿದ್ದರೆ ಬಲವಂತವಾಗಿ ಒಕ್ಕಲೆಬ್ಬಿಸುವ ಪೊಲೀಸರ ಬೆದರಿಕೆಯ ಬಗ್ಗೆ ಆಲಿಸಿದ ಅವರು, ಪರ್ಯಾಯ ವಸತಿ ಕಲ್ಪಿಸದೆ ಆ ಬಡ ಕುಟುಂಬವನ್ನು ದಿಢೀರ್ ಒಕ್ಕಲೆಬ್ಬಿಸಲು ಮುಂದಾದ ಸಚಿವೆಯ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮತ್ತೊಂದೆಡೆ, ಸಿಪಿಐ(ಎಂ) ಅಂಗಸಂಸ್ಥೆಯಾದ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ (AIDWA) ಕೂಡ ಸಚಿವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ. ಸಂಘಟನೆಯ ಮುಖಂಡರಾದ ಜಹನಾರಾ ಖಾನ್ ಮತ್ತು ಮೊನಾಲಿಸಾ ಸಿನ್ಹಾ ಅವರು ಪ್ರತಿಕ್ರಿಯಿಸಿದ್ದು, “ಹಸಿದ ಮಗುವಿಗೆ ಹಾಲು ಕಾಯಿಸುತ್ತಿದ್ದ ಮಹಿಳೆಯೊಂದಿಗೆ ಈ ರೀತಿ ಅಮಾನವೀಯವಾಗಿ ನಡೆದುಕೊಂಡ ಸಚಿವೆ ಅಗ್ನಿಮಿತ್ರಾ ಪಾಲ್ ಅವರು ಬಡವರ ಮೇಲೆ ದರ್ಪ ತೋರಿದ್ದಾರೆ. ಅವರು ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.




