ಶಿರೋಮಣಿ ಅಕಾಲಿದಳ (ಎಸ್‌ಎಡಿ) ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರು ಶುಕ್ರವಾರ ನವದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೇವಲ 10 ನಿಮಿಷಗಳ ಕಾಲ ನಡೆದ ಈ ಹಠಾತ್ ಭೇಟಿಯು, 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಎಸ್‌ಎಡಿ ಮತ್ತು ಬಿಜೆಪಿ ನಡುವಿನ ಮೈತ್ರಿ ಮತ್ತೆ ಚಿಗುರುವ ಊಹಾಪೋಹಗಳಿಗೆ ಬಲ ನೀಡಿದೆ.
ಭೇಟಿಯ ಅಜೆಂಡಾವನ್ನು ಬಾದಲ್ ಅವರ ಕಚೇರಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ, ಪಂಜಾಬ್‌ನ ಕಾನೂನು ಸುವ್ಯವಸ್ಥೆ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಎಎಪಿ) ಸರ್ಕಾರದ ಕಲ್ಯಾಣ ಯೋಜನೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಚರ್ಚಿಸಲಾಗಿದೆ ಎಂದು ಅಕಾಲಿದಳದ ಮೂಲಗಳು ತಿಳಿಸಿವೆ. “ಮಧ್ಯಾಹ್ನ ನಡೆದ ಈ ಭೇಟಿ ಅತ್ಯಂತ ಸೌಹಾರ್ದಯುತವಾಗಿತ್ತು” ಎಂದು ಮೂಲಗಳು ಹೇಳಿವೆ.
ಅಕಾಲಿದಳದ ಹಿರಿಯ ನಾಯಕ ದಲ್ಜೀತ್ ಸಿಂಗ್ ಚೀಮಾ ಪ್ರತಿಕ್ರಿಯಿಸಿ, “ಒಂದು ರಾಜ್ಯದ ಪಕ್ಷದ ಅಧ್ಯಕ್ಷರು ಪ್ರಧಾನಿಯನ್ನು ಭೇಟಿಯಾಗಬಾರದೇ? ಎಎಪಿ ಮತ್ತು ಕಾಂಗ್ರೆಸ್ ಈ ಭೇಟಿಯನ್ನು ನೋಡಿ ಅಭದ್ರತೆ ಹಾಗೂ ಭಯಕ್ಕೆ ಒಳಗಾಗಿವೆ. ಶನಿವಾರ ಪಂಜಾಬ್‌ಗೆ ಮರಳಿದ ಬಳಿಕ ಸುಖ್‌ಬೀರ್ ಅವರೇ ಭೇಟಿಯ ಸಂಪೂರ್ಣ ವಿವರ ನೀಡಲಿದ್ದಾರೆ” ಎಂದಿದ್ದಾರೆ.
ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು (ಈಗ ರದ್ದಾಗಿರುವ) ವಿರೋಧಿಸಿ 2020ರ ಸೆಪ್ಟೆಂಬರ್‌ನಲ್ಲಿ ಅಕಾಲಿದಳವು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಇದೀಗ 6 ವರ್ಷಗಳ ಬಳಿಕ ಉಭಯ ನಾಯಕರ ನಡುವೆ ನಡೆದಿರುವ ಈ ಭೇಟಿಯನ್ನು ರಾಜಕೀಯವಾಗಿ ‘ಐಸ್ ಬ್ರೇಕರ್’ (ಬಾಂಧವ್ಯ ವೃದ್ಧಿಯ ಮೊದಲ ಹೆಜ್ಜೆ) ಎನ್ನಲಾಗುತ್ತಿದೆ.
ಎಸ್‌ಎಡಿಯ ಗ್ರಾಮೀಣ ಹಾಗೂ ಪಂಥೀಯ ಮತ ಬ್ಯಾಂಕ್ ಮತ್ತು ಬಿಜೆಪಿಯ ನಗರ ಪ್ರದೇಶದ ಮತ ಬ್ಯಾಂಕ್ ಒಗ್ಗೂಡಿದರೆ ಎಎಪಿ ವಿರುದ್ಧ ಪ್ರಬಲ ಹೋರಾಟ ನಡೆಸಬಹುದು ಎಂಬುದು ಕೆಲವು ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ. ಆದರೆ, ಈ ಬಾರಿ ಮೈತ್ರಿ ಏರ್ಪಟ್ಟರೆ ಹಿಂದಿನಂತೆ ಅಕಾಲಿದಳದ ಪ್ರಾಬಲ್ಯಕ್ಕೆ ಮಣಿಯದೆ, ‘ದೊಡ್ಡಣ್ಣ’ನ (ಹಿರಿಯ ಮಿತ್ರಪಕ್ಷ) ಸ್ಥಾನವನ್ನು ತಾನೇ ಪಡೆಯಲು ಬಿಜೆಪಿ ಬಯಸಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಈ ಭೇಟಿಯ ಬಗ್ಗೆ ವಿಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿವೆ. ಎಎಪಿ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿ, ಬಾಲಿವುಡ್‌ನ “ನಾ ನಾ ಕರ್ತೆ ಪ್ಯಾರ್ ತುಮ್ಹೀ ಸೆ ಕರ್ ಬೈಟೆ…” (ಬೇಡ ಬೇಡ ಎನ್ನುತ್ತಲೇ ಪ್ರೀತಿಯಲ್ಲಿ ಬಿದ್ದೆ) ಹಾಡಿನ ಸಾಲನ್ನು ಉಲ್ಲೇಖಿಸಿ ಲೇವಡಿ ಮಾಡಿದ್ದಾರೆ. “ಚಂದಾ ಕಳ್ಳರ ಪಕ್ಷ ಮತ್ತು ಅಪವಿತ್ರ ಪಕ್ಷದ (ಬೆಯಾದ್ಬಿ) ಮೈತ್ರಿ ಕೊನೆಗೂ ರೂಪುಗೊಳ್ಳುತ್ತಿದೆಯೇ?” ಎಂದು ವ್ಯಂಗ್ಯವಾಡಿದ್ದಾರೆ.
ಇತ್ತ ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ಪ್ರತಾಪ್ ಸಿಂಗ್ ಬಾಜ್ವಾ ಪ್ರತಿಕ್ರಿಯಿಸಿ, “ಎರಡು ದೊಡ್ಡ ಸೊನ್ನೆಗಳು ಮತ್ತೆ ಒಂದಾಗುತ್ತಿವೆ. ಬಿಜೆಪಿ ಒಂಟಿಯಾಗಿ ಸ್ಪರ್ಧಿಸಲು ಪ್ರಯತ್ನಿಸಿ ವಿಫಲವಾಯಿತು, ಅಕಾಲಿದಳವನ್ನೂ ಟೀಕಿಸಿತು. ಈಗ ಮತ್ತೆ ಒಂದಾಗುತ್ತಿದ್ದಾರೆ. ಆದರೆ ಇವರಿಬ್ಬರು ಸೇರಿದರೂ ರಾಜ್ಯದ ರಾಜಕೀಯದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ” ಎಂದು ಹೇಳಿದ್ದಾರೆ.




