ಕೇರಳದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಕಣ್ಣೂರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ನವೀನ್ ಬಾಬು ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರವು ಇದೀಗ ಸಿಬಿಐ ತನಿಖೆಗೆ ಆದೇಶಿಸಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ. ಆದರೆ, ಸರ್ಕಾರದ ಈ ದಿಢೀರ್ ನಡೆಯನ್ನು ವಿಪಕ್ಷ ಸಿಪಿಐ(ಎಂ) ನಾಯಕರು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಕಳೆದ 2024ರ ಅಕ್ಟೋಬರ್ ತಿಂಗಳಲ್ಲಿ ನವೀನ್ ಬಾಬು ಅವರು ಕಣ್ಣೂರಿನ ತಮ್ಮ ಅಧಿಕೃತ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಂದಿನ ಕಣ್ಣೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹಾಗೂ ಸಿಪಿಐ(ಎಂ) ನಾಯಕಿ ಪಿ.ಪಿ. ದಿವ್ಯಾ ಅವರು ಆಹ್ವಾನವಿಲ್ಲದೆ ಆಗಮಿಸಿ, ಭ್ರಷ್ಟಾಚಾರದ ಆರೋಪಗಳನ್ನು ಮಾಡಿ ಸಾರ್ವಜನಿಕವಾಗಿ ಅವಮಾನಿಸಿದ್ದರು. ಈ ಘಟನೆಯಿಂದ ತೀವ್ರ ಮನನೊಂದು ನವೀನ್ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಆರೋಪವಿತ್ತು. ಬಳಿಕ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ದಿವ್ಯಾ ಅವರನ್ನು ಬಂಧಿಸಲಾಗಿತ್ತು ಹಾಗೂ ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಇದನ್ನು ಓದಿದ್ದೀರಾ? ಯು-ಟರ್ನ್ ಹೊಡೆದ ಸಿಬಿಎಸ್ಇ: ಆನ್ಲೈನ್ ಮೌಲ್ಯಮಾಪನ ಭದ್ರತಾ ಲೋಪ ಒಪ್ಪಿಕೊಂಡ ಮಂಡಳಿ
ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ನವೀನ್ ಬಾಬು ಅವರ ಪತ್ನಿ ಮಂಜುಷಾ ಅವರು ಈ ಹಿಂದೆ ಕೇರಳ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಿರಾಕರಿಸಿದ್ದ ನ್ಯಾಯಾಲಯಗಳು ಆ ಅರ್ಜಿಯನ್ನು ವಜಾಗೊಳಿಸಿದ್ದವು. ಇತ್ತೀಚೆಗಷ್ಟೇ ತಲಶ್ಶೇರಿಯ ಸೆಷನ್ಸ್ ನ್ಯಾಯಾಲಯವು, ಪ್ರಕರಣದ ಕೆಲವು ಆಯಾಮಗಳ ಬಗ್ಗೆ ಪೊಲೀಸರ ವಿಶೇಷ ತನಿಖಾ ತಂಡಕ್ಕೆ ಮರುತನಿಖೆ ನಡೆಸುವಂತೆ ಸೂಚಿಸಿತ್ತು. ಇದರ ಬೆನ್ನಲ್ಲೇ, ಇದೀಗ ರಾಜ್ಯ ಸರ್ಕಾರವೇ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ಮುಂದಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸರ್ಕಾರದ ಈ ನಿರ್ಧಾರವು ರಾಜಕೀಯ ವಲಯದಲ್ಲಿ, ವಿಶೇಷವಾಗಿ ಸಿಪಿಐ(ಎಂ) ಪಕ್ಷದೊಳಗೆ ತೀವ್ರ ಅಸಮಾಧಾನ ಹಾಗೂ ಚರ್ಚೆಗೆ ಗ್ರಾಸವಾಗಿದೆ.




