ಉತ್ತರ ಪ್ರದೇಶದ ಬಲರಾಮ್‌ಪುರ ಜಿಲ್ಲೆಯ ಎರಡು ಸರ್ಕಾರಿ ಧಾನ್ಯ ಸಂಗ್ರಹಣಾ ಕೇಂದ್ರಗಳಿಂದ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಸರ್ಕಾರಿ ಗೋಧಿ ನಾಪತ್ತೆಯಾಗಿರುವುದು ಕಳೆದೆರಡು ದಿನಗಳ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಬಿ-ಪ್ಯಾಕ್ಸ್ ಉಸ್ತುವಾರಿ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಲರಾಮ್‌ಪುರ ಜಿಲ್ಲೆಯ ‘ಬಿ-ಪ್ಯಾಕ್ಸ್ ತುಳಸೀಪುರ’ ವ್ಯಾಪ್ತಿಯ ನಚೌರಾ ಮತ್ತು ಕೌವಾಪುರ್ ಗೋಧಿ ಖರೀದಿ ಕೇಂದ್ರಗಳಲ್ಲಿ ಸೆಪ್ಟೆಂಬರ್ 11ರಂದು ಅಧಿಕಾರಿಗಳ ಜಂಟಿ ತಂಡವು ದಿಢೀರ್ ತಪಾಸಣೆ ನಡೆಸಿದಾಗ ಈ ಬೃಹತ್ ಅಕ್ರಮ ಬಯಲಾಗಿದೆ.
ಇದನ್ನೂ ಓದಿ: ಫೋನ್ ಪೇ, ಗೂಗಲ್ ಪೇ ಬಳಕೆಗೂ ಜಿಎಸ್‌ಟಿ ಬಿದ್ದರೆ ಮುಂದೇನು?
ಈ ಕೇಂದ್ರದ ದಾಸ್ತಾನು ದಾಖಲೆಗಳ ಪ್ರಕಾರ ಒಟ್ಟು 420.87 ಮೆಟ್ರಿಕ್ ಟನ್ ಗೋಧಿ ಖರೀದಿಸಲಾಗಿತ್ತು. ಅದರಲ್ಲಿ 353.759 ಮೆಟ್ರಿಕ್ ಟನ್ ಗೋಧಿಯನ್ನು ಭಾರತೀಯ ಆಹಾರ ನಿಗಮಕ್ಕೆ (FCI) ರವಾನಿಸಲಾಗಿತ್ತು. ನಿಯಮಾವಳಿ ಪ್ರಕಾರ ಇನ್ನುಳಿದ 67.111 ಮೆಟ್ರಿಕ್ ಟನ್ ಗೋಧಿ ಗೋದಾಮಿನಲ್ಲಿ ಸಂಗ್ರಹವಾಗಿರಬೇಕಿತ್ತು. ಆದರೆ ತಪಾಸಣಾ ತಂಡ ಭೇಟಿ ನೀಡಿದಾಗ ಅಧಿಕಾರಿಗಳು ಗೋದಾಮಿನ ಕೀಲಿಕೈ ನೀಡಲಿಲ್ಲ. ಕಿಟಕಿಯಿಂದ ಪರಿಶೀಲಿಸಿದಾಗ ಗೋದಾಮು ಸಂಪೂರ್ಣ ಖಾಲಿಯಾಗಿರುವುದು ಕಂಡುಬಂದಿದೆ.
ದಾಖಲೆಗಳ ಪ್ರಕಾರ ಇಲ್ಲಿ 322.600 ಮೆಟ್ರಿಕ್ ಟನ್ ಗೋಧಿ ಖರೀದಿ ತೋರಿಸಲಾಗಿತ್ತು. ಇದರಲ್ಲಿ 160.947 ಮೆಟ್ರಿಕ್ ಟನ್ ಗೋಧಿಯನ್ನು FCIಗೆ ಕಳುಹಿಸಲಾಗಿದ್ದು, 161.653 ಮೆಟ್ರಿಕ್ ಟನ್ ಗೋಧಿ ದಾಸ್ತಾನು ಇರಬೇಕಿತ್ತು. ಆದರೆ ಸ್ಥಳದಲ್ಲಿ ಯಾವುದೇ ಧಾನ್ಯ ಇರಲಿಲ್ಲ.
ಎರಡೂ ಕೇಂದ್ರಗಳಿಂದ ಒಟ್ಟು 228.764 ಮೆಟ್ರಿಕ್ ಟನ್ (ಸುಮಾರು 2,287 ಕ್ವಿಂಟಾಲ್) ಗೋಧಿ ಕಣ್ಮರೆಯಾಗಿದೆ. ಪ್ರಸ್ತುತ ಸರ್ಕಾರಿ ಕನಿಷ್ಠ ಬೆಂಬಲ ಬೆಲೆ (MSP) ಕ್ವಿಂಟಾಲ್‌ಗೆ ₹2,605 ರಂತೆ ಈ ನಾಪತ್ತೆಯಾದ ಗೋಧಿಯ ಒಟ್ಟು ಮೌಲ್ಯ ₹59,59,302 (ಸುಮಾರು 60 ಲಕ್ಷ ರೂ.) ಎಂದು ಅಂದಾಜಿಸಲಾಗಿದೆ.
ಪ್ರಾದೇಶಿಕ ಸಹಕಾರಿ ಒಕ್ಕೂಟದ (PCF) ಜಿಲ್ಲಾ ವ್ಯವಸ್ಥಾಪಕ ಅಶ್ವನಿ ಶುಕ್ಲಾ ನೀಡಿದ ದೂರಿನ ಮೇರೆಗೆ ತುಳಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಿ-ಪ್ಯಾಕ್ಸ್ ಉಸ್ತುವಾರಿ ಕಾರ್ಯದರ್ಶಿ ಪ್ರಕಾಶ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ, ಕೇಂದ್ರದ ಉಸ್ತುವಾರಿ ಮಹೇಂದ್ರ ಮಣಿ ತಿವಾರಿ ಅವರ ವಿರುದ್ಧವೂ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಉಳಿದ 24 ಸಹಕಾರಿ ಧಾನ್ಯ ಸಂಗ್ರಹಣಾ ಕೇಂದ್ರಗಳಲ್ಲೂ ತಪಾಸಣೆಗೆ ಜಿಲ್ಲಾಡಳಿತ ಆದೇಶಿಸಿದೆ.





