ಒಂದಲ್ಲ ಒಂದು ಯೋಜನೆಯ ಮೂಲಕ ಬಡವರ ಬದುಕನ್ನು ಇನ್ನಷ್ಟೂ ಅಧೋಗತಿಗೆ ತಳ್ಳುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಈಗ ಕಡುಬಡವರ ತಟ್ಟೆಯ ಅನ್ನಕ್ಕೂ ಕನ್ನ ಹಾಕುತ್ತಿದೆ. ದೇಶದ ಅತಿ ಕಡುಬಡವರ ಹಸಿವು ನೀಗಿಸುವ ಕಲ್ಪವೃಕ್ಷದಂತಿದ್ದ ‘ಅಂತ್ಯೋದಯ ಅನ್ನ ಯೋಜನೆ’ಗೆ (AAY) ಕೇಂದ್ರ ಸರ್ಕಾರವು ತಿದ್ದುಪಡಿ ತರಲು ಹೊರಟಿದೆ. ಈ ಮೂಲಕ ಬಡವರ ಹಸಿವಿನ ಜತೆ ಚೆಲ್ಲಾಟವಾಡುತ್ತಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ (ತಿದ್ದುಪಡಿ) ಮಸೂದೆಯ ಮೂಲಕ ಹೊಸ ನಿಯಮಗಳನ್ನು ತರಲು ಹೊರಟಿದೆ. ಈ ಹೊಸ ತಿದ್ದುಪಡಿಯು ಕಡುಬಡವರ ಹೊಟ್ಟೆಯ ಮೇಲೆ ನೇರ ಪ್ರಹಾರ ನಡೆಸುತ್ತಿದ್ದು, ದಿನಕ್ಕೆ ಎರಡು ಹೊತ್ತಿನ ಕೂಳಿಗೆ ಪಡಿತರ ಅಕ್ಕಿಯನ್ನೇ ನಂಬಿದ್ದ ಲಕ್ಷಾಂತರ ಕುಟುಂಬಗಳನ್ನು ಆತಂಕಕ್ಕೆ ತಳ್ಳಿದೆ.
ಇದನ್ನೂ ಓದಿ: ಭಾರೀ ಸಿರಿವಂತ ಮಾರ್ಕ್ ಜುಕರ್‌ಬರ್ಗ್, ಮೋದಿ ಕ್ಷಮೆ ಕೇಳಿದ ಗುಟ್ಟೇನು ಬಲ್ಲಿರಾ?
ಇಲ್ಲಿಯವರೆಗೆ ಜಾರಿಯಲ್ಲಿದ್ದ ನಿಯಮದಂತೆ, ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಎಷ್ಟು ಜನರೇ ಇರಲಿ, ಪ್ರತಿ ಕುಟುಂಬಕ್ಕೆ ತಿಂಗಳಿಗೆ ಕಡ್ಡಾಯವಾಗಿ 35 ಕೆಜಿ ಉಚಿತ/ಸಬ್ಸಿಡಿ ಆಹಾರಧಾನ್ಯ (ಅಕ್ಕಿ/ಗೋಧಿ) ಸಿಗುತ್ತಿತ್ತು. ಆದರೆ, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ತಂದಿರುವ ಹೊಸ ತಿದ್ದುಪಡಿಯ ಪ್ರಕಾರ ಇನ್ಮುಂದೆ ಪ್ರತಿ ಸದಸ್ಯನಿಗೆ ತಿಂಗಳಿಗೆ 7 ಕೆಜಿ ಧಾನ್ಯ ಮಾತ್ರ ನಿಗದಿಯಾಗುತ್ತದೆ. ಕುಟುಂಬದಲ್ಲಿ 5ಕ್ಕಿಂತ ಹೆಚ್ಚು ಸದಸ್ಯರಿದ್ದರೂ ಸಹ ಆ ಕುಟುಂಬಕ್ಕೆ ಗರಿಷ್ಠ 35 ಕೆಜಿಗಿಂತ ಹೆಚ್ಚು ಆಹಾರಧಾನ್ಯ ಸಿಗಲ್ಲ.
1, 2 ಅಥವಾ 3 ಸದಸ್ಯರಿರುವ ಸಣ್ಣ ಬಡ ಕುಟುಂಬಗಳಿಗೆ (ಉದಾಹರಣೆಗೆ: ವೃದ್ಧ ದಂಪತಿ, ವಿಧವೆಯರು, ಒಬ್ಬಂಟಿ ನಿರಾಶ್ರಿತರು) ಈ ಹಿಂದೆ ಸಿಗುತ್ತಿದ್ದ 35 ಕೆಜಿ ಅಕ್ಕಿಯ ಬದಲಿಗೆ ಈಗ ಕೇವಲ 7 ಕೆಜಿ, 14 ಕೆಜಿ ಅಥವಾ 21 ಕೆಜಿ ಮಾತ್ರ ಸಿಗಲಿದೆ. ಅಂದರೆ, ಅತಿ ಹೆಚ್ಚು ನೆರವು ಬೇಕಾಗಿದ್ದ ಶೋಷಿತ ಕುಟುಂಬಗಳ ಪಡಿತರ ಪ್ರಮಾಣಕ್ಕೆ ಶೇಕಡಾ 60% ರಷ್ಟು ಕತ್ತರಿ ಬಿದ್ದಂತಾಗಿದೆ!
‘ಅಂತ್ಯೋದಯ ಅನ್ನ ಯೋಜನೆ’
ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹಾಗೂ ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ’ಯ (NFSA) ಅಧಿಕೃತ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಸದ್ಯಕ್ಕೆ ಸುಮಾರು 2.50 ಕೋಟಿ ಕಡುಬಡ ಕುಟುಂಬಗಳು ‘ಅಂತ್ಯೋದಯ ಅನ್ನ ಯೋಜನೆ’ಯ (AAY) ರೇಷನ್ ಕಾರ್ಡ್ ಹೊಂದಿವೆ. ಈ ಕುಟುಂಬಗಳಲ್ಲಿ ಜೀವನ ನಡೆಸುತ್ತಿರುವ ಒಟ್ಟು ಸದಸ್ಯರ ಸಂಖ್ಯೆ ಸರಿಸುಮಾರು 8.95 ಕೋಟಿಗೂ ಅಧಿಕ. ಸರಾಸರಿಯಾಗಿ ಹೇಳುವುದಾದರೆ, ದೇಶದ ಕಡುಬಡತನದ ರೇಖೆಗಿಂತ ಕೆಳಗಿರುವ ಸುಮಾರು 9 ಕೋಟಿಗೆ ಸಮೀಪವಿರುವ ಜನರು ಈ ಯೋಜನೆಯಿಂದಲೇ ತಮ್ಮ ದಿನನಿತ್ಯದ ಉಚಿತ/ಸಬ್ಸಿಡಿ ಆಹಾರಧಾನ್ಯ ಪಡೆದು ಜೀವನ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು 11 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಅಂತ್ಯೋದಯ ಕಾರ್ಡ್ ಹೊಂದಿದ್ದು, ಸುಮಾರು 40 ಲಕ್ಷಕ್ಕೂ ಅಧಿಕ ಜನರು ಇದರ ನೇರ ಪ್ರಯೋಜನ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಗದಗ | ಅಕ್ರಮ ಪಡಿತರ ಅಕ್ಕಿ ಅಧಿಕಾರಿಗಳ ವಶ
ಈಗಾಗಲೇ ತಾಂತ್ರಿಕ ಲೋಪ, ಬಯೋಮೆಟ್ರಿಕ್ ಬೆರಳಚ್ಚು ಸಿಗದ ವೃದ್ಧರು ಹಾಗೂ ಕೂಲಿ ಕಾರ್ಮಿಕರ ಕಾರ್ಡ್‌ಗಳು ರದ್ದಾಗುತ್ತಿವೆ. ಇದೀಗ ಈ ಕೇಂದ್ರ ಸರ್ಕಾರ ಬಡವರ ವಿರೋಧಿ ಧೋರಣೆಯಿಂದಾಗಿ ಕೋಟ್ಯಾಂತರ ಕುಟುಂಬ ಇನ್ನಷ್ಟು ಕಂಗಾಲಾಗಿದೆ. ಮೋದಿ ಸರ್ಕಾರದ ಈ ಕ್ರಮದಿಂದಾಗಿ ಒಬ್ಬಂಟಿ ವೃದ್ಧರು ಹಾಗೂ ಸಣ್ಣ ಕುಟುಂಬಗಳಿಗೆ ಸಿಗುತ್ತಿದ್ದ 35 ಕೆಜಿ ಅಕ್ಕಿ ಕಡಿತಗೊಂಡು ಹಸಿವಿನ ಬಿಕ್ಕಟ್ಟು ತೀವ್ರಗೊಳ್ಳಲಿದೆ.
ಗ್ರಾಮೀಣ ಭಾಗದ ನಿರಾಶ್ರಿತರು, ಭೂರಹಿತ ಕೃಷಿ ಕಾರ್ಮಿಕರು ಮತ್ತು ನಗರ ಪ್ರದೇಶದ ಬೀದಿಬದಿ ವ್ಯಾಪಾರಿಗಳು ಈ ಯೋಜನೆಯನ್ನೇ ನೆಚ್ಚಿಕೊಂಡಿದ್ದರು. ಕೇಂದ್ರ ಸರ್ಕಾರದ ಈ ತಿದ್ದುಪಡಿ ಹಾಗೂ ರೇಷನ್ ಕಾರ್ಡ್‌ಗಳ ಪರಿಶೀಲನೆ ನೆಪದಲ್ಲಿ ನಡೆಸುತ್ತಿರುವ “ಕಟ್ಟುನಿಟ್ಟಿನ ಕ್ರಮಗಳು” ಸಬ್ಸಿಡಿ ವೆಚ್ಚವನ್ನು ತಗ್ಗಿಸುವ ಕಾರ್ಪೊರೇಟ್ ತಂತ್ರವೇ ಹೊರತು ಬಡವರ ಕ್ಷೇಮಾಭಿವೃದ್ಧಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೆ, ಇನ್ನೊಂದೆಡೆ ಬಡವರ ಮೂಲಭೂತ ಹಸಿವಿನ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಮೋದಿ ಸರ್ಕಾರದ ಬಡವರ ವಿರೋಧಿ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.




