'ಕುರುಡು ಕಾಂಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತೋ' - ದ. ರಾ. ಬೇಂದ್ರೆ ರಚಿತ ಕವಿತೆಯಿದು. ಹಣವೆಂಬುದು ಮನುಷ್ಯನನ್ನು ಮನುಷ್ಯತ್ವವನ್ನು ಹೇಗೆಲ್ಲ ಆಳುತ್ತದೆ ಎಂಬುದರ ರೂಪಕ. ಪ್ರಧಾನಿ ನರೇಂದ್ರ ಮೋದಿ ಮುಂದೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ತಲೆಬಾಗಿರುವುದನ್ನು ನೋಡುವಾಗ ಕಾಂಚಾಣದ ತಾಖತ್ತಿನತ್ತ ಕತ್ತು ತಿರುವಲೇಬೇಕು. ಭಕ್ತರು ಎದೆಯುಬ್ಬಿಸಿ, ಹೇಳುವಂತೆ ಇದು ಮೋದಿ ವರ್ಚಸ್ಸೇನೆಲ್ಲ. 'ಡಿಜಿಟಲ್ ಕಾಂಚಾಣ'ದ ಬಲ. ಮೆಟಾದ 'ಸುರಕ್ಷಿತ ಬಂದರು' ಉಳಿಸುವ ಜುಕರ್‌ಬರ್ಗ್ ತಂತ್ರ.
‘ಕಾರ್ಯವಾಸಿ ಕತ್ತೆ ಕಾಲು ಹಿಡಿ’ ಎಂಬುದು ಜನಪ್ರಿಯ ಗಾದೆ. ಕೆಲಸ ಸಾಧಿಸಿಕೊಳ್ಳಲು ಯಾರ ಕಾಲನ್ನೂ ಹಿಡಿದು ಕಾರ್ಯ ಸಾಧಿಸಿಕೊಳ್ಳಬೇಕಾಗುತ್ತದೆ. ಅಂತಹ ಸ್ಥಿತಿ ಬಂದೊದಗಿದ್ದು, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರಿಗೆ. ಭಾರತದಲ್ಲಿ ಫೇಸ್ಬುಕ್, ಇನ್ಸ್ಟಾ, ವಾಟ್ಸ್ಯಾಪ್ ಬಳಕೆದಾರರ ಸಂಖ್ಯೆ ವಿಶ್ವದಲ್ಲೇ ಅತಿ ಹೆಚ್ಚು. ಅರ್ಥಾತ್ ಮೆಟಾಗೆ ಬಹುದೊಡ್ಡ ಜಾಹೀರಾತು ಮಾರುಕಟ್ಟೆ. ವಿಶ್ವದ ಅತಿ ಶ್ರೀಮಂತರಲ್ಲಿ ಒಬ್ಬರಾದ ಜುಕರ್ ಬರ್ಗ್, ಮೋದಿಯವರ ಕ್ಷಮೆ ಕೇಳಿದ ಗುಟ್ಟು ಇದೇ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಪ್ರಸಾರ ತಡೆದ ಮತ್ತು ಪ್ಲಾಟ್‌ಫಾರ್ಮ್ ಲೋಪಗಳ ವಿಚಾರಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಮತ್ತು ಅವರ ಜಾಗತಿಕ ನಿಯೋಗ ನೆನ್ನೆ ಕ್ಷಮೆ ಯಾಚಿಸಿದೆ. ಇದನ್ನು ಕಂಡ ಅಂಧಭಕ್ತರು ಹೆಮ್ಮೆಯಿಂದ ಉಬ್ಬಿಕೊಂಡಿದ್ದೇನೂ, ಮೆಟಾದ ಅದೇ ಇನ್ಸ್ಟಾ- ವಾಟ್ಸ್ಯಾಪ್-ಫೇಸ್‌ಬುಕ್‌ಗಳಲ್ಲಿ ಮೋದಿಯ ತಾಕತ್ತನ್ನು ಹಾಡಿಹೊಗಳಿದ್ದೇನು. ಅಬ್ಬಬ್ಬಾ! ಅಂಧಭಕ್ತರು ವಾಸ್ತವಕ್ಕೆ ಕಣ್ಣು ತೆರೆಯಬೇಕು.
ಕ್ಷಮೆಯಾಚಿಸಿದ್ದು ನಿಜ. ಅಷ್ಟೊಂದು ದೊಡ್ಡ ಕಂಪನಿ ಕ್ಷಮೆಯಾಚಿಸಿದ್ದು ಮೋದಿಯ ವೈಯಕ್ತಿಕ ವರ್ಚಸ್ಸಿನ ವಿಜಯ ಎಂದು ಬಿಂಬಿಸುವುದು ಮಾರುಕಟ್ಟೆಯ ಕಟು ಸತ್ಯವನ್ನು ಮರೆಮಾಚಿದಂತೆ. ನಿಜವೆಂದರೆ, ಜಾಗತಿಕ ಟೆಕ್ ದೈತ್ಯ ಮೆಟಾ ತಲೆಬಾಗಿದ್ದು ಮೋದಿಗೆ ಅಲ್ಲ, ಬದಲಿಗೆ ಭಾರತ ಹೊಂದಿರುವ ಬೃಹತ್ ಮಾರುಕಟ್ಟೆ ಮತ್ತು ‘ಸುರಕ್ಷಿತ ಬಂದರು’ (Safe Harbour) ಕಳೆದುಕೊಳ್ಳುವ ಭೀತಿಗೆ!
ಇದನ್ನೂ ಓದಿ: ಪ್ರಧಾನಿ ಮೋದಿ ವಿಡಿಯೋ ಕಿತ್ತೆಸೆದಿದ್ದ ಫೇಸ್‌ಬುಕ್; ಕೊನೆಗೂ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚನೆ
ಮೆಟಾ ಡಿಜಿಟಲ್ ಸಾಮ್ರಾಜ್ಯಕ್ಕೆ ಭಾರತದಿಂದ ಭಾರೀ ಗಳಿಕೆ!
ಭಾರತೀಯ ಬ್ರ್ಯಾಂಡ್‌ಗಳು ಮತ್ತು ಉದ್ಯಮಗಳು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ಗಳಲ್ಲಿ ನೀಡುವ ಜಾಹೀರಾತುಗಳಿಂದ ಒಟ್ಟು ₹29,392 ಕೋಟಿ ಒಟ್ಟು ಆದಾಯ ಮೆಟಾಗೆ ಹರಿದುಬಂದಿರುವುದು ಗಣನೀಯ ಮೊತ್ತ. ಅಷ್ಟು ಮಾತ್ರವಲ್ಲದೆ ಭಾರತೀಯ ಬಳಕೆದಾರರು ವಾಟ್ಸ್ಯಾಪ್ ಮೂಲಕವೇ ಬ್ಯಾಂಕಿಂಗ್, ಟಿಕೆಟ್ ಬುಕಿಂಗ್, ಶಾಪಿಂಗ್ ಹಾಗೂ ಮೆಸೇಜಿಂಗ್ ಸೇವೆಗಳನ್ನೂ ಬಳಸುತ್ತಿದ್ದಾರೆ. ಇದರಿಂದಾಗಿ ವಾಟ್ಸ್ಯಾಪ್ ಬಿಸಿನೆಸ್ ಎಪಿಐ ಮೂಲಕ ಮೆಟಾ ಹೊಸ ಆದಾಯದ ಮೂಲವನ್ನು ಸೃಷ್ಟಿಸಿಕೊಂಡಿದೆ.
ಮೆಟಾ ಕಂಪನಿಯು ಹಲವು ಜನಪ್ರಿಯ ಸಾಮಾಜಿಕ ಜಾಲತಾಣಗಳು ಮತ್ತು ಸಂವಹನ ಅಪ್ಲಿಕೇಶನ್‌ಗಳನ್ನು ಹೊಂದಿದೆ. ಪ್ರಮುಖ ಆಪ್‌ಗಳೆಂದರೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್ಯಾಪ್ ಮೆಸೆಂಜರ್, ಥ್ರೆಂಡ್, ಮೆಟಾ ಎಐ. ಮೆಟಾದ ಈ ಜಾಗತಿಕ ಡಿಜಿಟಲ್ ಸಾಮ್ರಾಜ್ಯಕ್ಕೆ ಭಾರತವೇ ಅತಿ ದೊಡ್ಡ ಹಾಗೂ ಅತ್ಯಂತ ನಿರ್ಣಾಯಕ ಮಾರುಕಟ್ಟೆ. ಈ ಪೈಕಿ ವಾಟ್ಸಾಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಬಳಕೆದಾರರ ಸಂಖ್ಯೆಯಲ್ಲಿ ಜಗತ್ತಿನಲ್ಲೇ ಭಾರತ ಮೊದಲ ಸ್ಥಾನದಲ್ಲಿದೆ.
| ವೇದಿಕೆ | ಭಾರತದ ಬಳಕೆದಾರರು | ಜಾಗತಿಕ ಸ್ಥಾನ |
| ವಾಟ್ಸ್ಯಾಪ್ | 500 ಮಿಲಿಯನ್‌ಗೂ ಹೆಚ್ಚು (50 ಕೋಟಿಗಿಂತಲೂ ಹೆಚ್ಚು) | 1ನೇ ಸ್ಥಾನ (ವಿಶ್ವದಲ್ಲೇ ಗರಿಷ್ಠ) |
| ಇನ್‌ಸ್ಟಾಗ್ರಾಂ | 350 – 480 ಮಿಲಿಯನ್ (35 ರಿಂದ 48 ಕೋಟಿ) | 1ನೇ ಸ್ಥಾನ (ಅಮೆರಿಕಕ್ಕಿಂತ ಹೆಚ್ಚು) |
| ಫೇಸ್‌ಬುಕ್ | 400 – 580 ಮಿಲಿಯನ್ (40 ರಿಂದ 58 ಕೋಟಿ) | 1ನೇ ಸ್ಥಾನ |
| ಮೆಟಾ ಎಐ | 142 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರು (14.2 ಕೋಟಿ) | 1ನೇ ಸ್ಥಾನ |
ಮೆಟಾ ಭಾರತದಲ್ಲಿ ಗಳಿಸುವ ಆದಾಯವೆಷ್ಟು?
ಮೆಟಾ ಸಂಸ್ಥೆಯ (Facebook India Online Services) ಅಧಿಕೃತ ಹಣಕಾಸು ವರದಿಗಳ ಪ್ರಕಾರ, ಭಾರತದ ಮಾರುಕಟ್ಟೆಯಿಂದ ಕಂಪನಿಯು ಗಳಿಸುವ ಒಟ್ಟು ಆದಾಯ ಮತ್ತು ನಿವ್ವಳ ಲಾಭ ಪ್ರತಿವರ್ಷ ಗಣನೀಯವಾಗಿ ಏರಿಕೆಯಾಗುತ್ತಿದೆ. ಬ್ಲೂಬರ್ಗ್ ಸೂಚ್ಯಂಕದ ಪ್ರಕಾರ ಮಾರ್ಕ್ ಜುಕರ್‌ಬರ್ಗ್ ಆಸ್ತಿ 210 ಬಿಲಿಯನ್ ಡಾಲರ್. ಇಂದಿನ ವಿನಿಮಯ ದರ ₹95.7 = US$1 ಎಂದು ತೆಗೆದುಕೊಂಡರೆ, 210 ಬಿಲಿಯನ್ ಡಾಲರ್ ಎಂದರೆ ₹20.10 ಲಕ್ಷ ಕೋಟಿ ಅಥವಾ 20,09,700 ಕೋಟಿ ರೂಪಾಯಿ. ಸರಳವಾಗಿ ಅರ್ಥೈಸಿಕೊಳ್ಳುವುದಾದರೆ ಕರ್ನಾಟಕದ ಒಟ್ಟು ಬಜೆಟ್ ಗಾತ್ರ ₹4,48,004 ಕೋಟಿ. ಮೆಟಾ ಮುಖ್ಯಸ್ಥನ ಒಟ್ಟು ಆಸ್ತಿಯು ರಾಜ್ಯದಲ್ಲಿ ಜನರಿಂದ ಯಾವುದೇ ತೆರಿಗೆ ಪಡೆಯದೆ ಐದು ವರ್ಷಗಳ ಕಾಲ ಸರ್ಕಾರ ನಡೆಸಬಹುದಾದಷ್ಟು ಹಣ!
ಸದ್ಯ ಡಿಜಿಟಲ್ ಜಾಹೀರಾತುಗಳ ಯುಗ. ಜಾಹೀರಾತು ಆದಾಯದಿಂದಲೇ ಮೆಟಾ ಹಣಕಾಸು ವರ್ಷ 2024-25ರಲ್ಲಿ ₹29,392 ಕೋಟಿ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಶೇ.29ರಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ. ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟ ಹಣ 51,286 ಕೋಟಿ ರೂಪಾಯಿ. ಅಂದರೆ ಮೆಟಾ ಒಂದು ಹಣಕಾಸು ವರ್ಷದಲ್ಲಿ ಭಾರತದಲ್ಲಿ ಗಳಿಸಿದ ₹29,392 ಕೋಟಿ ಆದಾಯದಿಂದ ಆರೇಳು ತಿಂಗಳು ಗ್ಯಾರಂಟಿ ಯೋಜನೆಗಳನ್ನು ಸುಸೂತ್ರವಾಗಿ ನಡೆಸಬಹುದು! ಇನ್ನು ಕಾರ್ಯಾಚರಣೆಯ ಆದಾಯ (Revenue from Operations) ₹3,793 ಕೋಟಿ, ಒಟ್ಟು ವಾರ್ಷಿಕ ಆದಾಯ ₹3,834 ಕೋಟಿ, ನಿವ್ವಳ ಲಾಭ (Net Profit) ₹647 ಕೋಟಿ (ಲಾಭದಲ್ಲಿ 28% ಏರಿಕೆ)- ಹೀಗೆ ಮೆಟಾ ಭಾರತದಿಂದ ಗಳಿಸುತ್ತಿರುವುದು ಸಾವಿರಾರು ಕೋಟಿ ರೂಪಾಯಿಗಳು. ಆದರೂ ಮೋದಿ ಕ್ಷಮೆ ಕೇಳಲು ಈ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವುದೇ ಪ್ರಮುಖ ಕಾರಣ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ತಲೆಬಾಗಬೇಡಿ: ಭಾರತದಲ್ಲಿ ಖಾತೆ ನಿರ್ಬಂಧಿಸಿದ ಮೆಟಾ ಸಂಸ್ಥೆ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
‘ಸುರಕ್ಷಿತ ಬಂದರು’ (Safe Harbour) ಕಳೆದುಕೊಳ್ಳುವ ಭೀತಿ
ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 79ರ ಅಡಿಯಲ್ಲಿ ‘ಇಂಟರ್‌ಮೀಡಿಯರಿ’ (ಮಧ್ಯಸ್ಥಿಕೆ) ಕಂಪನಿಗಳಿಗೆ ‘ಸುರಕ್ಷಿತ ಬಂದರು’ ಅಥವಾ ‘Safe Harbour Protection’ ನೀಡಲಾಗುತ್ತದೆ. ಅಂದರೆ ಬಳಕೆದಾರರು ಅಪ್‌ಲೋಡ್ ಮಾಡುವ ವಿಷಯಕ್ಕೆ ಕಂಪನಿ ನೇರ ಹೊಣೆಯಾಗುವುದಿಲ್ಲ. ಆದರೆ, ಪ್ರಧಾನಿಯವರ ವಿಡಿಯೋ ತಡೆದ ಘಟನೆ ಹಾಗೂ ಅಲ್ಗಾರಿದಮ್‌ಗಳ ದುರ್ಬಳಕೆ ಹಿನ್ನೆಲೆಯಲ್ಲಿ, ಸಂಸದೀಯ ಸಮಿತಿಯು “ಜುಕರ್‌ಬರ್ಗ್ ಕ್ಷಮೆಯಾಚಿಸದಿದ್ದರೆ ಈ ಕಾನೂನು ಸುರಕ್ಷತೆಯನ್ನು ಹಿಂಪಡೆಯಲಾಗುವುದು” ಎಂದು ಖಡಕ್ ಎಚ್ಚರಿಕೆ ನೀಡಿತು. ಸುರಕ್ಷಿತ ಬಂದರು ರದ್ದಾದರೆ, ಮೆಟಾ ಪ್ಲಾಟ್‌ಫಾರ್ಮ್‌ನಲ್ಲಿ ಯಾರೋ ಪೋಸ್ಟ್ ಮಾಡುವ ಪ್ರಚೋದನಾಕಾರಿ ಅಥವಾ ಕಾನೂನುಬಾಹಿರ ವಿಷಯಗಳಿಗೆ ಮೆಟಾ ವಿರುದ್ಧವೇ ನೇರವಾಗಿ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗುತ್ತವೆ. ಇದು ಕಂಪನಿಯ ಅಸ್ತಿತ್ವಕ್ಕೇ ಕಂಟಕವಾಗುತ್ತಿತ್ತು.
ಒಟ್ಟಾರೆಯಾಗಿ ವಿಶ್ವದ ಯಾವುದೇ ದೇಶದಲ್ಲೂ ಮೆಟಾಗೆ ಇಷ್ಟೊಂದು ಬೃಹತ್ ಮಟ್ಟದ ಡಿಜಿಟಲ್ ಐಶ್ವರ್ಯದ ಸಾಮ್ರಾಜ್ಯ ದಕ್ಕಿಲ್ಲ . ಚೀನಾದಲ್ಲಿ ಮೆಟಾ ಪ್ಲಾಟ್‌ಫಾರ್ಮ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ, ಅಮೆರಿಕವನ್ನು ಹೊರತುಪಡಿಸಿದರೆ ಮೆಟಾಗೆ ಜಾಹೀರಾತು, ಪೇಡ್ ಪ್ರಮೋಷನ್ ಮತ್ತು ಡಿಜಿಟಲ್ ಆದಾಯ ತಂದುಕೊಡುವ ಬ್ರಹ್ಮಾಂಡದಂತಿರುವ ಏಕೈಕ ಮಾರುಕಟ್ಟೆ ಭಾರತ. ಈ ಮಾರುಕಟ್ಟೆಯಲ್ಲಿ ಸಣ್ಣ ವಿಘ್ನ ಉಂಟಾದರೂ ಮೆಟಾದ ಜಾಗತಿಕ ಷೇರು ಮೌಲ್ಯ ಮತ್ತು ಆದಾಯಕ್ಕೆ ನೂರಾರು ಕೋಟಿ ಡಾಲರ್‌ಗಳ ಹೊಡೆತ ಬೀಳುತ್ತದೆ. ಹೀಗಿರುವಾಗ ಮೆಟಾ ಭಾರತದ ಮುಂದೆ ತಲೆಬಾಗದೆ ಮತ್ತೇನೂ ಮಾಡಬಲ್ಲದು? ಇದು ಮೋದಿ ಮೋಡಿ ಅಲ್ಲ, ಹಣದ ಆಟವಷ್ಟೇ.
ಸಿಲಿಕಾನ್ ವ್ಯಾಲಿಯ ಯಾವುದೇ ದೈತ್ಯ ಕಂಪನಿಗೆ ಕೊನೆಗೆ ಮುಖ್ಯವಾಗುವುದು ‘ಬ್ಯುಸಿನೆಸ್ ಮಾದರಿ’ ಮತ್ತು ‘ಷೇರುದಾರರ ಲಾಭ’. ಮೆಟಾ ಇತ್ತೀಚಿನ ಸಭೆಯಲ್ಲಿ ಭಾರತದಲ್ಲಿ ಸಿಎಸ್‌ಎಎಮ್ (CSAM), ಡೀಪ್‌ಫೇಕ್ ಹಾಗೂ ಪೇಡ್ ಕಂಟೆಂಟ್ ಪ್ರಮೋಷನ್‌ಗಳಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡಿದೆ. ಭಾರತದಂತಹ ಬೃಹತ್ ಗ್ರಾಹಕ ನೆಲೆಯನ್ನು ಹೊಂದಿರುವ ದೇಶದಲ್ಲಿ ತನ್ನ ವ್ಯಾಪಾರಕ್ಕೆ ಕಂಟಕ ಎದುರಾಗಬಾರದು ಎನ್ನುವ ಒಂದೇ ಕಾರಣಕ್ಕೆ ಜುಕರ್‌ಬರ್ಗ್ ಕ್ಷಮೆಯಾಚಿಸಿದ್ದಾರೆ. ಅಂತಿಮವಾಗಿ, ಇದು ಮೋದಿಯ ವೈಯಕ್ತಿಕ ವರ್ಚಸ್ಸಿನ ವಿಚಾರವಲ್ಲ; ಇದು ವ್ಯಾಪಾರ, ಲಾಭ ಮತ್ತು ಶತಕೋಟಿ ಭಾರತೀಯರ ‘ಡಿಜಿಟಲ್ ಕಾಂಚಾಣ’ದ ಶಕ್ತಿ!

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



