ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ ಸಿಂಗ್ ಚೌಹಾಣ್ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಮಧ್ಯಪ್ರದೇಶ ಹೈಕೋರ್ಟ್ ಅಧಿಕೃತವಾಗಿ ಮುಕ್ತಾಯಗೊಳಿಸಿದೆ. 2018ರ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಗೆ ಹೈಕೋರ್ಟ್‌ನಲ್ಲಿ ವಿಷಾದ ವ್ಯಕ್ತಪಡಿಸಿದ ನಂತರ ಈ ಪ್ರಕರಣವನ್ನು ರದ್ದುಗೊಳಿಸಲಾಗಿದೆ.
2018ರಲ್ಲಿ ಮಧ್ಯಪ್ರದೇಶದ ಝಾಬುವಾದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, ‘ಪನಾಮ ಪೇಪರ್ಸ್’ ಹಗರಣದಲ್ಲಿ ಕಾರ್ತಿಕೇಯ ಸಿಂಗ್ ಅವರ ಹೆಸರು ಕೇಳಿಬಂದಿದೆ ಎಂದು ಉಲ್ಲೇಖಿಸಿದ್ದರು.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ
ಇದರಿಂದ ತಮ್ಮ ಕುಟುಂಬದ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಕಾರ್ತಿಕೇಯ ಸಿಂಗ್ ಅವರು ಭೋಪಾಲ್‌ನ ಸಂಸದರು-ಶಾಸಕರ ವಿಶೇಷ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಅದಾದ ಬಳಿಕ ಕೆಳ ನ್ಯಾಯಾಲಯ ನೀಡಿದ್ದ ಸಮನ್ಸ್ ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಮಧ್ಯಪ್ರದೇಶ ಹೈಕೋರ್ಟ್‌ನ ಜಬಲ್ಪುರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ರಾಹುಲ್ ಗಾಂಧಿ ಪರ ವಕೀಲರು ಅರ್ಜಿ ಸಲ್ಲಿಸಿ, “ಅಂದು ಭಾಷಣದ ವೇಳೆ ಕಾರ್ತಿಕೇಯ ಸಿಂಗ್ ಅವರ ಹೆಸರು ತಪ್ಪಾಗಿ ಬಳಕೆಯಾಗಿತ್ತು. ವಾಸ್ತವವಾಗಿ ತಾವು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿಯ ಮಗನ ಹೆಸರನ್ನು ಪ್ರಸ್ತಾಪಿಸಲು ಉದ್ದೇಶಿಸಿದ್ದರು” ಎಂದು ಸ್ಪಷ್ಟನೆ ನೀಡಿದ್ದರು. ಹಾಗೆಯೇ ಈ ತಪ್ಪು ಉಲ್ಲೇಖಕ್ಕೆ ವಿಷಾದ ವ್ಯಕ್ತಪಡಿಸಿದ್ದರು.
ರಾಹುಲ್ ಗಾಂಧಿ ಅವರು ವಿಷಾದ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಪ್ರಕರಣವನ್ನು ಇನ್ನು ಮುಂದೆ ಮುಂದುವರಿಸಲು ತಮಗೆ ಆಸಕ್ತಿಯಿಲ್ಲ ಎಂದು ಕಾರ್ತಿಕೇಯ ಸಿಂಗ್ ತಿಳಿಸಿದ್ದಾರೆ. ಇದನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಪ್ರಮೋದ್ ಕುಮಾರ್ ಅಗರ್ವಾಲ್ ಅವರು ಹೈಕೋರ್ಟ್ ಹಾಗೂ ಭೋಪಾಲ್ ಕೆಳ ನ್ಯಾಯಾಲಯ ಎರಡರಲ್ಲೂ ಬಾಕಿ ಇದ್ದ ಪ್ರಕರಣಗಳನ್ನು ಮುಕ್ತಾಯಗೊಳಿಸಿ ಆದೇಶ ಹೊರಡಿಸಿದ್ದಾರೆ.




