ಮದುವೆಯ ಭರವಸೆ ಈಡೇರದ ಎಲ್ಲ ಪ್ರಕರಣಗಳೂ ಅತ್ಯಾಚಾರವಲ್ಲ: ಪಾಟ್ನಾ ಹೈಕೋರ್ಟ್‌

Date:

ಮದುವೆಯಾಗುವ ಭರವಸೆಯ ಮೇರೆಗೆ ಏರ್ಪಡುವ ಲೈಂಗಿಕ ಸಂಬಂಧದಲ್ಲಿ, ಆ ಭರವಸೆಯು ಮೊದಲಿನಿಂದಲೂ ವಂಚಿಸುವ ಉದ್ದೇಶ ಮತ್ತು ಎಂದಿಗೂ ಈಡೇರಿಸದ ಒಳಸಂಚಿನಿಂದ ಕೂಡಿದ್ದರೆ ಮಾತ್ರ ಅದನ್ನು ಅತ್ಯಾಚಾರ ಎಂದು ಪರಿಗಣಿಸಬಹುದು. ಕೇವಲ ಮದುವೆಯ ಭರವಸೆಯನ್ನು ಈಡೇರಿಸಲು ಸಾಧ್ಯವಾಗದ ಅಥವಾ ನಂತರದ ದಿನಗಳಲ್ಲಿ ಭರವಸೆಯನ್ನು ಉಲ್ಲಂಘಿಸಿದ ಎಲ್ಲ ಪ್ರಕರಣಗಳನ್ನು ಅತ್ಯಾಚಾರ ಎಂದು ಕರೆಯಲು ಸಾಧ್ಯವಿಲ್ಲ ಎಂದು ಪಾಟ್ನಾ ಹೈಕೋರ್ಟ್ ತೀರ್ಪು ನೀಡಿದೆ. ಮದುವೆಯ ಭರವಸೆಯೊಂದಿಗೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಹೊತ್ತಿದ್ದ ವ್ಯಕ್ತಿಯೊಬ್ಬನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

- Advertisement -

ಪ್ರೀತಿಸಿ, ಮದುವೆಯಾಗುವ ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳೆಸಿ, ನಂತರ ಮಾತುತಪ್ಪಿದ್ದ ಆರೋಪಿಯೊಬ್ಬನನ್ನು ದೋಷಿ ಎಂದು ಘೋಷಿಸಿ ಬಿಹಾರದ ಪಶ್ಚಿಮ ಚಂಪಾರಣ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಆರೋಪಿಯು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆತನ ಅರ್ಜಿಯನ್ನು ನ್ಯಾಯಮೂರ್ತಿ ಪೂರ್ಣೇಂದು ಸಿಂಗ್ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆ ನಡೆಸಿದೆ. ಸೆಷನ್ಸ್‌ ನ್ಯಾಯಾಲಯ ನೀಡಿದ್ದ 7 ವರ್ಷ ಜೈಲು ಮತ್ತು 20,000 ರೂ. ದಂಡದ ಶಿಕ್ಷೆಯನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಈ ಪ್ರಕರಣವು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಒಂದೇ ಗ್ರಾಮದ ನಿವಾಸಿಗಳಿಗೆ ಸಂಬಂಧಿಸಿದೆ. ಪ್ರಾಸಿಕ್ಯೂಷನ್ ವಾದದ ಪ್ರಕಾರ, ದೂರುದಾರೆ ಯುವತಿಯ ತಂದೆ ಬಿಹಾರದ ಹೊರಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ತಾಯಿ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಯುವತಿ ಮನೆಯಲ್ಲಿ ದೀರ್ಘಕಾಲ ಒಬ್ಬಳೇ ಇರುತ್ತಿದ್ದಳು. ಇದರ ಲಾಭ ಪಡೆದ ಆರೋಪಿಯು ಆಕೆಯ ಮನೆಗೆ ಭೇಟಿ ನೀಡಲು ಪ್ರಾರಂಭಿಸಿ, ತಾನು ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದನು. ಈ ಸಂಬಂಧವು ಸುಮಾರು ಒಂದು ವರ್ಷಗಳ ಕಾಲ ಮುಂದುವರಿದಿದ್ದು, ಯುವತಿ ಗರ್ಭಿಣಿಯಾಗಲು ಕಾರಣವಾಗಿತ್ತು. ತದನಂತರ ಯುವತಿಯು ಮದುವೆಯಾಗುವಂತೆ ಪದೇ ಪದೇ ವಿನಂತಿಸಿದರೂ, ಆರೋಪಿಯು ನಿರಾಕರಿಸಿ ಬೇರೆ ಮಹಿಳೆಯೊಂದಿಗೆ ಮದುವೆಯಾಗಿದ್ದನು. ಈ ಹಿನ್ನೆಲೆಯಲ್ಲಿ ಯುವತಿಯು 2009ರ ಜನವರಿ 15 ರಂದು ಎಫ್‌ಐಆರ್ ದಾಖಲಿಸಿದ್ದರು.

ಆದಾಗ್ಯೂ, ಆರೋಪಿ ಪರ ವಾದ ಮಂಡಿಸಿದ ಅಮಿಕಸ್ ಕ್ಯೂರಿ, ಘಟನೆ ನಡೆದ ಸಮಯದಲ್ಲಿ ದೂರುದಾರೆ ಯುವತಿಯು ಮೈನರ್ ಆಗಿರಲಿಲ್ಲ, ಬದಲಿಗೆ ತನಗಾಗುವ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದರು. ಯಾವುದೇ ಬಲವಂತ ಅಥವಾ ದಬ್ಬಾಳಿಕೆ ಇಲ್ಲದೆ ಸುಮಾರು ಒಂದು ವರ್ಷಗಳ ಕಾಲ ಇಬ್ಬರ ನಡುವೆ ಸಂಬಂಧ ಮುಂದುವರಿದಿದೆ. ಆರೋಪಿಯು ಆರಂಭದಿಂದಲೇ ವಂಚನೆಯ ಉದ್ದೇಶದಿಂದ ಈ ಭರವಸೆ ನೀಡಿದ್ದನು ಎಂಬುದಕ್ಕೆ ಪ್ರಾಸಿಕ್ಯೂಷನ್ ಯಾವುದೇ ಸ್ಪಷ್ಟ ಸಾಕ್ಷ್ಯವನ್ನು ಒದಗಿಸಿಲ್ಲ. ಮದುವೆಯಾಗಲು ನಂತರದ ದಿನಗಳಲ್ಲಿ ನಿರಾಕರಿಸಿದ ತಕ್ಷಣ ಅದನ್ನು ಅತ್ಯಾಚಾರ ಎಂದು ಕರೆಯಲಾಗದು ಎಂದು ವಾದಿಸಿದ್ದಾರೆ.

ಹೈಕೋರ್ಟ್ ಈ ಪ್ರಕರಣದಲ್ಲಿ ದೂರುದಾರೆ, ಆಕೆಯ ಪೋಷಕರು, ತನಿಖಾಧಿಕಾರಿ ಹಾಗೂ ವೈದ್ಯರು ಸೇರಿದಂತೆ ಒಟ್ಟು ಎಂಟು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ವಿವರವಾಗಿ ಪರಿಶೀಲಿಸಿದೆ. ವೈದ್ಯಕೀಯ ವರದಿಯ ಪ್ರಕಾರ ಯುವತಿಗೆ 19 ವರ್ಷ ವಯಸ್ಸಾಗಿದ್ದು, ಸುಮಾರು 8 ವಾರಗಳ ಗರ್ಭಿಣಿಯಾಗಿದ್ದರು. ಆದರೆ, ಯಾವುದೇ ಲೈಂಗಿಕ ದೌರ್ಜನ್ಯದ ಲಕ್ಷಣಗಳು ಕಂಡುಬಂದಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಭ್ರೂಣದ ಡಿಎನ್‌ಎಅನ್ನು ಆರೋಪಿಯ ಡಿಎನ್‌ಎ ಜೊತೆಗೆ ಮ್ಯಾಚ್ ಮಾಡುವಂತಹ ಯಾವುದೇ ವೈಜ್ಞಾನಿಕ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇಂತಹ ಪ್ರಮುಖ ವೈಜ್ಞಾನಿಕ ಸಾಕ್ಷ್ಯದ ಕೊರತೆಯಿಂದಾಗಿ, ಗರ್ಭಧಾರಣೆಗೆ ಆರೋಪಿಯೇ ನೇರ ಹೊಣೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈ ಸಾಕ್ಷ್ಯದ ಕೊರತೆಯ ಲಾಭವನ್ನು ಆರೋಪಿಗೆ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಈ ಲೇಖನ ಓದಿದ್ದೀರಾ?: ಸಂಜಯ್ ಗಾಂಧಿ ಸಾವಿಗೀಡಾದಾಗ ಪಿ. ಲಂಕೇಶ್ ಬರೆದದ್ದು: ಮುಳ್ಳಿನ ತೋಟದ ಕನಸುಗಾರ

ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಪೂರ್ಣೇಂದು ಸಿಂಗ್ ಅವರು, “ಸುಳ್ಳು ಭರವಸೆ ಮತ್ತು ಭರವಸೆಯ ಉಲ್ಲಂಘನೆ ನಡುವೆ ಕಾನೂನಿನಲ್ಲಿ ಸ್ಪಷ್ಟ ವ್ಯತ್ಯಾಸವಿದೆ. ಕೇವಲ ಲೈಂಗಿಕ ಸಮ್ಮತಿಯನ್ನು ಪಡೆಯುವ ಏಕೈಕ ಉದ್ದೇಶದಿಂದ, ಮೊದಲಿನಿಂದಲೂ ವಂಚನೆಯ ಆಲೋಚನೆಯನ್ನಿಟ್ಟುಕೊಂಡು ನೀಡಿದ ಭರವಸೆಯು ಮಾತ್ರ ಮಹಿಳೆಯ ಒಪ್ಪಿಗೆಯನ್ನು ನಿರರ್ಥಕಗೊಳಿಸುತ್ತದೆ. ಐಪಿಸಿ ಸೆಕ್ಷನ್ 90 ರ ಪ್ರಕಾರ, ತಪ್ಪು ಕಲ್ಪನೆಯಿಂದ ಪಡೆದ ಒಪ್ಪಿಗೆಯನ್ನು ನಿಜವಾದ ಒಪ್ಪಿಗೆ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಸಂಬಂಧದ ಆರಂಭದಲ್ಲಿ ಮದುವೆಯಾಗುವ ಪ್ರಾಮಾಣಿಕ ಉದ್ದೇಶವಿದ್ದು, ನಂತರದ ದಿನಗಳಲ್ಲಿ ಬದಲಾದ ಪರಿಸ್ಥಿತಿ ಅಥವಾ ಭಿನ್ನಾಭಿಪ್ರಾಯಗಳಿಂದ ಸಂಬಂಧ ಮುರಿದುಬಿದ್ದರೆ ಅದನ್ನು ಅತ್ಯಾಚಾರ ಎನ್ನಲಾಗದು” ಎಂದು ಹೇಳಿದ್ದಾರೆ.

“ವಯಸ್ಕರು ಸ್ವಇಚ್ಛೆಯಿಂದ ದೀರ್ಘಕಾಲದವರೆಗೆ ಪರಸ್ಪರ ಒಪ್ಪಿಗೆಯ ಸಂಬಂಧದಲ್ಲಿದ್ದಾಗ, ಅಲ್ಲಿ ನಡೆದ ಪ್ರತಿಯೊಂದು ಲೈಂಗಿಕ ಕ್ರಿಯೆಯೂ ಕೇವಲ ಮದುವೆಯ ಭರವಸೆಯಿಂದಲೇ ನಡೆದಿದೆ ಎಂದು ಸ್ವಯಂಚಾಲಿತವಾಗಿ ಭಾವಿಸಲಾಗದು. ವಿಫಲವಾದ ಪ್ರತಿಯೊಂದು ಪ್ರೇಮ ಸಂಬಂಧವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಬಾರದು. ಮಹಿಳೆಯರನ್ನು ವಂಚನೆಯಿಂದ ರಕ್ಷಿಸುವುದರ ಜೊತೆಗೆ, ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಕ್ರಿಮಿನಲ್ ಕಾನೂನನ್ನು ದುರುಪಯೋಗಪಡಿಸಿಕೊಳ್ಳದಂತೆ ಜಾಗ್ರತೆ ವಹಿಸುವುದು ನ್ಯಾಯಾಲಯಗಳ ಜವಾಬ್ದಾರಿಯಾಗಿದೆ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

 “ಆರೋಪಿಯು ಆರಂಭದಿಂದಲೇ ಮದುವೆಯಾಗುವ ಉದ್ದೇಶ ಹೊಂದಿರಲಿಲ್ಲ ಅಥವಾ ಯುವತಿಯ ಒಪ್ಪಿಗೆಯನ್ನು ಕೇವಲ ವಂಚನೆಯಿಂದ ಪಡೆಯಲಾಗಿತ್ತು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ. ಇಬ್ಬರ ನಡುವಿನ ಸಂಬಂಧವು ಪರಸ್ಪರ ಒಪ್ಪಿಗೆಯಿಂದ ಕೂಡಿದ್ದರಿಂದ ಅತ್ಯಾಚಾರದ ಶಿಕ್ಷೆಯನ್ನು ಎತ್ತಿಹಿಡಿಯಲು ಅಗತ್ಯವಿರುವ ಪ್ರಮುಖ ಅಂಶಗಳು ಇಲ್ಲಿಲ್ಲ” ಎಂದು ಕೋರ್ಟ್‌ ಹೇಳಿದೆ. ಆರೋಪಿಯನ್ನು ಖುಲಾಸೆಗೊಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...