ರಾಜ್ಯಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ 2026 ಅಂಗೀಕಾರವಾಗಿದೆ. ಇದಾದ ಬೆನ್ನಲ್ಲೇ ರಾಷ್ಟ್ರೀಯ ಲಿಂಗತ್ವ ಅಲ್ಪಸಂಖ್ಯಾತರ ಮಂಡಳಿ (NCTP)ಸದಸ್ಯರಿಬ್ಬರು ರಾಜೀನಾಮೆ ನೀಡಿದ್ದಾರೆ. ಈ ಮಸೂದೆಯು ಸ್ವಯಂ ಗುರುತಿಸುವಿಕೆ ಮತ್ತು ಘನತೆಯ ಮೂಲಭೂತ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂದು ಇಬ್ಬರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡಳಿಯ ದಕ್ಷಿಣ ಪ್ರದೇಶದ ಪ್ರತಿನಿಧಿ ಕಲ್ಕಿ ಸುಬ್ರಮಣಿಯಂ ಮತ್ತು ಈಶಾನ್ಯ ಪ್ರದೇಶದ ಪ್ರತಿನಿಧಿ ರಿತುಪರ್ಣ ನಿಯೋಗ್ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಿಗೆ ರಾಜೀನಾಮೆ ನೀಡಿದ್ದಾರೆ. ಮಸೂದೆ ತಿದ್ದುಪಡಿ ವೇಳೆ ಸಮುದಾಯದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ದೂರಿದ್ದಾರೆ.
ಇದನ್ನು ಓದಿದ್ದೀರಾ? ಲಿಂಗತ್ವ ಅಲ್ಪಸಂಖ್ಯಾತರ ಅಸ್ಮಿತೆಯನ್ನೇ ಅಳಿಸುವ ಮಸೂದೆ: ಆತ್ಮಗೌರವಕ್ಕೆ ಕೊಡಲಿಪೆಟ್ಟು
ತಮ್ಮ ರಾಜೀನಾಮೆ ಪತ್ರದಲ್ಲಿ, ಕಲ್ಕಿ, “ನಮ್ಮ ಸಾಮೂಹಿಕ ಧ್ವನಿಯನ್ನು ಮೌನಗೊಳಿಸಲಾಗಿರುವ ಸ್ಥಳದಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ. ಹಾಗೆಯೇ, “ದಕ್ಷಿಣ ಭಾರತ ಮತ್ತು ದೇಶಾದ್ಯಂತ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದೊಂದಿಗೆ ಸಂವಾದ ನಡೆಸಿದ್ದೇನೆ. ಈ ಮಸೂದೆಯು ಸಮುದಾಯಕ್ಕೆ ವಿರೋಧವಾದುದ್ದು ಎಂಬ ಒಮ್ಮತದ ಅಭಿಪ್ರಾಯವಾಗಿದೆ” ಎಂದು ಹೇಳಿದ್ದಾರೆ.
ಕಲ್ಕಿ ತಿದ್ದುಪಡಿಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸುವುದಾಗಿ ತಿಳಿಸಿದ್ದಾರೆ.
“ಒಬ್ಬ ಶಾಸನಬದ್ಧ ಪ್ರತಿನಿಧಿಯಾಗಿ, ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ಶಾಸನದ ಕುರಿತು ಸರ್ಕಾರಕ್ಕೆ ಸಲಹೆ ನೀಡುವುದು ನನ್ನ ಪ್ರಾಥಮಿಕ ಕರ್ತವ್ಯವಾಗಿದೆ. ಯಾವುದೇ ಔಪಚಾರಿಕ ಸಮಾಲೋಚನೆಯಿಲ್ಲದೆ ಈ ಮಸೂದೆಯನ್ನು ಅಂಗೀಕರಿಸುವ ನಿರ್ಧಾರವು ಈ ಮಂಡಳಿಯನ್ನು ಸ್ಥಾಪಿಸಿದ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ” ಎಂದು ರಿತುಪರ್ಣ ನಿಯೋಗ್ ಕಳವಳ ವ್ಯಕ್ತಪಡಿಸಿದ್ದಾರೆ.
2019ರ ಮೂಲಕ ಕಾಯ್ದೆಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿ ಕೇಂದ್ರ ಸರ್ಕಾರವು ಮಾರ್ಚ್ 13ರಂದು ಲೋಕಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ 2026 ಅನ್ನು ಮಂಡಿಸಿದೆ. ಈ ಮಸೂದೆಯು ಮಾರ್ಚ್ 24ರಂದು ಲೋಕಸಭೆಯಲ್ಲಿ, ಮಾರ್ಚ್ 25ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. 2019ರ ಕಾಯ್ದೆಯ ಸೆಕ್ಷನ್ 4(2) ಅಡಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ಲಿಂಗವನ್ನು ಸ್ವತಃ ಗುರುತಿಸಿಕೊಳ್ಳುವ ಹಕ್ಕು ಇದೆ. ಆದರೆ ಈ ಹಕ್ಕನ್ನು ತಿದ್ದುಪಡಿ ಮಸೂದೆಯಲ್ಲಿ ತೆಗೆದುಹಾಕಲಾಗಿದೆ. ಇದು ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಮೂಲಭೂತ ಹಕ್ಕುಗಳನ್ನು ಕಸಿಯುವ ತಂತ್ರ: ಲಿಂಗತ್ವ ಅಲ್ಪಸಂಖ್ಯಾತರ ಮಸೂದೆ ತಿದ್ದುಪಡಿ ವಿರುದ್ಧ ತೀವ್ರ ಆಕ್ರೋಶ
ಇನ್ನು ಈ ತಿದ್ದುಪಡಿ ಪ್ರಕಾರ ‘ಲಿಂಗತ್ವ ಅಲ್ಪಸಂಖ್ಯಾತರು’ ಎಂದರೆ ಕೇವಲ ಜೈವಿಕ ವ್ಯತ್ಯಾಸಗಳು ಉಳ್ಳವರು (inter sex) ಮತ್ತು ಹಿಜ್ರಾ, ಕಿನ್ನರ್, ಅರವಾಣಿ, ಜೋಗತಿ ಮೊದಲಾದ ನಿರ್ದಿಷ್ಟ ಸಮುದಾಯಗಳಿಗೆ ಸೇರಿದವರು. ಅಂದರೆ ಈ ಸಮುದಾಯಕ್ಕೆ ಸೇರಿಲ್ಲದಿದ್ದರೆ ವ್ಯಕ್ತಿ ಲಿಂಗತ್ವ ಅಲ್ಪಸಂಖ್ಯಾತರಾಗಿದ್ದರೂ ಯಾವುದೇ ಹಕ್ಕುಗಳು ಇರುವುದಿಲ್ಲ. ಹಾಗೆಯೇ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತ ಪುರುಷ, ಜೆಂಡರ್ ಕ್ವೀರ್ ಎಂಬ ಮೊದಲಾದ ವ್ಯಕ್ತಿಗಳನ್ನು ಈ ‘ಲಿಂಗತ್ವ ಅಲ್ಪಸಂಖ್ಯಾತರು’ ಎಂಬ ವ್ಯಾಖ್ಯಾನದಿಂದ ಹೊರಗಿಡಲಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಹಾಗೆಯೇ ಗುರುತಿನ ಚೀಟಿ ಪಡೆಯಬೇಕಾದರೆ ಇನ್ನು ಮುಂದೆ ಮುಖ್ಯ ವೈದ್ಯಕೀಯ ಅಧಿಕಾರಿ (CMO) ನೇತೃತ್ವದ ವೈದ್ಯಕೀಯ ಮಂಡಳಿಯ ಶಿಫಾರಸನ್ನು ಮೊದಲು ಜಿಲ್ಲಾಧಿಕಾರಿಗಳು ಪರಿಶೀಲಿಸುವುದು ಕಡ್ಡಾಯವಾಗಿದೆ. ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ (SRS) ಮಾಡಿಸಿಕೊಂಡವರು ಕಡ್ಡಾಯವಾಗಿ ಪರಿಷ್ಕೃತ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ. ಆಸ್ಪತ್ರೆಗಳು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕಾಗಿದೆ.
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ನಲ್ಸಾ’ (NALSA) ತೀರ್ಪಿನ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಲಿಂಗವನ್ನು ಸ್ವತಃ ಗುರುತಿಸಿಕೊಳ್ಳುವ ಹಕ್ಕು ಹೊಂದಿರುತ್ತಾರೆ. ಆದರೆ ಈ ತಿದ್ದುಪಡಿಗಳ ಪ್ರಕಾರ ತಾನು ಲಿಂಗತ್ವ ಅಲ್ಪಸಂಖ್ಯಾತರು ಎಂದು ಸಾಬೀತುಪಡಿಸಲು ವೈದ್ಯಕೀಯ ತಪಾಸಣೆ ಅಥವಾ ಶಸ್ತ್ರಚಿಕಿತ್ಸೆಯ ಪುರಾವೆಗಳನ್ನು ನೀಡಬೇಕು. ಇದು ಹಕ್ಕಿನ ಉಲ್ಲಂಘನೆಯೆಂದು ಹೋರಾಟಗಾರರು ಹೇಳಿದ್ದಾರೆ.




