ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯವು ಚುರುಕುಗೊಂಡಿದ್ದು, ಫಲಿತಾಂಶ ಘೋಷಣೆಯ ನಂತರ ರಾಜ್ಯಾದ್ಯಂತ ಯಾವುದೇ ರೀತಿಯ ವಿಜಯೋತ್ಸವ ರ‍್ಯಾಲಿಗಳನ್ನು ನಡೆಸದಂತೆ ಕೇಂದ್ರ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಈ ಕುರಿತು ಮಾಹಿತಿ ನೀಡಿದ ವಿಶೇಷ ಚುನಾವಣಾ ವೀಕ್ಷಕ ಸುಬ್ರತಾ ಗುಪ್ತ ಅವರು, “ಫಲಿತಾಂಶ ಪ್ರಕಟನೆಯ ನಂತರ ವಿಜಯಿ ಅಭ್ಯರ್ಥಿಗಳ ಪರವಾಗಿ ಸಂಭ್ರಮಾಚರಣೆಯ ಮೆರವಣಿಗೆಗಳನ್ನು ರಾಜ್ಯದಲ್ಲಿ ಎಲ್ಲೂ ಅನುಮತಿಸಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಮತ ಎಣಿಕೆ ಕೇಂದ್ರಗಳಿಗೆ ವಿವಿಧ ರಾಜಕೀಯ ಪಕ್ಷಗಳ ಏಜೆಂಟ್‌ಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಆಯೋಗಕ್ಕೆ ಕೇಳಿಬಂದಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ಸುಬ್ರತಾ ಗುಪ್ತ ಅವರು, “ಏಜೆಂಟ್‌ಗಳು ಕೇಂದ್ರಗಳಿಗೆ ತಲುಪಲು ಆಗುತ್ತಿಲ್ಲದ ಸಮಸ್ಯೆಯನ್ನು ಆಯೋಗವು ಗಮನಿಸಿದೆ, ಇದನ್ನು ಶೀಘ್ರವೇ ಬಗೆಹರಿಸಲಾಗುವುದು. ಕಟ್ಟುನಿಟ್ಟಿನ ಭದ್ರತೆಯ ನಡುವೆ ಮತ ಎಣಿಕೆ ನಡೆಯುತ್ತಿದೆ” ಎಂದು ತಿಳಿಸಿದರು.
ಅಂಕಿ-ಅಂಶಗಳ ಪ್ರಕಾರ, 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯು ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ನಡೆದಿತ್ತು. ಒಟ್ಟು 294 ಕ್ಷೇತ್ರಗಳಿಗೆ ನಡೆದ ಈ ಚುನಾವಣೆಯಲ್ಲಿ ದಾಖಲೆಯ ಶೇಕಡಾ 92.93 ಮತದಾನವಾಗಿದೆ. ಇದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಮತದಾನವಾಗಿದೆ (2011ರಲ್ಲಿ ಮುಂದಿನ ದಾಖಲೆ ಇತ್ತು). ಮೊದಲನೇ ಹಂತದಲ್ಲಿ 93.13 ಮತ್ತು ಎರಡನೆಯ ಹಂತದಲ್ಲಿ 91.57 ಮತದಾನ ದಾಖಲಾಗಿತ್ತು. ಸರ್ಕಾರವನ್ನು ರಚಿಸಲು 148 ಸ್ಥಾನಗಳ ಬಹುಮತ ಅಗತ್ಯವಿದೆ.
ಇದನ್ನು ಓದಿದ್ದೀರಾ? ತಮಿಳುನಾಡು 234 ಕ್ಷೇತ್ರಗಳ ಆರಂಭಿಕ ಟ್ರೆಂಡ್: 93 ಕ್ಷೇತ್ರಗಳಲ್ಲಿ ‘ಟಿವಿಕೆ’ ಮುನ್ನಡೆ, ಡಿಎಂಕೆಗೆ 3ನೇ ಸ್ಥಾನ
ಸದ್ಯದ ಆರಂಭಿಕ ಟ್ರೆಂಡ್‌ಗಳ ಪ್ರಕಾರ, 15 ವರ್ಷಗಳಿಂದ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಮತ್ತು ಭಾರತೀಯ ಜನತಾ ಪಾರ್ಟಿ (BJP) ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದು, ಬಹುಮತದ ಗಡಿಯಾದ 148 ಸ್ಥಾನಗಳನ್ನು ದಾಟುವ ಸುಳಿವು ನೀಡಿದೆ. ಇನ್ನೊಂದು ಕಡೆ, ಹೈ-ವೋಲ್ಟೇಜ್ ಕ್ಷೇತ್ರವಾದ ಭವಾನಿಪುರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ಸುವೇಂದು ಅಧಿಕಾರಿ ನಡುವೆ ಜಿದ್ದಾಜಿದ್ದಿನ ಕದನ ಏರ್ಪಟ್ಟಿದೆ; ಮೂರನೇ ಸುತ್ತಿನ ನಂತರ ಮಮತಾ ಬ್ಯಾನರ್ಜಿ ಅವರು ಕೇವಲ 898 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಹಲವು ಪ್ರಮುಖ ಟಿಎಂಸಿ ಅಭ್ಯರ್ಥಿಗಳು ಹಿನ್ನಡೆ ಅನುಭವಿಸುತ್ತಿರುವುದು ಪಕ್ಷದ ವಲಯದಲ್ಲಿ ಆತಂಕ ಮೂಡಿಸಿದೆ. ರಾಜ್ಯದ ರಾಜಕೀಯ ಚಿತ್ರಣ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ.




