ಇರಾನ್ ವಿರುದ್ಧದ ಸಂಘರ್ಷ ತೀವ್ರಗೊಳ್ಳುತ್ತಿರುವಂತೆಯೇ ಅಮೆರಿಕ ತನ್ನ ಅತ್ಯಂತ ಶಕ್ತಿಶಾಲಿ ಯುದ್ಧನೌಕೆಗಳಲ್ಲಿ ಒಂದಾದ ‘ಯುಎಸ್ಎಸ್ ಜಾರ್ಜ್ ಹೆಚ್‌ಡಬ್ಲ್ಯೂ ಬುಷ್’ ವಿಮಾನವಾಹಕ ನೌಕೆಯನ್ನು ಮಧ್ಯಪ್ರಾಚ್ಯಕ್ಕೆ ರವಾನೆ ಮಾಡಿದೆ.
ಇರಾನ್ ಸೇನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ಆ ದೇಶವನ್ನು “ಶಿಲಾಯುಗ”ಕ್ಕೆ ತಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸುಮಾರು 1 ಲಕ್ಷ ಟನ್ ತೂಕದ ಈ ಬೃಹತ್ ನಿಮಿಟ್ಜ್ ಕ್ಲಾಸ್ ಸೂಪರ್ ಕ್ಯಾರಿಯರ್, ಕೇವಲ ನೌಕೆಯಲ್ಲದೆ ಸಮುದ್ರದ ಮೇಲಿನ ಒಂದು ಸಣ್ಣ ನಗರದಂತಿದೆ. ಇದರಲ್ಲಿ 5,000ಕ್ಕೂ ಹೆಚ್ಚು ಸೈನಿಕರು, 70ಕ್ಕೂ ಹೆಚ್ಚು ಸುಧಾರಿತ ಯುದ್ಧ ವಿಮಾನಗಳು ಮತ್ತು ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಗಳಿವೆ. ಇದರ ಜೊತೆಗೆ ಅರೆಲಿಗ್-ಬರ್ಕ್ ದರ್ಜೆಯ ಮೂರು ಕ್ಷಿಪಣಿ ಧ್ವಂಸಕ ನೌಕೆಗಳಾದ ಯುಎಸ್ಎಸ್ ರೋಸ್, ಯುಎಸ್ಎಸ್ ಡೊನಾಲ್ಡ್ ಕುಕ್ ಮತ್ತು ಯುಎಸ್ಎಸ್ ಮೇಸನ್ ಕೂಡ ಸಾಥ್ ನೀಡುತ್ತಿವೆ. ಈ ನೌಕೆಗಳು ಟೊಮಾಹಾಕ್ ಕ್ಷಿಪಣಿಗಳ ಮೂಲಕ ನೂರಾರು ಕಿಲೋಮೀಟರ್ ದೂರದ ಗುರಿಯನ್ನು ನಿಖರವಾಗಿ ಧ್ವಂಸಗೊಳಿಸುವ ಸಾಮರ್ತ್ಯವುಳ್ಳದ್ದಾಗಿದೆ ಎನ್ನುವುದು ಪ್ರಮುಖಾಂಶ.
’21 ದಿನಗಳ’ ಗಡುವು ನೀಡಿದ್ದ ಟ್ರಂಪ್
ಬುಧವಾರವಷ್ಟೇ ಮಾತನಾಡಿದ್ದ ಅಧ್ಯಕ್ಷ ಟ್ರಂಪ್, “ಮುಂದಿನ ಎರಡರಿಂದ ಮೂರು ವಾರಗಳಲ್ಲಿ ಇರಾನ್ ಅನ್ನು ನಾವು ಶಿಲಾಯುಗಕ್ಕೆ ಕಳುಹಿಸಲಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದರು. ಅಮೆರಿಕದ ಪ್ರಬಲ ಯುದ್ಧನೌಕೆ ‘ಯುಎಸ್ಎಸ್ ಜೆರಾಲ್ಡ್ ಆರ್ ಫೋರ್ಡ್’ನಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿಯ ಅವಘಡದಿಂದಾಗಿ ಉಂಟಾಗಿದ್ದ ನಷ್ಟವನ್ನು ತುಂಬುವುದಕ್ಕೆ ಈಗ ‘ಬುಷ್’ ನೌಕೆಯನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನೌಕೆ ಪರ್ಷಿಯನ್ ಗಲ್ಫ್ ತಲುಪಲು ಸುಮಾರು ಎರಡು ವಾರಗಳ ಕಾಲಾವಕಾಶ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಟ್ರಂಪ್ ನೀಡಿದ ಗಡುವು ವಿಸ್ತರಣೆಯಾಗುವ ಮುನ್ಸೂಚನೆಯನ್ನೂ ನೀಡುತ್ತಿದೆ.
ಭೂಸೇನಾ ದಾಳಿಯ ಮುನ್ಸೂಚನೆಯೇ?
ಕೇವಲ ವಾಯುದಾಳಿ ಮಾತ್ರವಲ್ಲದೆ, ಇರಾನ್ ಮೇಲೆ ಭೂಸೇನೆಯ ಮೂಲಕ ದಾಳಿ ನಡೆಸುವ ಲಕ್ಷಣಗಳು ದಟ್ಟವಾಗಿವೆ. ಇರಾನ್‌ನ ತೈಲ ಕೇಂದ್ರಗಳನ್ನು ವಶಪಡಿಸಿಕೊಳ್ಳಲು ಅಥವಾ ಅಣು ಇಂಧನದ ದಾಸ್ತಾನುಗಳನ್ನು ವಶಕ್ಕೆ ಪಡೆಯಲು ಅಮೆರಿಕ ಈಗಾಗಲೇ 57,000 ಸೈನಿಕರನ್ನು ಸಿದ್ಧತೆಯಲ್ಲಿರುವಂತೆ ಸೂಚನೆ ನೀಡಿದೆ. ಹೊಸ ಯುದ್ಧನೌಕೆಯ ಆಗಮನ ಭೂಸೇನೆಯ ಕಾರ್ಯಾಚರಣೆಗೆ ಅಗತ್ಯವಿರುವ ವಾಯು ರಕ್ಷಣೆ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ ಬೆಂಬಲವನ್ನು ಒದಗಿಸಲಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಇದನ್ನೂ ಓದಿ: ಮಧ್ಯಪ್ರಾಚ್ಯ ಬಿಕ್ಕಟ್ಟು | ನ್ಯಾಟೋ ಒಕ್ಕೂಟದಿಂದ ಹೊರನಡೆಯುತ್ತಾ ಅಮೆರಿಕ?




