ಅಮೆರಿಕ ಮೂಲದ ಐಟಿ ಸಂಸ್ಥೆ ಒರಾಕಲ್ ಭಾರತದಲ್ಲಿ ಸುಮಾರು 12,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಅಲ್ಲದೆ, ಇನ್ನೊಂದು ತಿಂಗಳೊಳಗೆ ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಜಾಗತಿಕವಾಗಿ ಕಂಪನಿಯು ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಪೈಕಿ, ಭಾರತದಲ್ಲಿಯೇ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಎಂದು ಕಂಪನಿಯ ಮಾನವ ಸಂಪನ್ಮೂಲ (HR) ವಿಭಾಗವು ತಿಳಿಸಿದೆ.
ಒಂದು ತಿಂಗಳೊಳಗೆ ಕಂಪನಿಯು ಮತ್ತೊಂದು ಸುತ್ತಿನ ಸಾಮೂಹಿಕ ಉದ್ಯೋಗ ಕಡಿತಕ್ಕೆ ಯೋಜಿಸುತ್ತಿದೆ ಎಂದು ಈಗ ಉದ್ಯೋಗ ಕಳೆದುಕೊಂಡಿರುವ ಸಂತ್ರಸ್ತರು ಹೇಳಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲು ಕಂಪನಿಯು ನಿರಾಕರಿಸಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
“ಸಾಂಸ್ಥಿಕ ಬದಲಾವಣೆಗಳ ಬಗ್ಗೆ ಉದ್ಯೋಗಿಗಳಿಗೆ ಮಾಹಿತಿ ನೀಡಲಾಗಿದೆ. ಈ ಬದಲಾವಣೆಗಳೊಂದಿಗೆ, ಕಂಪನಿಯ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಪರಿಣಾಮವಾಗಿ, ದುರದೃಷ್ಟವಶಾತ್ ನೀವು ಪ್ರಸ್ತುತ ಹೊಂದಿರುವ ಹುದ್ದೆಯು ಅನಗತ್ಯವಾಗಲಿದೆ” ಎಂದು ಸಂಸ್ಥೆಯು ಹಲವು ಉದ್ಯೋಗಿಗಳಿಗೆ ಹೇಳಿರುವುದಾಗಿ ತಿಳಿದುಬಂದಿದೆ.
“ಭಾರತದಲ್ಲಿ ಒಂದು ವರ್ಷದ ಸೇವೆಯನ್ನು ಪೂರ್ಣಗೊಳಿಸಿದ ಪ್ರತಿಯೊಬ್ಬ ಉದ್ಯೋಗಿಗೆ ಕಂಪನಿಯು 15 ದಿನಗಳ ಸಂಬಳ, ಉದ್ಯೋಗ ಕೊನೆಗೊಳ್ಳುವ ದಿನದವರೆಗೆ ಒಂದು ತಿಂಗಳ ಬಾಕಿ ವೇತನ ಪಾವತಿ, ರಜೆ ನಗದೀಕರಣ, ಅರ್ಹತೆಗೆ ಅನುಗುಣವಾಗಿ ಗ್ರಾಚ್ಯುಟಿ, ಒಂದು ತಿಂಗಳ ನೋಟಿಸ್ ಅವಧಿಯ ವೇತನ ಹಾಗೂ ಹೆಚ್ಚುವರಿಯಾಗಿ ಎರಡು ತಿಂಗಳ ಸಂಬಳವನ್ನು ‘ಟಾಪ್-ಅಪ್’ ಆಗಿ ಕಂಪನಿ ನೀಡುತ್ತಿದೆ” ಎಂದು ಕೆಲ ಉದ್ಯೋಗಿಗಳು ಹೇಳಿದ್ದಾರೆ.
ಆದಾಗ್ಯೂ, ಈ ಪರಿಹಾರ ಪ್ಯಾಕೇಜ್‌ಗಳು ಕಂಪನಿಗೆ ಸ್ವಯಂಪ್ರೇರಿತವಾಗಿ ಮತ್ತು ಸೌಹಾರ್ದಯುತವಾಗಿ ರಾಜೀನಾಮೆ ನೀಡುವವರಿಗೆ ಮಾತ್ರ ದೊರೆಯುತ್ತದೆ ಎಂದು ಹೇಳಲಾಗಿದೆ.
ಈ ಲೇಖನ ಓದಿದ್ದೀರಾ?: ಟ್ರಂಪ್-ನೆತನ್ಯಾಹು ಎಂಬ ಅರಿವುಗೇಡಿಗಳ ಅಣುಬಾಂಬ್ ಯುದ್ಧ; ಮನುಕುಲ ಪ್ರಪಾತದತ್ತ!
“ಕಂಪನಿಯು ಭಾರತದಲ್ಲಿ 16 ಗಂಟೆಗಳ ಕೆಲಸದ ಅವಧಿಯನ್ನು ಹೊಂದಿದೆ. ಇದನ್ನು ವಿರೋಧಿಸಿದಕ್ಕಾಗಿ ಸೆಪ್ಟೆಂಬರ್‌ನಲ್ಲಿ ತಮ್ಮನ್ನು ಕೆಲಸದಿಂದ ತೆಗೆದುಹಾಕಿದೆ” ಎಂದು ಒರಾಕಲ್‌ನ ಮಾಜಿ ಉದ್ಯೋಗಿ ಮೆರುಗು ಶ್ರೀಧರ್ ಆರೋಪಿಸಿದ್ದಾರೆ.
“ನಾನು ನನ್ನ ಸ್ನೇಹಿತರನ್ನು ಮತ್ತು ಮಾನವ ಸಂಪನ್ಮೂಲ ಇಲಾಖೆಯಲ್ಲಿರುವವರನ್ನು ಸಂಪರ್ಕಿಸಿದೆ. ಅಮೆರಿಕದಲ್ಲಿ ಒರಾಕಲ್‌ನಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಭಾರತೀಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಏಕೆಂದರೆ ಅಲ್ಲಿನ ಸ್ಥಳೀಯ ನಾಗರಿಕರನ್ನು ಕೆಲಸದಿಂದ ತೆಗೆದುಹಾಕುವ ವಿಷಯದಲ್ಲಿ ಅಲ್ಲಿನ ಕಾನೂನುಗಳು ಬಹಳ ಕಟ್ಟುನಿಟ್ಟಾಗಿವೆ” ಎಂದು ಶ್ರೀಧರ್ ಹೇಳಿದ್ದಾರೆ.



