ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸುತ್ತಿರುವ ಯುದ್ಧ ಮತ್ತು ಈ ಸಂಘರ್ಷದ ನಡುವೆ ಭಾರತ ಅನುಸರಿಸುತ್ತಿರುವ ವಿದೇಶಾಂಗ ನೀತಿಯ ಕುರಿತು ಕೇಂದ್ರದ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಮ್ಮ ಸ್ನೇಹಿತರು ತಪ್ಪು ಮಾಡಿದಾಗ ಅದನ್ನು ತಪ್ಪು ಎಂದು ಹೇಳುವ ಮತ್ತು ತಿದ್ದುವ ಧೈರ್ಯ ನಿಮಗಿರಬೇಕು’ ಎಂದು ಕೇಂದ್ರ ಸರ್ಕಾರವನ್ನು ಜರಿದಿದ್ದಾರೆ.
ಇರಾನ್-ಇಸ್ರೇಲ್-ಅಮೆರಿಕ ಬಿಕ್ಕಟ್ಟಿನ ವಿಚಾರವಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ನಡೆಸಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. “ಭಾರತದ ವಿದೇಶಾಂಗ ನೀತಿಗೆ ‘ತಿದ್ದುಪಡಿ’ಯ ಅಗತ್ಯವಿದೆ. ರಷ್ಯಾ ಮತ್ತು ಚೀನಾವನ್ನು ಜಾಗತಿಕ ರಾಜಕೀಯದ ಪ್ರಮುಖ ಶಕ್ತಿಗಳಾಗಿದ್ದು, ಅವುಗಳೊಂದಿಗೆ ಅರ್ಥಪೂರ್ಣ ಸಂವಹನ ನಡೆಸುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಯಾವುದೇ ದೇಶವು ತನ್ನ ಗುರಿಯನ್ನು ತಲುಪಿದಂತೆ ಕಾಣುತ್ತಿಲ್ಲ, ಇದು ಆತಂಕಕಾರಿ ವಿಷಯ. ಇರಾನ್‌ನ ಪ್ರತಿಕ್ರಿಯೆಗಳೂ ಅಸ್ಪಷ್ಟವಾಗಿವೆ. ಈ ಯುದ್ಧವು ಇರಾನ್‌ನ ತೈಲ ಆದಾಯದ ಮೇಲೆ ಹೊಡೆತ ಬಿದ್ದರೆ, ಅದು ಇಡೀ ಜಗತ್ತಿನ ಮೇಲೆ ದೀರ್ಘಕಾಲದ ಪ್ರಭಾವ ಬೀರಲಿದೆ” ಎಂದು ಅವರು ಹೇಳಿದ್ದಾರೆ.
ಇರಾನ್ ಮೇಲೆ ಅಮೆರಿಕ ಸೇನೆಯನ್ನು ಇಳಿಸುವ ಸಾಧ್ಯತೆಯ ಬಗ್ಗೆ ಮಾತನಾಡಿದ ಖುರ್ಷಿದ್, “ಇದು ಅತ್ಯಂತ ಕಠಿಣ ನಿರ್ಧಾರ. ಒಂದು ವೇಳೆ ಅಮೆರಿಕ ಇರಾನ್‌ನ ತೈಲ ಪೂರೈಕೆಯನ್ನು ತಡೆಯಲು ಪ್ರಯತ್ನಿಸಿದರೆ, ಅಮೆರಿಕದ ಒಳಗೇ ಸಾರ್ವಜನಿಕ ವಿರೋಧ ವ್ಯಕ್ತವಾಗಬಹುದು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂಬರುವ ಮಧ್ಯಂತರ ಚುನಾವಣೆಗಳಲ್ಲಿ ಡೆಮೋಕ್ರಾಟ್‌ಗಳನ್ನು ಎದುರಿಸಬೇಕಾದರೆ ಸಾರ್ವಜನಿಕ ಬೆಂಬಲವನ್ನು ಉಳಿಸಿಕೊಳ್ಳುವುದು ಅನಿವಾರ್ಯ” ಎಂದಿದ್ದಾರೆ.
“ಸಂಘರ್ಷದ ಆರಂಭದಿಂದಲೂ ಭಾರತವು ಇರಾನ್‌ಗೆ ದ್ರೋಹ ಬಗೆದಿದೆ. ಆದಾಗ್ಯೂ, ಯುದ್ಧ ಆರಂಭವಾದ ನಂತರ ಇರಾನ್ ಭಾರತದ ಬಗ್ಗೆ ಸ್ವಲ್ಪ ಸಕಾರಾತ್ಮಕ ನಿಲುವನ್ನು ಹೊಂದಿದೆ. ಆದರೆ ಭಾರತದ ವಿದೇಶಾಂಗ ನೀತಿಯು ತನ್ನ ಹಳೆಯ ತತ್ವಗಳಿಂದ ದೂರ ಸರಿಯುತ್ತಿದೆ ಎಂಬುದು ಕಳವಳಕಾರಿ. ಅಲಿಪ್ತ ನೀತಿ ಮತ್ತು ನೈತಿಕ ಮೌಲ್ಯಗಳನ್ನು ನಾವು ಮರೆಯುತ್ತಿದ್ದೇವೆ. ಇಸ್ರೇಲ್-ಇರಾನ್ ಸಂಘರ್ಷದ ವಿಷಯದಲ್ಲಿ ಭಾರತವು ಪೂರ್ವಸಿದ್ಧತೆ ಇಲ್ಲದೆ ಮೌನಕ್ಕೆ ಶರಣಾಗಿದೆ” ಎಂದು ಟೀಕಿಸಿದ್ದಾರೆ.
“ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ನಡುವೆ ಸಂಧಾನಕ್ಕೆ ಮುಂದಾಗಿದೆ. ಭಾರತವು ಒಂದು ದೊಡ್ಡ ಅವಕಾಶವನ್ನು ಕಳೆದುಕೊಂಡಿದೆ. ನಾವು ನಮ್ಮನ್ನು ‘ವಿಶ್ವಗುರು’ ಮತ್ತು ‘ವಿಶ್ವಮಿತ್ರ’ ಎಂದು ಕರೆದುಕೊಳ್ಳುತ್ತೇವೆ. ಆದರೆ, ಜಾಗತಿಕವಾಗಿ ನಮ್ಮ ಧ್ವನಿ ಕೇಳಿಸುತ್ತಿಲ್ಲ. ಗಾಜಾ ಹತ್ಯಾಕಾಂಡ ನಡೆದಾಗಲೂ ಭಾರತದ ನೈತಿಕ ಧ್ವನಿ ಕಾಣೆಯಾಗಿತ್ತು. ಪಾಕಿಸ್ತಾನದಂತಹ ದೇಶವು ನಮ್ಮ ಸ್ನೇಹಿತರೊಂದಿಗೆ ಸಂಧಾನ ನಡೆಸುತ್ತಿರುವಾಗ, ನಮ್ಮ ಪ್ರಭಾವ ಎಲ್ಲಿ ಎಂಬ ಪ್ರಶ್ನೆ ಮೂಡುತ್ತದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಟ್ರಂಪ್-ನೆತನ್ಯಾಹು ಎಂಬ ಅರಿವುಗೇಡಿಗಳ ಅಣುಬಾಂಬ್ ಯುದ್ಧ; ಮನುಕುಲ ಪ್ರಪಾತದತ್ತ!
ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿಯು ‘ರಾಜಿ ಮಾಡಿಕೊಂಡಿದೆ’ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸಮರ್ಥಿಸಿದ ಅವರು, “ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದಗಳ ಬಗ್ಗೆ ಸರ್ಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಭಾರತದ ರೈತರು ಮತ್ತು ಕೈಗಾರಿಕೆಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಮಗೆ ಇರಾನ್, ಅರಬ್ ರಾಷ್ಟ್ರಗಳು ಹಾಗೂ ಇಸ್ರೇಲ್ ಜೊತೆ ಉತ್ತಮ ಸಂಬಂಧವಿದೆ. ಇದು ಮೋದಿ ಸರ್ಕಾರದ ಸಾಧನೆಯಲ್ಲ, ಬದಲಿಗೆ ದಶಕಗಳಿಂದ ಭಾರತ ಗಳಿಸಿಕೊಂಡಿರುವ ಗೌರವ. ನಾವು ಯಾರ ಪರವೂ ಇರಬೇಕಿಲ್ಲ, ಆದರೆ ಗೆಳೆಯರು ತಪ್ಪು ಮಾಡಿದಾಗ ಧೈರ್ಯದಿಂದ ಅದನ್ನು ಹೇಳುವ ಶಕ್ತಿ ನಮಗಿರಬೇಕು. ರಷ್ಯಾ ಮತ್ತು ಚೀನಾ ಈ ಪ್ರದೇಶದ ಪ್ರಮುಖ ಶಕ್ತಿಗಳು, ಭಾರತವು ಜಾಗತಿಕ ಮಟ್ಟದಲ್ಲಿ ಬೆಳೆಯಬೇಕಾದರೆ, ಇವುಗಳೊಂದಿಗೆ ಕೇವಲ ಔಪಚಾರಿಕ ಸಂವಹನ ನಡೆಸುವ ಬದಲು ಅರ್ಥಪೂರ್ಣ ಮಾತುಕತೆ ನಡೆಸಬೇಕಿದೆ” ಎಂದು ಖುರ್ಷಿದ್ ತಿಳಿಸಿದ್ದಾರೆ.



