ಜಾಗತಿಕ ಟೆಕ್ ದೈತ್ಯ ಒರ್ಯಾಕಲ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ತಂತ್ರಜ್ಞಾನ ವಲಯದಲ್ಲಿ ಸಂಚಲನ ಮೂಡಿಸಿದೆ. ಅಮೆರಿಕ, ಭಾರತ ಸೇರಿದಂತೆ ವಿಶ್ವದಾದ್ಯಂತ ಇರುವ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಬೆಳಗಿನ ಜಾವ ಆರು ಗಂಟೆಗೆ ಸರಿಯಾಗಿ ಇಮೇಲ್ ಮೂಲಕ ವಜಾದೇಶದ ಮಾಹಿತಿ ರವಾನಿಸಲಾಗಿದೆ. ‘ಒರ್ಯಾಕಲ್ ಲೀಡರ್‌ಶಿಪ್’ ಹೆಸರಿನಿಂದ ಬಂದ ಈ ಇಮೇಲ್‌ನಲ್ಲಿ, “ನಿಮ್ಮ ಹುದ್ದೆಯನ್ನು ಕಡಿತಗೊಳಿಸುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ” ಎಂಬ ಸಂದೇಶವಿತ್ತು. ಇದು ಕಂಪನಿಯ ಇತಿಹಾಸದಲ್ಲಿಯೇ ಅತಿ ದೊಡ್ಡ ಉದ್ಯೋಗ ಕಡಿತಗಳಲ್ಲಿ ಒಂದಾಗಿದೆ.
ಜೂನ್ 22 ರಂದು ಬಿಡುಗಡೆಯಾದ ವಾರ್ಷಿಕ ವರದಿಯ ಪ್ರಕಾರ, 2026ನೇ ಹಣಕಾಸು ವರ್ಷದಲ್ಲಿ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ ಶೇಕಡಾ 13ರಷ್ಟು ಕುಸಿದಿದೆ. ಕಳೆದ ವರ್ಷ 1,62,000 ಸಂಖ್ಯೆ ಇದೀಗ 1,41,000 ಇಳಿಕೆಯಾಗಿದೆ. ಈ ಬೃಹತ್ ಪುನರ್‌ರಚನಾ ಪ್ರಕ್ರಿಯೆಗಾಗಿ ಕಂಪನಿಯು ಬರೋಬ್ಬರಿ 17 ಸಾವಿರ ಕೋಟಿಯಷ್ಟು ದೊಡ್ಡ ಮೊತ್ತವನ್ನು ಪರಿಹಾರ ಹಾಗೂ ನಿರ್ಗಮನ ವೆಚ್ಚಗಳಿಗಾಗಿ ಭರಿಸಿದೆ. ಇದು ಹಿಂದಿನ ವರ್ಷದ ವೆಚ್ಚಕ್ಕಿಂತ ಹೆಚ್ಚಾಗಿದೆ.
ಈ ಹಠಾತ್ ಉದ್ಯೋಗ ಕಡಿತಕ್ಕೆ ಪ್ರಮುಖವಾಗಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆ ಹಾಗೂ ಆಂತರಿಕ ಕಾರ್ಯತಂತ್ರದ ಬದಲಾವಣೆಗಳೇ ಕಾರಣ ಎಂದು ಕಂಪನಿ ಸ್ಪಷ್ಟಪಡಿಸಿದೆ. ಆಡಳಿತ ಮಂಡಳಿ ಮತ್ತು ಉತ್ಪನ್ನಗಳಲ್ಲಿನ ಮಹತ್ವದ ಬದಲಾವಣೆಗಳು, ಕಾರ್ಯಕ್ಷಮತೆಯ ಸಮಸ್ಯೆಗಳು, ಇತರ ಸಂಸ್ಥೆಗಳ ಸ್ವಾಧೀನ ಪ್ರಕ್ರಿಯೆಗಳು ಹಾಗೂ ಬದಲಾಗುತ್ತಿರುವ ಮಾರುಕಟ್ಟೆಯ ಸವಾಲುಗಳಿಗೆ ಹೊಂದಿಕೊಳ್ಳಲು ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಕೃತಕ ಬುದ್ಧಿಮತ್ತೆಯು ಉದ್ಯೋಗದ ಮೇಲೆ ಬೀರಿದ ಪ್ರಭಾವವಿದು.
ಇದನ್ನು ಓದಿದ್ದೀರಾ? ರಾಮಮಂದಿರ ದೇವರ ಹುಂಡಿಗೆ ಕನ್ನ; ಡಬಲ್ ಎಂಜಿನ್ ಸರ್ಕಾರದ ಭ್ರಷ್ಟಾಚಾರ ಬಯಲು
ಅಮೆರಿಕದ ಉದ್ಯೋಗಿಗಳಿಗೆ ಒರ್ಯಾಕಲ್ ನೀಡುತ್ತಿರುವ ಪರಿಹಾರ ಪ್ಯಾಕೇಜ್ ಇತರ ಟೆಕ್ ಕಂಪನಿಗಳಿಗೆ ಹೋಲಿಸಿದರೆ ಬಹಳ ಕಡಿಮೆಯಿದೆ. ಮೊದಲ ವರ್ಷದ ಸೇವೆಗಾಗಿ ಕೇವಲ ನಾಲ್ಕು ವಾರಗಳ ಮೂಲ ವೇತನ ಹಾಗೂ ತದನಂತರದ ಪ್ರತಿ ವರ್ಷದ ಸೇವೆಗೆ ಹೆಚ್ಚುವರಿಯಾಗಿ ಕೇವಲ ಒಂದು ವಾರದ ವೇತನವನ್ನು ನೀಡಲಾಗುತ್ತಿದೆ. ಇದು ಗರಿಷ್ಠ ಇಪ್ಪತ್ತಾರು ವಾರಗಳಿಗೆ ಮಾತ್ರ ಸೀಮಿತವಾಗಿದೆ. ಇದಲ್ಲದೆ, ಮೆಟಾ ಅಥವಾ ಇತರ ಕಂಪನಿಗಳಂತೆ ಯಾವುದೇ ರೀತಿಯ ಉಚಿತ ಆರೋಗ್ಯ ವಿಮೆ ಅಥವಾ ಹೆಚ್ಚುವರಿ ಸೌಲಭ್ಯಗಳನ್ನು ವಜಾಗೊಂಡ ನೌಕರರಿಗೆ ಒದಗಿಸಿಲ್ಲ.
ಭಾರತದಲ್ಲಿನ ಉದ್ಯೋಗಿಗಳಿಗೆ ಎನ್ ಪ್ಲಸ್ ಟು ಸೂತ್ರದಡಿ(ಪರಿಹಾರ ನೀಡುವ ಒಂದು ವಿಧಾನ)) ಪರಿಹಾರವನ್ನು ಕಂಪನಿ ನೀಡಲಿದೆ. ಅಂದರೆ, ಉದ್ಯೋಗಿ ಸೇವೆ ಸಲ್ಲಿಸಿದ ಒಟ್ಟು ವರ್ಷಗಳ ಜೊತೆಗೆ ಹೆಚ್ಚುವರಿ ಎರಡು ತಿಂಗಳ ವೇತನ ಲಭ್ಯವಾಗಲಿದೆ.




