ಕಳೆದ ವಾರ ಆತ್ಮಹತ್ಯೆಗೆ ಶರಣಾದ ಐಐಟಿ ಬಾಂಬೆಯ (IIT Bombay) ಬಿ.ಟೆಕ್ ವಿದ್ಯಾರ್ಥಿಯ ಪೋಷಕರು, ತಮ್ಮ ಮಗನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ಸಂಜೆಯಿಂದ ಮುಂಬೈನ ಆಜಾದ್ ಮೈದಾನದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ (NCSC) ಜೊತೆಗಿನ ಸಭೆಯ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಸೆಪ್ಟೆಂಬರ್ 18ರಂದು ಪರೀಕ್ಷೆ ಬರೆಯುವಾಗ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಪ್ರಾಧ್ಯಾಪಕರಿಂದ ತರಾಟೆಗೆ ಒಳಗಾಗಿದ್ದ ವಿದ್ಯಾರ್ಥಿಯು, ಅದೇ ದಿನ ಸಂಜೆ ಶವವಾಗಿ ಪತ್ತೆಯಾಗಿದ್ದ. ಪರೀಕ್ಷಾ ಕೊಠಡಿಯಿಂದ ಹೊರನಡೆಯುವಂತೆ ಸೂಚಿಸಿದ್ದಲ್ಲದೆ, ಅಮಾನತು ಸೇರಿದಂತೆ ಶಿಸ್ತುಕ್ರಮ ಕೈಗೊಳ್ಳುವ ಬೆದರಿಕೆಯನ್ನು ವಿದ್ಯಾರ್ಥಿಗೆ ಹಾಕಲಾಗಿತ್ತು ಎಂದು ಐಐಟಿ ವಿದ್ಯಾರ್ಥಿಗಳು ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ನಿರಾಕರಿಸಿದ್ದ ಐಐಟಿ ಆಡಳಿತ ಮಂಡಳಿ, ಈ ಘಟನೆಯಿಂದ ವಿದ್ಯಾರ್ಥಿಯ ವೃತ್ತಿಜೀವನದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂಬ ಭರವಸೆಯನ್ನು ಆತನಿಗೆ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿತ್ತು.
ಐಐಟಿ ಬಾಂಬೆ ನಿರ್ದೇಶಕ ಶಿರೀಶ್ ಕೆದಾರೆ ಮತ್ತು ವಿದ್ಯಾರ್ಥಿ ವ್ಯವಹಾರಗಳ ಡೀನ್ ಸತ್ಯನಾರಾಯಣ ದುಲ್ಲಾ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಮೃತ ವಿದ್ಯಾರ್ಥಿಯ ಪೋಷಕರು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಸಂಸ್ಥೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಗುರುವಾರ ಪ್ರತಿಭಟನೆ ಮುಂದುವರಿಸಲು ಪೋಷಕರು ಐಐಟಿಯ ಮುಖ್ಯ ದ್ವಾರದತ್ತ ತೆರಳುತ್ತಿದ್ದಾಗ, ಕ್ಯಾಂಪಸ್‌ನಿಂದ ಸುಮಾರು 5 ಕಿ.ಮೀ. ದೂರದಲ್ಲಿ ಮುಂಬೈ ಪೊಲೀಸರು ಅವರನ್ನು ತಡೆದರು. ಸುಮಾರು ಒಂದು ಗಂಟೆ ಕಾಯಿಸಿದ ಬಳಿಕ, ಮುಂಬೈನ ಸರ್ಕಾರಿ ಅತಿಥಿಗೃಹವಾದ ಸಹ್ಯಾದ್ರಿ ಗೆಸ್ಟ್ ಹೌಸ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಎನ್‌ಸಿಎಸ್‌ಸಿ ಅಧ್ಯಕ್ಷ ಕಿಶೋರ್ ಮಕ್ವಾನಾ ಅವರನ್ನು ಭೇಟಿಯಾದರು. ಇದೇ ವೇಳೆ ಮಕ್ವಾನಾ ಅವರು ಐಐಟಿ ಕ್ಯಾಂಪಸ್‌ಗೂ ಭೇಟಿ ನೀಡಿದ್ದರು.
ಪೋಷಕರಿಗೆ ಕಾನೂನು ನೆರವು ನೀಡುತ್ತಿರುವ ವಕೀಲರಾದ ಸಿದ್ಧಾರ್ಥ್ ಇಂಗಳೆ ಮತ್ತು ನಿಖಿಲ್ ಕಾಂಬ್ಳೆ ಈ ಕುರಿತು ಮಾಹಿತಿ ನೀಡಿದ್ದು, “ಹಾಲಿ ನಡೆಯುತ್ತಿರುವ ತನಿಖೆಯ ಮೇಲೆ ನಿಮಗೆ ನಂಬಿಕೆ ಇದೆಯೇ ಎಂದು ಮಕ್ವಾನಾ ಅವರು ಪೋಷಕರನ್ನು ಕೇಳಿದರು. ಈ ವೇಳೆ, ಪ್ರಕರಣದ ಪ್ರಮುಖ ಸಾಕ್ಷ್ಯವಾಗಿರುವ ಸೆಪ್ಟೆಂಬರ್ 18ರ ಪರೀಕ್ಷಾ ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳು ಮಾಧ್ಯಮಗಳಿಗೆ ಸೋರಿಕೆಯಾಗಿರುವ ಬಗ್ಗೆ ಪೋಷಕರು ತೀವ್ರ ಕಳವಳ ವ್ಯಕ್ತಪಡಿಸಿದರು. ಇಂತಹ ಮಹತ್ವದ ಸಾಕ್ಷ್ಯ ಸಾರ್ವಜನಿಕವಾಗಿ ಲಭ್ಯವಾಗಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ದೃಶ್ಯಾವಳಿಗಳ ಸೋರಿಕೆ ಕುರಿತು ಸ್ವತಂತ್ರ ತನಿಖೆಯಾಗಬೇಕು ಹಾಗೂ ಪ್ರಕರಣದ ಸಂಪೂರ್ಣ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು” ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಎನ್‌ಸಿಎಸ್‌ಸಿಗೆ ಲಿಖಿತ ಮನವಿ ಸಲ್ಲಿಸಿದ ಪೋಷಕರು, ಎಫ್‌ಐಆರ್‌ನಲ್ಲಿ ಹೆಸರಿಸಲಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಸಿಬಿಐ ತನಿಖೆ ನಡೆಸುವಂತೆ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು. ಸಭೆಯ ಬಳಿಕ ಮತ್ತೆ ಆಜಾದ್ ಮೈದಾನಕ್ಕೆ ಮರಳಿದ ಅವರು ಆಮರಣಾಂತ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ. ತಮ್ಮ ಪ್ರಮುಖ ಬೇಡಿಕೆಗಳು ಈಡೇರುವವರೆಗೆ ಹಾಗೂ ಡೀನ್ ಅವರನ್ನು ಬಂಧಿಸುವವರೆಗೆ ಈ ಹೋರಾಟ ಕೈಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.




