ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಹಾಗೂ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ತಪ್ಪಿತಸ್ಥರ ಹೊಣೆಗಾರಿಕೆಯನ್ನು ನಿಗದಿಪಡಿಸದ ತನಿಖೆಗೆ ಯಾವುದೇ ಅರ್ಥವಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ದೆಹಲಿ ಪೊಲೀಸರಿಗೆ ತಿಳಿಸಿದೆ.
ಸಾರ್ವಜನಿಕ ಪರೀಕ್ಷೆಗಳಲ್ಲಿನ ಅಕ್ರಮಗಳು ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, “ಯಾರು ಮಿತಿಮೀರಿದರೋ ಅವರ ವಿರುದ್ಧ ಕಾನೂನು ಕ್ರಮ ಜರುಗಲೇಬೇಕು. ಹೊಣೆಗಾರಿಕೆಯನ್ನು ನಿಗದಿಪಡಿಸದ ತನಿಖೆ ನಿರರ್ಥಕ” ಎಂದು ಹೇಳಿದೆ.
ಪ್ರತಿಭಟನೆಗಳನ್ನು ನಿಯಂತ್ರಿಸುವ ವೇಳೆ ಪೊಲೀಸರು ಅನುಸರಿಸಬೇಕಾದ ಹೊಸ ಕಾರ್ಯವಿಧಾನದ (ಪ್ರೊಟೋಕಾಲ್) ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಈ ಹಿಂದೆ ನ್ಯಾಯಾಲಯ ಸೂಚಿಸಿದ್ದ ಮಾರ್ಗಸೂಚಿಗಳನ್ನು ದೆಹಲಿ ಪೊಲೀಸರು ಪಾಲಿಸಿಲ್ಲ ಎಂಬುದನ್ನೂ ಉಲ್ಲೇಖಿಸಿತು.
ಜುಲೈ 20ರಂದು ಜಂತರ್ ಮಂತರ್‌ನಿಂದ ಸಂಸತ್ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸಲು ಸಿಜೆಪಿ ನೇತೃತ್ವದ ವಿದ್ಯಾರ್ಥಿಗಳು ಮುಂದಾದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದರಿಂದ ಘರ್ಷಣೆ ಉಂಟಾಗಿ ಹಲವು ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, “ಇದು ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯಾಗಿತ್ತು. ಸಂವಿಧಾನದ ಚೌಕಟ್ಟಿನಲ್ಲೇ ತಮ್ಮ ಬೇಡಿಕೆಗಳನ್ನು ಮಂಡಿಸುತ್ತಿದ್ದರು. ಆದರೆ ಇಂತಹ ಪ್ರತಿಭಟನೆಗಳಲ್ಲಿ ದುರುದ್ದೇಶ ಹೊಂದಿದ ಸಮಾಜಘಾತುಕ ಅಂಶಗಳು ನುಸುಳುವ ಸಾಧ್ಯತೆಯೂ ಇರುತ್ತದೆ” ಎಂದು ಅಭಿಪ್ರಾಯಪಟ್ಟಿತು.
ಪ್ರತಿಭಟನೆಗಳು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದ್ದು, ಅವುಗಳನ್ನು ನಿಯಂತ್ರಿಸಲು ಅಶ್ರುವಾಯು ಅಥವಾ ಇತರೆ ಬಲಪ್ರಯೋಗದ ವಿಧಾನಗಳನ್ನು ಬಳಸಬೇಕೇ, ಬಳಸಿದರೆ ಯಾವ ಮಿತಿಯಲ್ಲಿ ಬಳಸಬೇಕು ಎಂಬ ಕುರಿತು ಹೊಸದಾಗಿ ಚರ್ಚಿಸುವ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.
ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ವಿದ್ಯಾರ್ಥಿಗಳ ಮೇಲೆ ಅನಗತ್ಯ ಬಲಪ್ರಯೋಗ ನಡೆದಿದ್ದರೆ ಕೇಂದ್ರ ಸರ್ಕಾರ ಅದನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಆದರೆ ಘಟನೆಯಲ್ಲಿ 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳ ಮನೋಬಲಕ್ಕೂ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು” ಎಂದು ವಾದಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳೇ ಹಿಂಸಾಚಾರ ನಡೆಸಿದ್ದಾರೆ ಎಂದು ತಾನು ನಂಬುವುದಿಲ್ಲ. ಕೊಲೆ, ಅತ್ಯಾಚಾರ ಹಾಗೂ ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಮಾಜಘಾತುಕ ಅಂಶಗಳು ವಿದ್ಯಾರ್ಥಿಗಳ ನಡುವೆ ನುಸುಳಿದ್ದವು ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಮೆಹ್ತಾ ತಿಳಿಸಿದರು.
ಇದನ್ನೂ ಓದಿ: ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ದಾಳಿ ಮಾಡಿದ್ದ ಆರ್‌ಎಎಫ್; ಆರೋಪ-ತನಿಖೆಗಳ ನಡುವೆ ಸಿಆರ್‌ಪಿಎಫ್‌ಗೆ ಮೋದಿ-ಶಾ ಶ್ಲಾಘನೆ
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, “ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ನಡುವೆ ಕಿಡಿಗೇಡಿಗಳು ನುಸುಳಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ನಡೆದ ಎಲ್ಲವನ್ನೂ ವಿದ್ಯಾರ್ಥಿಗಳೇ ಮಾಡಿರಬೇಕು ಎಂದು ಹೇಳಲಾಗುವುದಿಲ್ಲ” ಎಂದು ಹೇಳಿದರು.
ವಿದ್ಯಾರ್ಥಿಗಳ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿ, “ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ ಅನೇಕ ಘಟನೆಗಳನ್ನು ದಾಖಲಿಸಿದ್ದೇವೆ. ವಿಶ್ವಾಸಾರ್ಹ ಮಾಧ್ಯಮ ವರದಿಗಳು, ಛಾಯಾಚಿತ್ರಗಳು ಹಾಗೂ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಪೆಲ್ಲೆಟ್ ಗನ್ ಬಳಕೆ ಹಾಗೂ ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸರಿಂದಲೂ ಹಲ್ಲೆ ನಡೆದಿದೆ” ಎಂದು ಆರೋಪಿಸಿದರು.
ಇದೇ ಪ್ರಕರಣದ ವಿಚಾರಣೆ ವೇಳೆ ಸೋಮವಾರವೂ ಸುಪ್ರೀಂ ಕೋರ್ಟ್, “ಯಾವುದೇ ಪ್ರತಿಭಟನೆ ನಡೆದರೂ ಅದು ಪೊಲೀಸ್ ದೌರ್ಜನ್ಯ ಅಥವಾ ಲಾಠಿ ಪ್ರಹಾರಕ್ಕೆ ಸಮರ್ಥನೆಯಾಗಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿತ್ತು.





