2ನೇ ಮತ್ತು 3ನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಸತತ 5 ದಿನಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯು ಸ್ಥಳೀಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಂತ್ರಸ್ತ ಬಾಲಕಿಯರ ಕುಟುಂಬಕ್ಕೆ ಮೊದಲೇ ಪರಿಚಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 10ರಂದು ಬಾಲಕಿಯರ ಪೋಷಕರು ದಿನಗೂಲಿ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ, ಕಾದು ಕುಳಿತಿದ್ದ ಈತ, ಒಂಟಿಯಾಗಿದ್ದ ಮಕ್ಕಳ ಮೇಲೆ ಮೊದಲ ಬಾರಿಗೆ ದೌರ್ಜನ್ಯ ಎಸಗಿದ್ದಾನೆ. ಮಕ್ಕಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಲೆಕ್ಕಿಸದೆ, ಮುಂದಿನ ಐದು ದಿನಗಳ ಕಾಲವೂ ತನ್ನ ವಿಕೃತಿ ಮುಂದುವರಿಸಿದ್ದಾನೆ. ಅಲ್ಲದೆ, “ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿಮ್ಮ ತಂದೆ-ತಾಯಿಯನ್ನು ಕೊಲೆ ಮಾಡುತ್ತೇನೆ” ಎಂದು ಹೆದರಿಸಿ ಬಾಲಕಿಯರ ಬಾಯಿ ಮುಚ್ಚಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸದ್ಯ ಸಂತ್ರಸ್ತರ ತಂದೆ ನೀಡಿದ ದೂರಿನನ್ವಯ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಜಿನೀವಾದಲ್ಲಿ 15 ಅಂಶಗಳ ಶಾಂತಿ ಒಪ್ಪಂದಕ್ಕೆ ಅಮೆರಿಕ-ಇರಾನ್ ಸಹಿ; ಏನಿದು ₹28 ಲಕ್ಷ ಕೋಟಿ ಲೆಕ್ಕಾಚಾರ?
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಶೇಕಡಾ 90ಕ್ಕೂ ಹೆಚ್ಚು ಸಂದರ್ಭಗಳಲ್ಲಿ ಕುಟುಂಬಕ್ಕೆ ಅತ್ಯಂತ ಹತ್ತಿರದವರೇ ಅಥವಾ ಪರಿಚಿತರೇ ಅಪರಾಧಿಗಳಾಗಿರುತ್ತಾರೆ. ತಂದೆ-ತಾಯಿ ಇಬ್ಬರೂ ಕೂಲಿ ಕೆಲಸಕ್ಕೆ ಹೋಗುವ ಇಂತಹ ಬಡ ಕುಟುಂಬಗಳ ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಿರುವುದೇ ಕಾಮುಕರಿಗೆ ಸುಲಭದ ತುತ್ತಾಗುತ್ತಿದೆ. ಇಂತಹ ವಿಕೃತ ಮನಸ್ಸುಗಳ ವಿರುದ್ಧ ಕೇವಲ ಕಠಿಣ ಕಾನೂನು ಕ್ರಮ ಮಾತ್ರವಲ್ಲದೆ, ಇಡೀ ಸಮಾಜವೇ ಜಾಗರೂಕವಾಗಿರಬೇಕಾದ ಆವಶ್ಯಕತೆಯಿದೆ.
ಗಮನಿಸಿ: ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಯಾವುದೇ ಲೈಂಗಿಕ ದೌರ್ಜನ್ಯ ಘಟನೆಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಪ್ರಕಟಿಸುವುದು ಮತ್ತು ವಿತರಿಸುವುದು ಶಿಕ್ಷಾರ್ಹ ಅಪರಾಧ. ನೀವು ಅಂತಹ ವಿಷಯವನ್ನು ಗಮನಿಸಿದರೆ, ಆನ್‌ಲೈನ್‌ನಲ್ಲಿ ವರದಿ ಮಾಡಿ ಅಥವಾ 1098 or 7827170170 ಸಹಾಯವಾಣಿಗೆ ಕರೆ ಮಾಡಿ.




