- ಏಕವಿಲೋಮ ಅಲ್ಪ ವಿರಾಮ ಬಳಸಿ ಅರ್ಹ ಎಂದು ಬದಲಿಸಿಕೊಂಡ ರಾಹುಲ್ ಗಾಂಧಿ
- ದೆಹಲಿಯ ರಾಜ್‌ಘಾಟ್‌ನಲ್ಲಿ ‘ಸಂಕಲ್ಪ ಸತ್ಯಾಗ್ರಹ’ ಕೈಗೊಂಡಿರುವ ಕಾಂಗ್ರೆಸ್
ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಎರಡು ದಿನಗಳ ನಂತರ,ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ತಮ್ಮ ಟ್ವಿಟರ್ ಬಯೋವನ್ನು ಬದಲಿಸಿಕೊಂಡಿದ್ದಾರೆ. ಬಯೋದಲ್ಲಿ ‘ಅನರ್ಹ ಸಂಸದ’ ಎಂದು ಬರೆದುಕೊಂಡಿದ್ದಾರೆ.
‘ಅನ್’ಅರ್ಹ ಸಂಸದ'(ಡಿಸ್’ಕ್ವಾಲಿಫೈಡ್)ಎಂದು ಇಂಗ್ಲಿಷ್‌ನಲ್ಲಿ ಬದಲಿಸಿಕೊಂಡಿದ್ದರೂ ಏಕವಿಲೋಮ ಅಲ್ಪ ವಿರಾಮ ಬಳಸಿಕೊಂಡಿರುವುದರಿಂದ ‘ನಾನು ಅರ್ಹ’ ಎಂದು ಅರ್ಥ ನೀಡುತ್ತದೆ.
ರಾಹುಲ್ ಅವರ ಅನರ್ಹ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಇಂದು (ಮಾರ್ಚ್ 26) ದೆಹಲಿಯ ರಾಜ್‌ಘಾಟ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಒಂದು ದಿನದ ‘ಸಂಕಲ್ಪ ಸತ್ಯಾಗ್ರಹ’ ಮಾಡುತ್ತಿದೆ.
2019ರ ಲೋಕಸಭಾ ಚುನಾವಣೆಯ ವೇಳೆ ಕೋಲಾರದಲ್ಲಿ ನರೇಂದ್ರ ಮೋದಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆ ವಿಧಿಸಿದ ಬೆನ್ನಲ್ಲೇ ರಾಹುಲ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಸೂರತ್ ನ್ಯಾಯಾಲಯ 30 ದಿನಗಳ ಜಾಮೀನು ಮಂಜೂರು ಮಾಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಅದಾನಿಯವರ ಭ್ರಷ್ಟ ವ್ಯವಹಾರದ ಸಂಬಂಧದ ವಿರುದ್ಧ ವಾಗ್ದಾಳಿ ನಡೆಸಿದರು.
“ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿರುವುದು ಮತ್ತು ಪ್ರಧಾನಿ ನರೇಂದ್ರ ಮೋದಿ-ಅದಾನಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳಲು ಹೆದರುವುದಿಲ್ಲ. ನನ್ನ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ನಾಲ್ವರು ಸಚಿವರು ಮಾಡಿರುವ ಸುಳ್ಳು ಆರೋಪದ ವಿರುದ್ಧ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಲು ಅವಕಾಶ ನೀಡುವಂತೆ ಸ್ಪೀಕರ್ ಜೊತೆ ವಿನಂತಿಸಿದ್ದೇನೆ. ಆದರೆ, ಅವರು ಮಾತನಾಡಲು ಅವಕಾಶ ನೀಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ನಡುವಿನ ಸಂಬಂಧ ಹೊಸದಲ್ಲ” ಎಂದೂ ಅವರು ಆರೋಪಿಸಿದ್ದಾರೆ.
“ಶೆಲ್ ಕಂಪನಿಗಳಿಂದ ಹೊರಬಂದ 20,000 ಕೋಟಿ ರೂಪಾಯಿ ಯಾರ ಹಣ ಎಂದು ನಾನು ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸುವುದಿಲ್ಲ. ರಾಷ್ಟ್ರದ ಧ್ವನಿಯನ್ನು ರಕ್ಷಿಸಲು ನಾನು ಇಲ್ಲಿದ್ದೇನೆ. ನನ್ನನ್ನು ಜೀವನ ಪರ್ಯಂತ ಜೈಲಿಗೆ ಹಾಕಿದರೂ ಅಥವಾ ಸದಸ್ಯತ್ವವನ್ನು ರದ್ದುಗೊಳಿಸಿದರೂ ಭಾರತದ ಜನರ ಪ್ರಜಾಸತ್ತಾತ್ಮಕ ಧ್ವನಿಯನ್ನು ರಕ್ಷಿಸಲು ನನ್ನ ಹೋರಾಟ ಮುಂದುವರೆಯುತ್ತದೆ. ನಾನು ಯಾರಿಗೂ ಹೆದರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.