‘ನೀಟ್’ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದವನ್ನು ಖಂಡಿಸಿ ಜುಲೈ 20 ರಂದು ಕಾಕ್ರೋಚ್ ಜನತಾ ಪಾರ್ಟಿ (Cockroach Janata Party) ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಯುವಕನೊಬ್ಬನ ಮೇಲೆ ಪೊಲೀಸರು ಪೆಲೆಟ್ ಗನ್ ಬಳಸಿದ್ದನ್ನು ವಿರೋಧಿಸಿ ಹಾಗೂ ಈ ಬಗ್ಗೆ ಎಫ್‌ಐಆರ್ (FIR) ದಾಖಲಿಸುವಂತೆ ಆಗ್ರಹಿಸಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಇಂದು (ಆ.21) ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಹೊರಗೆ ದಿಢೀರ್ ಧರಣಿ ನಡೆಸಿದರು.
ಪೊಲೀಸ್ ಕಾರ್ಯಾಚರಣೆ ವೇಳೆ ಪೆಲೆಟ್ ಗನ್ ದಾಳಿಗೆ ತುತ್ತಾದ 19 ವರ್ಷದ ಪ್ರತಿಭಟನಾಕಾರ ಸಾಹಿಲ್ ಲೋಚಬ್ ಅವರೊಂದಿಗೆ ರಾಹುಲ್ ಗಾಂಧಿ ಠಾಣೆಗೆ ಆಗಮಿಸಿದ್ದರು. ಕಣ್ಣು ಮತ್ತು ಹೊಟ್ಟೆಯ ಭಾಗಕ್ಕೆ ಪೆಲೆಟ್ೇಟು (Pellet injuries) ಬಿದ್ದಿದ್ದರಿಂದ ಸಾಹಿಲ್ ಅವರು ಏಮ್ಸ್ (AIIMS) ಟ್ರಾಮಾ ಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಲಗಣ್ಣಿಗೆ ಪೆಲೆಟ್ ತಗುಲಿರುವ ಕಾರಣ ಆತನ ದೃಷ್ಟಿ ಹೋಗುವ ಆತಂಕವಿದೆ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಹಾಗೂ ಸಂತ್ರಸ್ತ ಸಾಹಿಲ್ ಮೊದಲು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದರು. ಆದರೆ, ಅಲ್ಲಿ ಅವರ ಬೇಡಿಕೆಯನ್ನು ಪುರಸ್ಕರಿಸದ ಕಾರಣ, ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ಡಿಸಿಪಿಯವರನ್ನು (DCP) ಭೇಟಿಯಾದರು. ಈ ವೇಳೆ ಠಾಣೆಯೊಳಗೆ ಪ್ರವೇಶಿಸಲು ಯತ್ನಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಪರಿಸ್ಥಿತಿ ಅರಿತ ದೆಹಲಿ ಪೊಲೀಸರು ಠಾಣೆಯ ಗೇಟ್‌ಗಳನ್ನು ಮುಚ್ಚಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದರು. ಅಲ್ಲದೆ ಪರಿಸ್ಥಿತಿ ನಿಯಂತ್ರಿಸಲು ತ್ವರಿತ ಕಾರ್ಯಪಡೆಯನ್ನು (RAF) ಸ್ಥಳಕ್ಕೆ ಕರೆಯಿಸಲಾಯಿತು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಠಾಣೆಯ ಬಳಿ ಆಗಮಿಸಿ ಗೇಟ್ ಹೊರಗೆ ಕಾರ್ಯಕರ್ತರೊಂದಿಗೆ ಧರಣಿಯಲ್ಲಿ ಪಾಲ್ಗೊಂಡರು.
ಕಾಂಗ್ರೆಸ್ ಪಕ್ಷದ ಮಾಹಿತಿಯ ಪ್ರಕಾರ, ಸಾಹಿಲ್ ಲೋಚಬ್ ಅವರು ತಮ್ಮ ವಕೀಲರೊಂದಿಗೆ ಆಗಸ್ಟ್ 14 ರಂದೇ ದೆಹಲಿ ಪೊಲೀಸರನ್ನು ಸಂಪರ್ಕಿಸಿ ಲಿಖಿತ ದೂರು ನೀಡಿದ್ದರು. ಆದರೆ, ಪೊಲೀಸರು ತನಿಖಾಧಿಕಾರಿಯ (I/O) ಸಂಖ್ಯೆ ಅಥವಾ ದೂರು ಸ್ವೀಕರಿಸಿದ ಕುರಿತು ಯಾವುದೇ ಹಿಂಬರಹ ನೀಡಿರಲಿಲ್ಲ. ಆಗಸ್ಟ್ 17 ರಂದು ಇ-ಮೇಲ್ ಮತ್ತು ಫೋನ್ ಮೂಲಕ ಮತ್ತೆ ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. “ಇದೊಂದು ಗಂಭೀರ ಸ್ವರೂಪದ (cognisable) ಅಪರಾಧವಾಗಿರುವುದರಿಂದ ಎಫ್‌ಐಆರ್ ದಾಖಲಿಸಲೇಬೇಕಿದೆ. ಆದರೆ ಡಿಸಿಪಿ ಅವರು ತನಿಖಾಧಿಕಾರಿಯನ್ನು ನೇಮಿಸುತ್ತಿಲ್ಲ ಹಾಗೂ ದೆಹಲಿ ಪೊಲೀಸರು ಎಫ್‌ಐಆರ್ ಕೂಡ ದಾಖಲಿಸುತ್ತಿಲ್ಲ,” ಎಂದು ಪಕ್ಷ ಆರೋಪಿಸಿದೆ.
ಜುಲೈ 20ರಂದು ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಸಲು ದೆಹಲಿ ಪೊಲೀಸರು ಅಧಿಕೃತವಾಗಿ ಅನುಮತಿ ನೀಡಿದ್ದರು ಎಂಬುದು ಆರ್‌ಎಎಫ್‌ನ ಸಾಮಾನ್ಯ ದಿನಚರಿ (ಜನರಲ್ ಡೈರಿ) ನಮೂದಿನಿಂದ ತಿಳಿದುಬಂದಿದೆ. ‘ಅಸಾಧಾರಣ ಸಂದರ್ಭಗಳಲ್ಲಿ’ (Exceptional circumstances) ಮಾತ್ರ ಪೆಲೆಟ್ ಗನ್‌ಗಳ ಬಳಕೆಯು ಪೊಲೀಸರ ಶ್ರೇಣೀಕೃತ ಪ್ರತಿಕ್ರಿಯೆಯ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿದೆ. ಜುಲೈ 29 ರಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್‌ನಿಂದ ಗುಂಡು ಹಾರಿಸಲಾಗಿದೆ. ವಿದ್ಯಾರ್ಥಿಗಳ ಮೇಲಿನ ಈ ದೌರ್ಜನ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನೇರ ಹೊಣೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದರು.




