ಪ್ರಮುಖ ಚಿನ್ನದ ರಫ್ತುದಾರ ಸಂಸ್ಥೆಯಾದ ರಾಜೇಶ್ ಮೆಹ್ತಾ ಅವರ ‘ರಾಜೇಶ್ ಎಕ್ಸ್‌ಪೋರ್ಟ್ಸ್’ಗೆ ಸಂಬಂಧಿಸಿದ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ದಿನ ಕಳೆದಂತೆಲ್ಲ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬೆಂಗಳೂರು ಮತ್ತು ಮುಂಬೈ ನಗರಗಳಲ್ಲಿ ಶೋಧ ನಡೆಸಿದ್ದು, ಸಂಸ್ಥೆಯ ವಾಣಿಜ್ಯ ವಹಿವಾಟುಗಳು ಅತ್ಯಂತ ಅಪಾರದರ್ಶಕವಾಗಿವೆ ಎಂದು ವಿವರಿಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA), 1999ರ ಅಡಿಯಲ್ಲಿ ಬೆಂಗಳೂರು ಮತ್ತು ಮುಂಬೈನಲ್ಲಿರುವ ‘ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್’ ಸಂಸ್ಥೆಗೆ ಸೇರಿದ ಒಂಬತ್ತು ಕಚೇರಿ ಮತ್ತು ಪ್ರಮುಖ ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ. ಈ ದಾಳಿ ಮತ್ತು ಈವರೆಗೆ ತನಿಖೆಯಲ್ಲಿ; ಕಂಪನಿಯ ವಿದೇಶಿ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳ ಸಂಪೂರ್ಣ ಕೊರತೆ ಎದ್ದುಕಾಣುತ್ತಿದೆ. ಆಫ್ರಿಕನ್ ಗಣಿಗಳಲ್ಲಿ 1,035 ಕೋಟಿ ರೂ. ಹೂಡಿಕೆ ಮಾಡಲಾಗಿದೆ ಎಂದು ಹೇಳಿಕೊಳ್ಳಲಾದ ವ್ಯವಹಾರಕ್ಕೆ ಯಾವುದೇ ಪೂರಕ ದಾಖಲೆಗಳು ಲಭ್ಯವಾಗಿಲ್ಲ. ಇದಲ್ಲದೆ, ದಾಳಿ ನಡೆಸಿದ ಸಂದರ್ಭದಲ್ಲಿ ಪತ್ತೆಯಾದ ಚಿನ್ನದ ನಿಜವಾದ ದಾಸ್ತಾನು ಮತ್ತು ಕಂಪನಿಯ ಅಧಿಕೃತ ರಿಜಿಸ್ಟರ್‌ನಲ್ಲಿ ದಾಖಲಾಗಿರುವ ಪ್ರಮಾಣದ ನಡುವೆ 40%ರಷ್ಟು ಭಾರಿ ವ್ಯತ್ಯಾಸ ಕಂಡುಬಂದಿದೆ ಎಂದು ಇಡಿ ತಿಳಿಸಿದೆ.
ಎಲ್ಲಕ್ಕಿಂತ ಆಶ್ಚರ್ಯಕರ ಸಂಗತಿಯೆಂದರೆ, ಕಂಪನಿಯು ಬರೋಬ್ಬರಿ 7.7 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಆದಾಯವನ್ನು ವರದಿ ಮಾಡಿದೆ. ಆದರೂ, ಅದರ ಮುಖ್ಯ ಹಣಕಾಸು ಅಧಿಕಾರಿ (CFO) 2020 ರಿಂದ ಯಾವುದೇ ಸಂಬಳವನ್ನು ಪಡೆದಿಲ್ಲ. ಅಂತೆಯೇ, ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ (MD) ಕೇವಲ 17,000 ರೂ. ಮಾತ್ರವೇ ಮಾಸಿಕ ವೇತನವನ್ನು ನೀಡಲಾಗುತ್ತಿದೆ ಎಂಬುದು ಕಂಡುಬಂದಿದೆ. ಇದರಿಂದಾಗಿ, ಅನಿವಾಸಿ ಭಾರತೀಯರ (NRI) ಬೆನಾಮಿ ಖಾತೆಗಳನ್ನು ಬಳಸಿಕೊಂಡು ಶೇರು ಮಾರುಕಟ್ಟೆಯಲ್ಲಿ ವ್ಯವಸ್ಥಿತ ವಂಚನೆ ಎಸಗುವ ಮೂಲಕ 600 ಕೋಟಿ ರೂ.ಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಗಂಭೀರ ಅನುಮಾನಗಳಿವೆ ಎಂದು ಇಡಿ ಹೇಳಿದೆ.
ಈ ಲೇಖನ ಓದಿದ್ದೀರಾ?: ಬಂಗಾರ ಸಾಮ್ರಾಜ್ಯ ಪತನ: ರಾಜೇಶ್ ಎಕ್ಸ್‌ಪೋರ್ಟ್ಸ್‌ನ 15.15 ಲಕ್ಷ ಕೋಟಿ ರೂ. ಮಹಾ ಹಗರಣ
ಇಡಿ ತನಿಖೆಯಲ್ಲಿ; ಈ ಕಂಪನಿಯ ಶೇರು ವ್ಯವಹಾರಗಳಲ್ಲಿ ಅತ್ಯಂತ ಸಂಶಯಾಸ್ಪದ ಹೂಡಿಕೆಗಳು ಮತ್ತು ‘ಬ್ಲಾಕ್ ಟ್ರೇಡ್‌ಗಳು’ ನಡೆದಿರುವುದು ಬೆಳಕಿಗೆ ಬಂದಿದೆ.



