ಜನಪದ ಕಲಾವಿದರು ಎಂದ ತಕ್ಷಣ ಮನೋಖಿನ್ನತೆಯನ್ನು ಬದಿಗಿಟ್ಟು ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು. ಜನಪದ ಕಲಾವಿದರೇ ಜಗತ್ತನ್ನು ಕಟ್ಟಿದವರು, ಸಂಸ್ಕೃತಿಯನ್ನು ಉಳಿಸಿದವರು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಶಿವಪ್ರಸಾದ್ ಗೊಲ್ಲಹಳ್ಳಿ ಹೇಳಿದರು.
ಬೀದರ್ ನಗರದ ನೆಹರು ಸ್ಟೇಡಿಯಂ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಜನಪದ ಕಲಾವಿದರ ಮಾಸಾಶನ ಅರ್ಹತಾ ಪರಿಶೀಲನಾ ಸಂದರ್ಶನ ಕಾರ್ಯಕ್ರಮ ಚಾಲನೆ ನೀಡಿ ಅವರು ಮಾತನಾಡಿದರು.
“ಕಲಾವಿದರು ಯಾವುದೇ ಮಧ್ಯವರ್ತಿಗಳ ಮಾತಿಗೆ ಕಿವಿಗೊಡಬಾರದು. ನಿಜವಾದ ಕಲಾವಿದರ ದಾಖಲೆಗಳು ಸರಿಯಾಗಿದ್ದರೆ ಅವರಿಗೆ ಖಂಡಿತವಾಗಿಯೂ ಮಾಸಾಶನ ದೊರೆಯುತ್ತದೆ. ಈ ಹಿಂದೆ ಮಾಸಾಶನದ ಸಂದರ್ಶನಗಳು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿಯೇ ನಡೆಯುತ್ತಿದ್ದವು. ಆದರೆ ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬರುವುದು ಕಲಾವಿದರಿಗೆ ಕಷ್ಟ ಆಗಬಾರದೆಂದು ಕಲಾವಿದರಿರುವ ಸ್ಥಳದಲ್ಲಿಯೇ ಸಂದರ್ಶನ ನಡೆಸುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಸಂದರ್ಶನಗಳನ್ನು ಆಯೋಜಿಸಲಾಗಿದೆ” ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, “ಜನಪದ ಕಲಾವಿದರು ತಮ್ಮ ಕಲೆ, ನಾಡಿನ ನೆಲ, ಜಲ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು ಬದುಕುತ್ತಿರುವ ಅಮೂಲ್ಯ ಸಂಪತ್ತು. ಕಲಾವಿದರು ಯಾವುದೇ ಗೊಂದಲಗಳಿಗೆ ಒಳಗಾಗದೆ ಆತ್ಮವಿಶ್ವಾಸದಿಂದ ಸಂದರ್ಶನದಲ್ಲಿ ಭಾಗವಹಿಸಬೇಕು. ಸಂದರ್ಶನ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದ್ದು, ನಿಜವಾದ ಕಲಾವಿದರಿಗೆ ನ್ಯಾಯ ದೊರೆಯುತ್ತದೆ” ಎಂದು ಹೇಳಿದರು.
ರಾಜ್ಯದ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಕಾಡೆಮಿ ಕಾರ್ಯನಿರ್ವಹಿಸುತ್ತಿದ್ದು, ಅರ್ಹ ಕಲಾವಿದರಿಗೆ ಯಾವುದೇ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮೃತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಬೀದರ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಒಟ್ಟು 88 ಜಾನಪದ ಕಲಾವಿದರು ಸಂದರ್ಶನದಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆ ಹಾಗೂ ಸಾಧನೆಗಳ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ : ಬೀದರ್ | ಅತಿಯಾದ ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಳೆ ದುಷ್ಪರಿಣಾಮ
ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯ ರಾಯಚೂರಿನ ರಂಗಪ್ಪ ಮಾಸ್ಟರ್, ಕೊಪ್ಪಳದ ಮಹೇಬೂಬ್ ಸಾಬ್, ಕನ್ನಡ ಜಾಗೃತಿ ಸಮಿತಿ ಸದಸ್ಯ ಸುನೀಲ ಭಾವಿಕಟ್ಟಿ, ಕ್ಲೆಂಮೆಂಟಿನಾ ಸೇರಿದಂತೆ ವಿವಿಧ ತಜ್ಞರು, ಸಮಿತಿ ಸದಸ್ಯರು ಸೇರಿದಂತೆ ಕಲಾವಿದರು ಭಾಗವಹಿಸಿದ್ದರು.




