ರಾಜಧಾನಿ ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳ ವಿರುದ್ಧ ಬಿಬಿಎಂಪಿ ಮತ್ತು ಜಿಬಿಎ ಅಧಿಕಾರಿಗಳು ನಡೆಸುತ್ತಿರುವ ಕಾನೂನುಬಾಹಿರ ಎತ್ತಂಗಡಿ ಕಾರ್ಯಾಚರಣೆಯನ್ನು ಖಂಡಿಸಿ, ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿಯು ಜುಲೈ 8ರ ಬುಧವಾರದಂದು ‘ಬೆಂಗಳೂರು ಬೀದಿ ವ್ಯಾಪಾರ ಬಂದ್’ ಹಾಗೂ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ವಿನಯ್ ಶ್ರೀನಿವಾಸ, “ಬೀದಿ ವ್ಯಾಪಾರಿಗಳ ಎತ್ತಂಗಡಿ ಕಾರ್ಯಾಚರಣೆಯು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಬಡವರ ಘನತೆಗೆ ಧಕ್ಕೆ ತರುವ ಸರ್ಕಾರದ ಈ ನಡೆ ಖಂಡನೀಯ. ರಸ್ತೆಯಲ್ಲಿ ಪಾದಚಾರಿಗಳು ಮತ್ತು ಬೀದಿ ವ್ಯಾಪಾರಿಗಳು ಇಬ್ಬರೂ ಸಹಜೀವನ ನಡೆಸಲು ಸಾಧ್ಯವಿದೆ. ಇವರ ನಡುವೆಯೇ ಅನಗತ್ಯ ವೈರತ್ವ ತರಬೇಡಿ” ಎಂದು ಒತ್ತಾಯಿಸಿದ್ದಾರೆ.
“ಬೆಂಗಳೂರಿನ ಜನರಿಗೆ ಉತ್ತಮ ಸರಕು ಮತ್ತು ಸೇವೆಗಳನ್ನು ಕಡಿಮೆ ಬೆಲೆಯಲ್ಲಿ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳ ಸ್ವಾವಲಂಬಿ ಬದುಕಿಗೆ ಆಧಾರವಾಗಿರುವ ಬೀದಿ ವ್ಯಾಪಾರವನ್ನು ಕಡೆಗಣಿಸಲಾಗಿದೆ. ಇತ್ತೀಚೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ‘ಮುಖ್ಯ ರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಜಾಗವಿಲ್ಲ’ ಎಂದು ಮೌಖಿಕ ಆದೇಶ ನೀಡಿದ್ದನ್ನೇ ನೆಪವಾಗಿಸಿಕೊಂಡ ಅಧಿಕಾರಿಗಳು, ಯಾವುದೇ ಮುನ್ಸೂಚನೆ ಇಲ್ಲದೆ ಜೆಸಿಬಿಗಳೊಂದಿಗೆ ಬಂದು ವ್ಯಾಪಾರಿಗಳ ಗಾಡಿ ಹಾಗೂ ಸರಕುಗಳನ್ನು ನಾಶಪಡಿಸಿ, ಜಪ್ತಿ ಮಾಡಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ಸರ್ವೋಚ್ಚ ನ್ಯಾಯಾಲಯವು ಬೀದಿ ವ್ಯಾಪಾರವನ್ನು ಮೂಲಭೂತ ಹಕ್ಕು ಎಂದು ಘೋಷಿಸಿದೆ. ಅಲ್ಲದೆ, ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿಯೇ 2014ರಲ್ಲಿ ಕಾಯ್ದೆ ತರಲಾಗಿದೆ. ಆದರೂ ಅಧಿಕಾರಿಗಳು ನಿಯಮ ಗಾಳಿಗೆ ತೂರಿ ಒಕ್ಕಲೆಬ್ಬಿಸುತ್ತಿದ್ದಾರೆ. ನಗರದಲ್ಲಿ ಸುಮಾರು ಒಂದೂವರೆ ಲಕ್ಷ ಬೀದಿ ವ್ಯಾಪಾರಿಗಳಿದ್ದು, ಅದರಲ್ಲಿ 80 ಸಾವಿರ ಜನರಿಗೆ ಸ್ವತಃ ಅಧಿಕಾರಿಗಳೇ ‘ಪಿಎಂ-ಸ್ವನಿಧಿ’ ಯೋಜನೆಯಡಿ ಸಾಲ ನೀಡಿದ್ದಾರೆ. ಆದರೆ, ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಕೇವಲ 34,000 ವ್ಯಾಪಾರಿಗಳನ್ನು ಮಾತ್ರ ಗುರುತಿಸಿ, ಲಕ್ಷಾಂತರ ಜನರನ್ನು ಸಮೀಕ್ಷೆಯಿಂದ ಹೊರಗಿಡಲಾಗಿದೆ. ಗುರುತಿನ ಚೀಟಿ ನೀಡುವಲ್ಲಿ ವಿಫಲವಾಗಿರುವ ಅಧಿಕಾರಿಗಳು, ಈಗ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ” ಎಂದು ವಿನಯ್ ಶ್ರೀನಿವಾಸ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬೀದಿ ವ್ಯಾಪಾರಿಗಳ ಕಾಯ್ದೆ-2014ರ ನಿಯಮಗಳನ್ನು ಅಧಿಕಾರಿಗಳು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಕಾಯ್ದೆಯ ಕಲಂ 3(3)ರ ಪ್ರಕಾರ ಸಮೀಕ್ಷೆ ಪೂರ್ಣಗೊಂಡು ಎಲ್ಲರಿಗೂ ಪ್ರಮಾಣಪತ್ರ ಸಿಗುವವರೆಗೂ ಯಾರನ್ನೂ ಎತ್ತಂಗಡಿ ಮಾಡುವಂತಿಲ್ಲ. ಆದರೂ, ಈ ನಿಯಮವನ್ನು ಉಲ್ಲಂಘಿಸಲಾಗಿದೆ. ಅಂತೆಯೇ, ಕಲಂ 18(1)ರ ಪ್ರಕಾರ ‘ನೋ-ವೆಂಡಿಂಗ್ ಜೋನ್’ ಘೋಷಿಸಲು ಪಟ್ಟಣ ವ್ಯಾಪಾರ ಸಮಿತಿಯ ಶಿಫಾರಸು ಕಡ್ಡಾಯವಾಗಿದೆ. ಆದರೆ, ಸಚಿವರು ಏಕಾಏಕಿ ಮುಖ್ಯ ರಸ್ತೆಗಳನ್ನು ನೋ-ವೆಂಡಿಂಗ್ ಜೋನ್ ಎಂದು ಘೋಷಿಸಿ, ಪರ್ಯಾಯ ಸ್ಥಳ ನೀಡದೆ ಒಕ್ಕಲೆಬ್ಬಿಸಿದ್ದಾರೆ. ಜೊತೆಗೆ ಕಲಂ 18(3)ರ ಪ್ರಕಾರ 30 ದಿನಗಳ ಕಡ್ಡಾಯ ಲಿಖಿತ ನೋಟಿಸ್ ನೀಡಬೇಕಾಗಿದ್ದರೂ, ಜಯನಗರ, ವಿಜಯನಗರ, ಮಾರತಹಳ್ಳಿ, ಮಲ್ಲೇಶ್ವರ ಹಾಗೂ ರಾಜರಾಜೇಶ್ವರಿನಗರ ಮುಂತಾದ ಕಡೆಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ತೆರವು ಮಾಡಲಾಗಿದೆ. ಇನ್ನು ಕಲಂ 19ರ ನಿಯಮದಂತೆ ನೋಟಿಸ್ ಉಲ್ಲಂಘನೆಯಾದ ನಂತರವಷ್ಟೇ ಸರಕು ಜಪ್ತಿ ಮಾಡಿ ರಸೀದಿ ನೀಡಬೇಕು. ಆದರೆ, ಯಾವುದೇ ರಸೀದಿ ನೀಡದೆ ಗಾಡಿಗಳನ್ನು ಜಪ್ತಿ ಮಾಡಿರುವುದು ಕಳ್ಳತನಕ್ಕೆ ಸಮಾನ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪಾದಚಾರಿ ಮಾರ್ಗಗಳನ್ನು ನಿಜವಾಗಿ ಒತ್ತುವರಿ ಮಾಡಿರುವುದು ಅಕ್ರಮ ವಾಹನ ನಿಲುಗಡೆ, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು, ವಾಣಿಜ್ಯ ಸಂಸ್ಥೆಗಳ ಖಾಸಗಿ ತೋಟಗಳು, ಹೋಟೆಲ್‌ಗಳ ಮೇಜು-ಕುರ್ಚಿಗಳು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳು. ಆದರೆ, ಸೀಮಿತ ಜಾಗದಲ್ಲಿ ವ್ಯಾಪಾರ ಮಾಡುವ ಬಡ ವ್ಯಾಪಾರಿಗಳು ಸುಲಭ ಗುರಿಯಾಗುತ್ತಿದ್ದಾರೆ” ಎಂದು ವಿನಯ್ ಶ್ರೀನಿವಾಸ ಕಿಡಿಕಾರಿದ್ದಾರೆ.
ಜಂಟಿ ಹೋರಾಟ ಸಮಿತಿಯು ನಗರಾಭಿವೃದ್ಧಿ ಸಚಿವರಿಗೆ ಕೆಲವು ತೀಕ್ಷ್ಣ ಪ್ರಶ್ನೆಗಳನ್ನು ಮುಂದಿಟ್ಟಿದೆ;
- ಏಕಾಏಕಿ ಒಕ್ಕಲೆಬ್ಬಿಸಿದ್ದರಿಂದ ಬೀದಿ ವ್ಯಾಪಾರಿಗಳಿಗಾದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡುತ್ತದೆಯೇ?
- ಮುಖ್ಯ ರಸ್ತೆಯಲ್ಲಿ ವ್ಯಾಪಾರ ಮಾಡಬೇಡಿ ಎನ್ನುವ ಸರ್ಕಾರ, ಅದೇ ರಸ್ತೆಗಳಲ್ಲಿ ಉಚಿತ ಕಾರ್ ಪಾರ್ಕಿಂಗ್ ಅನ್ನು ಏಕೆ ನಿಷೇಧಿಸಿಲ್ಲ?
- ಅಕ್ಕಪಕ್ಕದ ಕಿರಿದಾದ ರಸ್ತೆಗಳಿಗೆ ಹೋಗಲು ಸೂಚಿಸುತ್ತಿದ್ದೀರಿ, ಅಲ್ಲಿ ಸ್ಥಳೀಯರು ಆಕ್ಷೇಪಿಸಿದರೆ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು?
- ಸಚಿವರಿಗೆ ಬೀದಿ ವ್ಯಾಪಾರಿಗಳ ಕಾನೂನು ಮತ್ತು ನ್ಯಾಯಾಲಯದ ತೀರ್ಪುಗಳ ಬಗ್ಗೆ ಅರಿವಿಲ್ಲವೇ? ಅಥವಾ ಗೊತ್ತಿದ್ದೂ ಉಲ್ಲಂಘಿಸುತ್ತಿದ್ದಾರೆಯೇ?
- ಅಧಿಕಾರಕ್ಕೆ ಬಂದ ಮೇಲೆ ಒಮ್ಮೆಯೂ ವ್ಯಾಪಾರಿಗಳ ಕಷ್ಟ ಕೇಳದ ಸರ್ಕಾರ, ಮೊದಲ ಹೆಜ್ಜೆಯಾಗಿ ಕಾನೂನುಬಾಹಿರ ತೆರವು ಕಾರ್ಯಾಚರಣೆ ಮಾಡಿದ್ದೇಕೆ?
- ಅಪಘಾತಗಳಲ್ಲಿ ಪಾದಚಾರಿಗಳು ಮೃತಪಡುತ್ತಿರುವುದು ನಿಜ. ಆದರೆ ಅದರಲ್ಲಿ ಒಬ್ಬರಾದರೂ ಬೀದಿ ವ್ಯಾಪಾರಿಗಳಿಂದ ಸತ್ತಿದ್ದಾರೆಯೇ? ರಸ್ತೆ ದಾಟುವಾಗ ಆಗುವ ಸಾವುಗಳಿಗೆ ಕ್ರಮವೇನು?
- ಶಾಸಕರ ಸಭೆಯ ಮೌಖಿಕ ಆದೇಶವನ್ನೇ ನೋಟಿಸ್ ಎಂದು ಪರಿಗಣಿಸಲು ಕಾನೂನಿನಲ್ಲಿ ಹೇಗೆ ಸಾಧ್ಯ?
ಹೋರಾಟ ಸಮಿತಿಯ ಹಕ್ಕೊತ್ತಾಯಗಳು:
- ಒಕ್ಕಲೆಬ್ಬಿಸಿದ ವ್ಯಾಪಾರಿಗಳಿಗೆ ಅದೇ ಸ್ಥಳದಲ್ಲಿ ಅಥವಾ ತಾತ್ಕಾಲಿಕವಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬೇಕು. ಅಂತಿಮ ನಿರ್ಧಾರವನ್ನು ಪಟ್ಟಣ ವ್ಯಾಪಾರ ಸಮಿತಿಯೇ ತೆಗೆದುಕೊಳ್ಳಬೇಕು ಹಾಗೂ ಜಪ್ತಿ ಮಾಡಿದ ಸಾಮಗ್ರಿಗಳನ್ನು ತಕ್ಷಣ ಹಿಂತಿರುಗಿಸಬೇಕು.
- ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಿ, ಸಮಗ್ರ ಸಮೀಕ್ಷೆಯೊಂದಿಗೆ ಎಲ್ಲರಿಗೂ ಗುರುತಿನ ಚೀಟಿ ನೀಡಬೇಕು.
- ಹೊಸ ನಗರಪಾಲಿಕೆಗಳಲ್ಲಿ ನೈಜ ವ್ಯಾಪಾರಿ ಪ್ರತಿನಿಧಿಗಳನ್ನೊಳಗೊಂಡ ‘ಟೌನ್ ವೆಂಡಿಂಗ್ ಸಮಿತಿ’ಗಳನ್ನು ರಚಿಸಬೇಕು.
- ನಗರಾದ್ಯಂತ ಪಾದಚಾರಿ ಮಾರ್ಗಗಳನ್ನು ಅಗಲಗೊಳಿಸಿ, ಪಾದಚಾರಿಗಳಿಗೂ ಹಾಗೂ ವ್ಯಾಪಾರಿಗಳಿಗೂ ಜಾಗ ಕಲ್ಪಿಸಬೇಕು.
- ಅಕ್ರಮ ವಾಹನ ನಿಲುಗಡೆ, ಖಾಸಗಿ ತೋಟಗಳಂತಹ ನಿಜವಾದ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
- ನಗರಾಭಿವೃದ್ಧಿ ಸಚಿವರು ತಕ್ಷಣವೇ ಬೀದಿ ವ್ಯಾಪಾರಿ ಸಂಘಗಳ ಪ್ರತಿನಿಧಿಗಳ ಸಭೆ ಕರೆದು, ಕಾನೂನಾತ್ಮಕ ಮತ್ತು ಮಾನವೀಯ ಪರಿಹಾರ ಕಂಡುಕೊಳ್ಳಬೇಕು.



