ಉತ್ತರ ಪ್ರದೇಶದಲ್ಲಿ ಅತ್ಯಂತ ವಿಜೃಂಭಣೆಯಿಂದ ಉದ್ಘಾಟನೆಗೊಂಡಿದ್ದ 4,200 ಕೋಟಿ ರೂ. ವೆಚ್ಚದ ‘ಲಖನೌ-ಕಾನ್ಪುರ ಗ್ರೀನ್‌ಫೀಲ್ಡ್ ಎಲಿವೇಟೆಡ್ ಎಕ್ಸ್‌ಪ್ರೆಸ್-ವೇ’ ಉದ್ಘಾಟನೆಯಾದ ಕೇವಲ 12 ದಿನಗಳಲ್ಲಿ ಬಿರುಕು ಬಿಟ್ಟಿದೆ. ಹೊಸ ಎಕ್ಸ್‌ಪ್ರೆಸ್-ವೇನಲ್ಲಿ ಬಿರುಕು ಬಿಟ್ಟಿರುವುದು ವಾಹನ ಸವಾರರು, ಸಾರ್ವಜನಿಕರು ಹಾಗೂ ಅಧಿಕಾರಿಗಳಲ್ಲಿ ತೀವ್ರ ಆತಂಕ ಮತ್ತು ಆಶ್ಚರ್ಯವನ್ನು ಉಂಟುಮಾಡಿದೆ.
ಜುಲೈ 13ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಜಂಟಿಯಾಗಿ ಈ ಎಕ್ಸ್‌ಪ್ರೆಸ್‌ವೇ ಅನ್ನು ಉದ್ಘಾಟಿಸಿದ್ದರು.
ಉದ್ಘಾಟನೆಯಾದ ಎರಡು ವಾರಗಳೂ ಕಳೆಯುವ ಮುನ್ನವೇ, ಜುಲೈ 25ರಂದು ಸುರಿದ ಮಳೆಯಿಂದಾಗಿ ಉನ್ನಾವೋ ಬಳಿಯ ಕೊರಾರಿ ಗ್ರಾಮದ ಸಮೀಪ ಎಕ್ಸ್‌ಪ್ರೆಸ್‌ವೇನ ಬೃಹತ್ ಭಾಗ ಕುಸಿದು ಬಿದ್ದಿದೆ.
ಸುರಿದ ಮಳೆಗೆ ರಸ್ತೆಯ ಮೇಲ್ಭಾಗದಲ್ಲಿ ಆಳವಾದ ಬಿರುಕುಗಳು ಮೂಡಿವೆ. ರಸ್ತೆ ಕುಸಿದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಡೆಸಿದ ಕಾಮಗಾರಿಯ ಗುಣಮಟ್ಟ ಮತ್ತು ಯೋಜನೆಯ ಮೇಲ್ವಿಚಾರಣೆಯ ವೈಫಲ್ಯವನ್ನು ಎತ್ತಿಹಿಡಿದಿದೆ.

ಕುಸಿತಗೊಂಡ ರಸ್ತೆಯ ವಿಡಿಯೋವನ್ನು ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಮಧುಸೂದನ್ ಯಾದವ್, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನಾನು ಲಖನೌ-ಕಾನ್ಪುರ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಯಾಣಿಸುತ್ತಿದ್ದಾಗ ಕೊರಾರಿ ಬಳಿ ಮಳೆಗೆ ಸುಮಾರು 5 ರಿಂದ 7 ಮೀಟರ್‌ಗಳಷ್ಟು ರಸ್ತೆ ಸಂಪೂರ್ಣವಾಗಿ ಕುಸಿದು ಬಿರುಕು ಬಿಟ್ಟಿರುವುದನ್ನು ಕಂಡೆ. ಇಂತಹ ಕಳಪೆ ಕಾಮಗಾರಿಯು ಭೀಕರ ಅಪಘಾತಗಳಿಗೆ ದಾರಿಮಾಡಿಕೊಡುತ್ತದೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಸ್ತೆ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಆದರೆ, ಈ ಕಳಪೆ ಕಾಮಗಾರಿಯ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಎನ್‌ಹೆಚ್‌ಎಐ ಅಧಿಕಾರಿಗಳು ಇನ್ನೂ ಅಧಿಕೃತ ಸ್ಪಷ್ಟನೆ ನೀಡಿಲ್ಲ.




