ಬಿಹಾರದ ಲಖಿಸರಾಯ್‌ನಲ್ಲಿರುವ ಅಶೋಕಧಾಮ ದೇವಾಲಯದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಶ್ರಾವಣ ಮಾಸದ ಮೂರನೇ ಸೋಮವಾರದಂದು ಶಿವ ದೇವಾಲಯದಲ್ಲಿ ಪೂಜೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದರು. ಈ ವೇಳೆ ಬೆಳಿಗ್ಗೆ 6.45 ರ ಸುಮಾರಿಗೆ ಕಾಲ್ತುಳಿತ ಉಂಟಾಗಿದೆ. ವಿದ್ಯುತ್ ಕಂಬ ಬಿದ್ದ ನಂತರ ಜನರಲ್ಲಿ ಭೀತಿ ಉಂಟಾಗಿದ್ದು ಈ ವೇಳೆ ಕಾಲ್ತುಳಿತ ಉಂಟಾಗಿದೆ ಎಂದು ಎಸ್‌ಡಿಪಿಒ ಶಿವಂ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಳೆದ ಹತ್ತು ವರ್ಷಗಳಲ್ಲಿ ಕಾಲ್ತುಳಿತ ದುರಂತಗಳ ಏರಿಕೆ: ಅವಘಡಗಳಿಗೆ ಹೊಣೆ ಯಾರು?
“ಏಳು ಮಂದಿ ಸಾವನ್ನಪ್ಪಿದ್ದಾರೆ. ವಿದ್ಯುತ್ ಕಂಬ ಬಿದ್ದು ಜನರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ. ಎಲ್ಲವನ್ನೂ ಪರಿಶೀಲಿಸಿದ ನಂತರವೇ ನಿಖರವಾದ ಕಾರಣವನ್ನು ನಾವು ನಿಮಗೆ ಹೇಳಬಹುದು” ಎಂದೂ ತಿಳಿಸಿದ್ದಾರೆ.
“ಜನಸಂದಣಿ ತುಂಬಾ ಅಧಿಕವಾಗಿತ್ತು. ಬೆಳಿಗ್ಗೆ 6.30-6.45 ರ ಸುಮಾರಿಗೆ ಎರಡು ರೈಲುಗಳಷ್ಟು ಜನರು ಇಲ್ಲಿಗೆ ಆಗಮಿಸಿದ್ದಾರೆ. ಜನಸಂದಣಿ ನಿರೀಕ್ಷೆಯಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಒಂದು ಬದಿಯಲ್ಲಿ ಬ್ಯಾರಿಕೇಡಿಂಗ್ ಮುರಿದು ಜನರು ಪರಸ್ಪರರ ಮೇಲೆ ಬಿದ್ದಿದ್ದಾರೆ ಎಂದು ತಿಳಿಯಿತು. ನಾವು ತಕ್ಷಣ 10-15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ” ಎಂದು ಲಖಿಸರಾಯ್ ಡಿಎಂ ಶೈಲೇಂದ್ರ ಕುಮಾರ್ ಹೇಳಿದ್ದಾರೆ.




