ಜೆರೀ ಮ್ಯಾಂಡರಿಂಗ್ ಎಂದರೇನು? ಈ ಕುತಂತ್ರ ಹುಟ್ಟಿದ್ದು ಹೇಗೆ?

Date:

ಜೆರೀ ಮ್ಯಾಂಡರಿಂಗ್ ಎಂಬುದು ಹಳೆಯ ರಾಜಕೀಯ ಕುತಂತ್ರ. ಡಿಲಿಮಿಟೇಷನ್ ಅಥವಾ ಕ್ಷೇತ್ರ ಮರುವಿಂಗಡಣೆಯಲ್ಲಿ ಬಳಕೆಯಾಗುವ ಅಕ್ರಮ ಆಯುಧ. ಪಕ್ಷವೊಂದು ತಾನು ಜನಪ್ರಿಯ ಅಲ್ಲದಿದ್ದರೂ, ಹೆಚ್ಚು ಸೀಟುಗಳನ್ನು ಗೆಲ್ಲುವ ʼರಾಜಕೀಯ ಚೀಟ್ ಕೋಡ್ʼ ಎಂಬ ಮೋಸವಿದು. ಪ್ರಜಾಪ್ರಭುತ್ವದ ಮೂಲ ಸಿದ್ಧಾಂತವಾಗಿರುವ ಸಮಾನ ಪ್ರತಿನಿಧಿತ್ವವನ್ನು ದುರ್ಬಲಗೊಳಿಸುತ್ತದೆ.  ಡಿಲಿಮಿಟೇಷನ್ ಅಗತ್ಯ ಪ್ರಕ್ರಿಯೆಯಾಗಿದ್ದರೂ, ಅದು ಪ್ರತಿಪಕ್ಷಗಳ ವಿರುದ್ಧದ ರಾಜಕೀಯ ಹತಾರು ಆಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. 

ಜೆರೀ ಮ್ಯಾಂಡರಿಂಗ್(Gerrymandering) ಚುನಾವಣಾ ಮತಕ್ಷೇತ್ರಗಳ(electoral districts/constituencies) ಗಡಿಗಳನ್ನು ರಾಜಕೀಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ತಿರುಚಿ ರೇಖಿಸುವ ಅನ್ಯಾಯದ ರಾಜಕೀಯ ತಂತ್ರ. ಇದರ ಮೂಲಕ ಒಂದು ಪಕ್ಷ ಅಥವಾ ಗುಂಪು ಕ್ಷೇತ್ರದ ಮತದಾರರ ಸಂಖ್ಯೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಹಿಗ್ಗಿಸಿ ಅಥವಾ ತಗ್ಗಿಸಿ ತನ್ನ ಗೆಲುವನ್ನು ಗಟ್ಟಿ ಮಾಡಿಕೊಳ್ಳುತ್ತದೆ. ವಿಪಕ್ಷಗಳನ್ನು ದುರ್ಬಲಗೊಳಿಸುತ್ತದೆ. ತಾನು ಜನಪ್ರಿಯ ಅಲ್ಲದಿದ್ದರೂ, ಹೆಚ್ಚು ಸೀಟುಗಳನ್ನು ಗೆಲ್ಲುವ ʼರಾಜಕೀಯ ಚೀಟ್ ಕೋಡ್ʼ ಎಂದು ಈ ಮೋಸವನ್ನು ಬಣ್ಣಿಸಲಾಗುತ್ತದೆ. ಇದು ʼಒಂದು ವ್ಯಕ್ತಿ, ಒಂದು ಮತʼ(One Person, One Vote) ಎನ್ನುವ ಪ್ರಜಾಪ್ರಭುತ್ವದ ಮೂಲ ಸಿದ್ಧಾಂತವನ್ನೇ ಉಲ್ಲಂಘಿಸುತ್ತದೆ.

- Advertisement -

ಇತಿಹಾಸ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

Gerrymandering ಪದ ಹುಟ್ಟಿದ್ದು ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದಲ್ಲಿ. 1812ರಲ್ಲಿ ಎಲ್ಬ್ರಿಡ್ಜ್‌ ಗೆರ್ರಿ ಅವರು ತಮ್ಮ ರಾಜಕೀಯ ಜೀವನದ ಕೊನೆಯ ಅವಧಿಯಲ್ಲಿ ಡೆಮಾಕ್ರಟಿಕ್-ರಿಪಬ್ಲಿಕನ್ ಪಕ್ಷಕ್ಕೆ(Democratic-Republican Party) ಸೇರಿದ್ದರು. ಅವರ ಕಾಲದಲ್ಲಿ ಪ್ರಮುಖ ವಿಪಕ್ಷವಾಗಿ ಫೆಡರಲಿಸ್ಟ್ ಪಕ್ಷ (Federalist Party) ಇತ್ತು. ಎಲ್ಬ್ರಿಡ್ಜ್‌ ಅವರ ಹೆಸರಿನ ಭಾಗವಾದ ಗೆರ್ರಿಯು ಜನಸಾಮಾನ್ಯರ ಆಡುಭಾಷೆಯಲ್ಲಿ ಜೆರ್ರಿ ಆಗಿಹೋಗಿತ್ತು. ಗೆರ್ರಿ ಅವರು ಗವರ್ನರ್‌ ಆಗಿದ್ದ ಅವಧಿಯಲ್ಲಿ ಅವರ ಡೆಮಾಕ್ರಟಿಕ್-ರಿಪಬ್ಲಿಕನ್ ಪಕ್ಷವು ತನ್ನ ರಾಜಕೀಯ ಲಾಭಕ್ಕೆ ಅನುಗುಣವಾಗಿ ಮತಕ್ಷೇತ್ರಗಳನ್ನು ಮರುರೇಖಿಸಿತು. ಆಗ ಒಂದು ಕ್ಷೇತ್ರವು ಬಹಳ ವಿಚಿತ್ರವಾದ, ಉದ್ದವಾದ ಮತ್ತು ತಿರುಚಿದ ಆಕಾರದಲ್ಲಿತ್ತು. ಅದು ಸಾಲಮಾಂಡರ್ ಎಂಬ ಒಂದು ಬಗೆಯ ದೊಡ್ಡ  ಹಲ್ಲಿಯ ಹಾಗೆ ಕಾಣುತ್ತಿತ್ತು. ಗವರ್ನರ್‌ ಎಲ್ಬ್ರಿಡ್ಜ್‌ ಗೆರ್ರಿಯವರಿಗೆ ಮತ ಕ್ಷೇತ್ರಗಳ ವಿಭಜನೆ ಪ್ರಕ್ರಿಯೆ ಇಷ್ಟವಿಲ್ಲದಿದ್ದರೂ, ತನ್ನ ಪಕ್ಷದ ಒತ್ತಡಕ್ಕೆ ಮಣಿದು ಸಹಿ ಹಾಕಿದರು. ಹಾಗಾಗಿ ವಿರೋಧ ಪಕ್ಷದವರು ಇದನ್ನು ʼGerry-manderʼ ಎಂದು ಟೀಕಿಸಿ ವ್ಯಂಗ್ಯವಾಡಿದರು. ಬೋಸ್ಟನ್ ಗೆಜೆಟ್ ಪತ್ರಿಕೆಯಲ್ಲಿ 1812ರ ಮಾರ್ಚ್ 26ರಂದು ಈ  ಕುರಿತು ವ್ಯಂಗ್ಯಚಿತ್ರವೊಂದು ಪ್ರಕಟವಾಯಿತು. ಬಳಿಕ ‘ಜೆರೀ ಮ್ಯಾಂಡರಿಂಗ್‌’ ಎಂಬ ಹೆಸರು ಜನಪ್ರಿಯವಾಯಿತು. ಜಗತ್ತಿಗೆಲ್ಲ ಪರಿಚಿತವಾಯಿತು.

ಆದರೆ ಇದಕ್ಕೂ ಮುಂಚೆಯೇ ರಾಜಕೀಯದಲ್ಲಿ ಮತಕ್ಷೇತ್ರಗಳನ್ನು ತಿರುಚುವ ಅಭ್ಯಾಸವಿತ್ತು. 1789ರಲ್ಲಿ ವರ್ಜೀನಿಯಾದ ಪ್ಯಾಟ್ರಿಕ್ ಹೆನ್ರಿ ನೇತೃತ್ವದ ಒಕ್ಕೂಟದ ವಿಪಕ್ಷ ಶಾಸಕಾಂಗವು, ಜೇಮ್ಸ್ ಮ್ಯಾಡಿಸನ್ ಸ್ಥಾನವನ್ನು ಕಸಿದುಕೊಳ್ಳಲು ರಾಜ್ಯದ 5ನೇ ಕಾಂಗ್ರೆಸ್ ಜಿಲ್ಲಾ ನಕ್ಷೆಯನ್ನು ನಿರ್ದಿಷ್ಟವಾಗಿ ಪುನಃ ರಚಿಸಿತು. ಹೆನ್ರಿ ಕ್ಷೇತ್ರವನ್ನು ಮ್ಯಾಡಿಸನ್‌ನ ತವರು ಕ್ಷೇತ್ರದ ಬಂಡೆಸ್ಲಿಗಾ ಜಿಲ್ಲೆಯೊಂದಿಗೆ ಸೇರಿಸಿದರು. ಆದರೂ ಮ್ಯಾಡಿಸನ್ ಅಂತಿಮವಾಗಿ ಚುನಾವಣೆಯಲ್ಲಿ ಗೆದ್ದರು. ಈ ಕುತಂತ್ರವನ್ನು 1812ರಲ್ಲಿ ಬೆಳಕಿಗೆ ತರಲಾಯಿತು. ʼಜೆರೀ ಮ್ಯಾಂಡರಿಂಗ್ʼ ಎಂಬ ಪದಪ್ರಯೋಗ ಬಳಕೆಗೆ ಬಂದದ್ದು ಹೀಗೆ.

ಅಮೆರಿಕದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯ ನಂತರ ಮತಕ್ಷೇತ್ರಗಳನ್ನು ಮತ್ತೆ ರೇಖಿಸುವುದು(redistricting) ಕಡ್ಡಾಯವಾಗಿದೆ. ಇದನ್ನೇ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತವೆ.

ಜೆರೀ ಮ್ಯಾಂಡರಿಂಗ್ ತಂತ್ರವು ‘ಪ್ಯಾಕಿಂಗ್‌’ ಮತ್ತು ‘ಕ್ರ್ಯಾಕಿಂಗ್‌’ ಎಂಬ ಎರಡು ಮುಖ್ಯ ತಂತ್ರಗಳನ್ನು ಆಧರಿಸಿ ಕಾರ್ಯ ನಿರ್ವಹಿಸುತ್ತದೆ.

Packing  ಎಂದರೆ ವಿಪಕ್ಷದ ಬೆಂಬಲಿಗರನ್ನು ಒಂದು ಅಥವಾ ಕೆಲವು ಕ್ಷೇತ್ರಗಳಲ್ಲಿ ಅತಿಯಾಗಿ ತುಂಬುವುದು. ಆ ಕ್ಷೇತ್ರಗಳಲ್ಲಿ ವಿರೋಧ ಪಕ್ಷ ಭಾರೀ ಬಹುಮತದಿಂದ ಗೆಲ್ಲುತ್ತದೆ. ಆದರೆ ಉಳಿದ ಕ್ಷೇತ್ರಗಳಲ್ಲಿ ಅವರ ಬೆಂಬಲ ತುಂಬಾ ಕಡಿಮೆಯಾಗುತ್ತದೆ. ಹಾಗಾಗಿ ಪ್ರತಿಪಕ್ಷಗಳು ಗೆಲ್ಲುವ ಒಟ್ಟು ಸೀಟುಗಳು ತಗ್ಗುತ್ತವೆ.

Cracking ಎಂದರೆ ಚದುರಿಸುವುದು ಅಥವಾ ತೆಳುಗೊಳಿಸುವುದು. ಆಡಳಿತ ಪಕ್ಷವು ವಿಪಕ್ಷದ ಬೆಂಬಲಿಗ ಮತದಾರರನ್ನು ಹಲವು ಕ್ಷೇತ್ರಗಳಲ್ಲಿ ಸಣ್ಣ ಸಣ್ಣ ಗುಂಪುಗಳಾಗಿ ಚದುರಿಸುತ್ತಾರೆ. ಹೀಗಾಗಿ ಯಾವ ಕ್ಷೇತ್ರದಲ್ಲಿಯೂ ಅವರು ಸೋಲು ಗೆಲುವನ್ನು ತೀರ್ಮಾನಿಸುವಷ್ಟು ದೊಡ್ಡ ಸಂಖ್ಯೆಯಲ್ಲಿ ಇರುವುದಿಲ್ಲ. ಆದ್ದರಿಂದ ಯಾವುದೇ ಕಡೆ ಅವರು ಬೆಂಬಲಿಸುವ ಪಕ್ಷ ಗೆಲ್ಲುವುದಿಲ್ಲ. ಇದರಿಂದಾಗಿ ವಿಪಕ್ಷದ ಮತಗಳು ʼವ್ಯರ್ಥʼವಾಗುತ್ತವೆ. ಇಂತಹ ಸಂಯೋಜನೆಯನ್ನು ಮಾಡುವ ಪಕ್ಷ ರಾಜ್ಯದಲ್ಲಿ ಶೇ.45-48ರಷ್ಟು ಮತಗಳನ್ನು ಪಡೆದರೂ ಶೇ.60-70ರಷ್ಟು ಸೀಟುಗಳನ್ನು ಗೆಲ್ಲುವುದು ಸಾಧ್ಯವಾಗುತ್ತದೆ.

ಉದಾಹರಣೆಗೆ ಅಮೆರಿಕದಲ್ಲಿ ಉತ್ತರ ಕೆರೋಲಿನಾ(2010s): ರಿಪಬ್ಲಿಕನ್ ಪಕ್ಷವು ಮತಕ್ಷೇತ್ರಗಳನ್ನು ತಿರುಚಿ ತಿದ್ದಿ 2012ರಲ್ಲಿ ಶೇ.50ರಷ್ಟು ಮತಗಳೊಂದಿಗೆ 9 ಸೀಟುಗಳ ಪೈಕಿ 7 ಸೀಟುಗಳನ್ನು ಗೆದ್ದಿತು. ನಂತರ ನ್ಯಾಯಾಲಯಗಳು ಕೆಲವು ಕ್ಷೇತ್ರಗಳನ್ನು ರದ್ದುಗೊಳಿಸಿದವು.

ವಿಸ್ಕಾನ್ಸಿನ್: 2010ರಲ್ಲಿ ರಿಪಬ್ಲಿಕನ್‌ ಪಕ್ಷ ಮತಕ್ಷೇತ್ರಗಳನ್ನು ತಿರುಚಿದ್ದರಿಂದ 2012ರಲ್ಲಿ ಜನಪ್ರಿಯ ಮತಗಳ ಪೈಕಿ ಶೇ.49ರಷ್ಟು ಮತಗಳನ್ನು ಪಡೆದರೂ ರಾಜ್ಯ ವಿಧಾನಸಭೆಯ ಶೇ.60ರಷ್ಟು ಸೀಟುಗಳನ್ನು ಗೆದ್ದರು.

ಟೆಕ್ಸಾಸ್‌ನಲ್ಲಿ ಜನಾಂಗೀಯ ಜೆರೀಮಾಂಡರಿಂಗ್ ವಿವಾದ:

ಟೆಕ್ಸಾಸ್‌ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಹೊಸ ನಕ್ಷೆಗಳನ್ನು ರಚಿಸಲಾಗಿದ್ದು, ಇವು ಕಪ್ಪು ಮತ್ತು ಹಿಸ್ಪಾನಿಕ್ (Hispanic) ಅಲ್ಪಸಂಖ್ಯಾತರ ಮತಗಳನ್ನು ಚೆದುರಿಸಿ ದುರ್ಬಲಗೊಳಿಸುತ್ತವೆ ಎಂದು ಆರೋಪಿಸಲಾಗಿತ್ತು. ಸುಪ್ರೀಂ ಕೋರ್ಟ್ ಈ ವಿವಾದಿತ ನಕಾಶೆಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪುಗಳನ್ನು ಪ್ರಕಟಿಸಿದೆ. ಆದರೂ ಇದನ್ನು ಸಂಪೂರ್ಣವಾಗಿ ತಡೆಯುವುದು ಸವಾಲಿನ ಕೆಲಸವಾಗಿದೆ.

ಓಹಾಯೋದಲ್ಲಿ ಪಕ್ಷಪಾತದ ಜೆರೀ ಮ್ಯಾಂಡರಿಂಗ್

ಓಹಾಯೋದಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ನಡುವಿನ ಪೈಪೋಟಿಯಿಂದಾಗಿ ಕ್ಷೇತ್ರ ಮರು-ವಿಂಗಡನೆಯು ನ್ಯಾಯಾಲಯದ ಮೆಟ್ಟಿಲೇರಿದೆ. ಪಕ್ಷಪಾತದ ಜೆರೀ ಮ್ಯಾಂಡರಿಂಗ್ ತಡೆಯಲು ಸುಪ್ರೀಂ ಕೋರ್ಟ್ ಮತ್ತು ಸ್ಥಳೀಯ ನ್ಯಾಯಾಲಯಗಳು ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಲು ಹೆಣಗಾಡುತ್ತಿವೆ.

ಭಾರತದಲ್ಲಿ ಡಿಲಿಮಿಟೇಷನ್‌ ಕಮಿಷನ್ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಜೆರೀ ಮ್ಯಾಂಡರಿಂಗ್‌ ತಂತ್ರಕ್ಕೆ ಎಳಸುವವರು ಈ ಕ್ಷೇತ್ರ ಮರುವಿಂಗಡಣಾ ಆಯೋಗವನ್ನೇ ರಾಜಕೀಯ ಆಯುಧವಾಗಿ ಬಳಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ‌ ಅಸ್ಸಾಂ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಡಿಲಿಮಿಟೇಷನ್‌ನಲ್ಲಿ ಜೆರೀ ಮ್ಯಾಂಡರಿಂಗ್‌ ಆರೋಪಗಳು ತೀವ್ರವಾಗಿವೆ.

ಅಸ್ಸಾಂ(2023): ಅಸ್ಸಾಂನಲ್ಲಿ ಮುಸ್ಲಿಂ ಬಹುಸಂಖ್ಯೆಯ ಪ್ರದೇಶಗಳನ್ನು ಚದುರಿಸಿ ಅವರ ಪ್ರತಿನಿಧಿತ್ವವನ್ನು ಕಡಿಮೆ ಮಾಡಲಾಗಿದೆ ಎಂಬ ಆರೋಪವಿದೆ. ಯೋಗೇಂದ್ರ ಯಾದವ್‌ರಂತಹ ವಿಶ್ಲೇಷಕರು ಇದನ್ನು ಧರ್ಮೀಯ ಜೆರೀ ಮ್ಯಾಂಡರಿಂಗ್ (communal gerrymandering) ಎಂದು ಕರೆದಿದ್ದಾರೆ.‌

ಜಮ್ಮು ಕಾಶ್ಮೀರ(2022): ಹಿಂದೂಗಳು ಬಹುಸಂಖ್ಯಾತರಾಗಿರುವ ಜಮ್ಮು ಪ್ರದೇಶಕ್ಕೆ ಹೆಚ್ಚು ಸೀಟುಗಳು ಮತ್ತು ಮುಸ್ಲಿಮರು ಬಹುಸಂಖ್ಯಾತರಾಗಿರುವ ಕಾಶ್ಮೀರಕ್ಕೆ ಕಡಿಮೆ ಸೀಟುಗಳಂತೆ ಕ್ಷೇತ್ರ ವಿಂಗಡಣೆ ಮಾಡಲಾಗಿದೆ. ಇದು ಧರ್ಮೀಯ ಜೆರೀಮ್ಯಾಂಡರಿಂಗ್‌ ಆರೋಪಕ್ಕೆ ಕಾರಣವಾಯಿತು.

2026 ಡಿಲಿಮಿಟೇಷನ್ ಪ್ರಸ್ತಾಪ: ಒಕ್ಕೂಟ ಸರ್ಕಾರ ಮಹಿಳೆಯರಿಗೆ ಶೇ.50ರಷ್ಟು ಸ್ಥಾನಗಳನ್ನು ನೀಡಲು ಡಿಲಿಮಿಟೇಷನ್ ನಡೆಸುವ ಮಸೂದೆಯನ್ನು ಪ್ರತಿಪಕ್ಷಗಳು ‌ʼMotivated gerrymanderingʼ ಎಂದು ಟೀಕಿಸಿದ್ದು, ಉತ್ತರ ರಾಜ್ಯಗಳಿಗೆ ಹೆಚ್ಚು ಸೀಟುಗಳು ಬಂದರೆ, ದಕ್ಷಿಣ ರಾಜ್ಯಗಳ (ತಮಿಳುನಾಡು, ಕರ್ನಾಟಕ, ಕೇರಳ) ಪ್ರತಿನಿಧಿತ್ವ ಕಡಿಮೆಯಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದವು.

ಡಿಲಿಮಿಟೇಷನ್ vs ಜೆರೀಮ್ಯಾಂಡರಿಂಗ್‌ ವ್ಯತ್ಯಾಸ

ಅಂಶDelimitationGerrymandering
ಅರ್ಥಜನಸಂಖ್ಯೆ ಬದಲಾವಣೆಗೆ ತಕ್ಕಂತೆ ನ್ಯಾಯಯುತವಾಗಿ ಮತಕ್ಷೇತ್ರಗಳನ್ನು ಮರುರೇಖಿಸುವುದು.ಅದೇ ಪ್ರಕ್ರಿಯೆಯನ್ನು ರಾಜಕೀಯ ಲಾಭಕ್ಕಾಗಿ ತಿರುಚುವುದು
ಉದ್ದೇಶಸಮಾನ ಪ್ರತಿನಿಧಿತ್ವ, ಜನಸಂಖ್ಯೆಗೆ ಅನುಗುಣವಾದ ಸೀಟುಗಳನ್ನು ರಚಿಸುವುದುತನ್ನ ಪಕ್ಷಕ್ಕೆ ಹೆಚ್ಚು ಸೀಟುಗಳನ್ನು ರಚಿಸಿಕೊಂಡು, ವಿಪಕ್ಷಗಳನ್ನು ದುರ್ಬಲಗೊಳಿಸುವುದು
ಯಾರು ಮಾಡುತ್ತಾರೆ?ಸಾಮಾನ್ಯವಾಗಿ Delimitation Commission ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ.ಆಡಳಿತ ಪಕ್ಷ ಅಥವಾ ರಾಜಕಾರಣಿಗಳು
ಕಾನೂನುಬದ್ಧತೆಕಾನೂನುಬದ್ಧ ಮತ್ತು ಅಗತ್ಯವಾದುದುಕೆಲವೊಮ್ಮೆ ಕಾನೂನುಬದ್ಧವಾಗಿ ಮಾಡುತ್ತಾರೆಯಾದರೂ ಅನ್ಯಾಯದ್ದಾಗಿರುತ್ತದೆ.
ಭಾರತದಲ್ಲಿ1952, 1973, 2002ರಲ್ಲಿ ಡಿಲಿಮಿಟೇಷನ್ ನಡೆದಿದೆ. 2026ರಲ್ಲಿ ಮುಂದುವರೆಯುವ ಸಾಧ್ಯತೆ‌ ಇದೆ.Assam, J&K, MP, UPನಲ್ಲಿ ಜೆರೀ ಮ್ಯಾಂಡರಿಂಗ್‌ ನಡೆದಿರುವ ಆರೋಪಗಳಿವೆ.
ಪರಿಣಾಮಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ.ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ.

2008ರ ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ಹೊಸ ಕ್ಷೇತ್ರ ವ್ಯಾಪ್ತಿಗಳು (Delimitation)

ಕರ್ನಾಟಕದಲ್ಲಿ ಡಿಲಿಮಿಟೇಷನ್ ಆಯೋಗದ (2002-2008) ವರದಿಯ ಪ್ರಕಾರ ಹೊಸ ವ್ಯವಸ್ಥೆಯ ಅಡಿಯಲ್ಲಿ ಮೊದಲ ಚುನಾವಣೆ ನಡೆದದ್ದು 2008ರಲ್ಲಿ. ಈ ಬದಲಾವಣೆಯಿಂದ ಕ್ಷೇತ್ರಗಳ ಸಂಖ್ಯೆ, ಗಡಿಗಳು ಮತ್ತು ವ್ಯಾಪ್ತಿ ಬದಲಾದವು.

ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಲೂ ಇಲ್ಲ ತಗ್ಗಲೂ ಇಲ್ಲ. ಹಿಂದಿನಂತೆ 224 ವಿಧಾನಸಭಾ ಕ್ಷೇತ್ರಗಳೇ ಉಳಿದವು.  ಆದರೆ, 2001 ಜನಗಣತಿ ಆಧಾರದಲ್ಲಿ ಹೊಸ ವ್ಯವಸ್ಥೆಯೊಂದಿಗೆ ಕ್ಷೇತ್ರಗಳನ್ನು ಮರುರೇಖಿಸಲಾಗಿತ್ತು.

ಸುಮಾರು ಸಮಾನ ಜನಸಂಖ್ಯೆ, ಭೌಗೋಳಿಕ ಸಮನ್ವಯ, SC/ST ಮೀಸಲು ಕ್ಷೇತ್ರಗಳ ಹೊಂದಾಣಿಕೆಯೊಂದಿಗೆ ಕ್ಷೇತ್ರಗಳ ವಿಂಗಡಣೆಯಾಗಿದೆ ಎಂದು ಹೇಳಲಾಗುತ್ತದೆ.

ಹೊಸ/ಬದಲಾದ ಕ್ಷೇತ್ರಗಳ ಕೆಲವು ಉದಾಹರಣೆಗಳು ಹಾಸನ ಜಿಲ್ಲೆಯಲ್ಲಿ ಹೊಳೇನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಹಾಸನ ತಾಲೂಕಿನ ದುದ್ದ ಮತ್ತು ಶಾಂತಿಗ್ರಾಮ ಹೋಬಳಿಗಳ ಭಾಗಗಳು ಸೇರ್ಪಡೆಗೊಂಡವು. ಅಂತೆಯೇ ಶ್ರವಣಬೆಳಗೊಳ, ಬೇಲೂರು, ಅರಸಿಕೆರೆ, ಚನ್ನರಾಯಪಟ್ಟಣ, ಅರಕಲಗೂಡು, ಸಕಲೇಶಪುರ ವ್ಯಾಪ್ತಿಯೂ ಬದಲಾಗಿದೆ.

ರಾಜ್ಯ ಮಟ್ಟದಲ್ಲಿ ಮುಖ್ಯ ಬದಲಾವಣೆಗಳನ್ನು ಗಮನಿಸುವುದಾದರೆ, ಬೆಂಗಳೂರು ನಗರದಲ್ಲಿ ಹಲವು ಹೊಸ ಕ್ಷೇತ್ರಗಳು ಹುಟ್ಟಿಕೊಂಡವು. ಉದಾ: ಬೆಂಗಳೂರು ದಕ್ಷಿಣ, ಬಸವನಗುಡಿ, ಜಯನಗರ ಇತ್ಯಾದಿ. ಉತ್ತರ ಕರ್ನಾಟಕದಲ್ಲಿ SC/ST ಮೀಸಲು ಕ್ಷೇತ್ರಗಳು ಹೆಚ್ಚಿದವು. ಕೆಲವು ಹಳೆಯ ಕ್ಷೇತ್ರಗಳು ವಿಭಜನೆಯಾಗಿ ಹೊಸ ಕ್ಷೇತ್ರಗಳು ರಚನೆಯಾದವು.

ಇದನ್ನೂ ಓದಿದ್ದೀರಾ? ರಾಮಮಂದಿರ ಲೂಟಿ; ಯಾರನ್ನು ರಕ್ಷಿಸಲಾಗುತ್ತಿದೆ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಪ್ರಶ್ನೆ

ಗಂಡಸಿ ವಿಧಾನಸಭಾ ಕ್ಷೇತ್ರವು 2008ರವರೆಗೆ ಕರ್ನಾಟಕ ರಾಜ್ಯ ವಿಧಾನಸಭೆಯ ಕ್ಷೇತ್ರಗಳಲ್ಲಿ ಒಂದಾಗಿತ್ತು, ಹಾಸನ ಲೋಕಸಭಾ ಕ್ಷೇತ್ರದ ಭಾಗವಾಗಿತ್ತು. ನಂತರ ಗಂಡಸಿ ವಿಧಾನಸಭಾ ಕ್ಷೇತ್ರವನ್ನು ನಿಷ್ಕ್ರಿಯಗೊಳಿಸಲಾಯಿತು. ಈ ಕ್ಷೇತ್ರದ ಮತಗಳು ಹೊಳೆನರಸೀಪುರ ಮತ್ತು ಅರಸೀಕೆರೆ ಕ್ಷೇತ್ರಕ್ಕೆ ಹಂಚಿಕೆಯಾದವು. ಜೆಡಿಎಸ್‌ ಮತಗಳು ಇರುವ ಹಾಸನ ತಾಲೂಕಿನ ಹೋಬಳಿಗಳನ್ನು ಹೊಳೇನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲಾಯಿತು……. ಅದರಲ್ಲಿ ಶಾಂತಿಗ್ರಾಮ, ದುದ್ದ ಹೋಬಳಿಗಳು ಸೇರ್ಪಡೆಗೊಂಡವು. ಇದನ್ನು ಗಮನಿಸಿದರೆ ಪಕ್ಷೀಯ ಜೆರೀ ಮ್ಯಾಂಡರಿಂಗ್‌ ನಡೆದಿರುವುದು ಗಮನಾರ್ಹ. ಆಗ ಎಚ್ ಡಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರ ತಂದೆ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಇಂದಿಗಿಂತ ಹೆಚ್ಚು ಪ್ರಭಾವಿಯಾಗಿದ್ದರು.

ಜೆರೀ ಮ್ಯಾಂಡರಿಂಗ್ ಎಂಬುದು ಹಳೆಯ ರಾಜಕೀಯ ಕುತಂತ್ರ. ಡಿಲಿಮಿಟೇಷನ್ ಅಥವಾ ಕ್ಷೇತ್ರ ಮರುವಿಂಗಡಣೆಯಲ್ಲಿ ಬಳಕೆಯಾಗುವ ಅಕ್ರಮ ಆಯುಧ. ಪಕ್ಷವೊಂದು ತಾನು ಜನಪ್ರಿಯ ಅಲ್ಲದಿದ್ದರೂ, ಹೆಚ್ಚು ಸೀಟುಗಳನ್ನು ಗೆಲ್ಲುವ ʼರಾಜಕೀಯ ಚೀಟ್ ಕೋಡ್ʼ ಎಂಬ ಮೋಸವಿದು. ಪ್ರಜಾಪ್ರಭುತ್ವದ ಮೂಲ ಸಿದ್ಧಾಂತವಾಗಿರುವ ಸಮಾನ ಪ್ರತಿನಿಧಿತ್ವವನ್ನು ದುರ್ಬಲಗೊಳಿಸುತ್ತದೆ. ಡಿಲಿಮಿಟೇಷನ್ ಅಗತ್ಯ ಪ್ರಕ್ರಿಯೆಯಾಗಿದ್ದರೂ, ಅದು ಪ್ರತಿಪಕ್ಷಗಳ ವಿರುದ್ಧದ ರಾಜಕೀಯ ಹತಾರು ಆಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಕರ್ನಾಟಕದಂತಹ ರಾಜ್ಯಗಳಲ್ಲಿ 2026ರ ನಂತರದ ಡಿಲಿಮಿಟೇಷನ್ ಸಮಯದಲ್ಲಿ ಪಾರದರ್ಶಕತೆ, ಸ್ವತಂತ್ರ ಆಯೋಗ ಮತ್ತು ತಂತ್ರಜ್ಞಾನ(GIS) ಬಳಕೆಯಿಂದ ಇದನ್ನು ತಡೆಯಬಹುದು. ನ್ಯಾಯಯುತ ಚುನಾವಣಾ ವ್ಯವಸ್ಥೆಯಿಲ್ಲದೆ ನಿಜವಾದ ಪ್ರಜಾಪ್ರಭುತ್ವ ಸಾಧ್ಯವಿಲ್ಲ. ಜಾಗೃತ ಪ್ರಜೆಗಳು ಮತ್ತು ಬಲವಾದ ಸಂಸ್ಥೆಗಳೇ ಇದಕ್ಕೆ ರಕ್ಷಣೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ರೇಟ್ ನಿಕೋಬಾರ್ ಯೋಜನೆ: ಕಲ್ಕತ್ತಾ ಹೈಕೋರ್ಟ್ ವಿಚಾರಣೆಗೆ ತಡೆ ನೀಡಲು ಸುಪ್ರೀಂ ನಕಾರ

"ಸಂಸ್ಕೃತಿಯ ರಕ್ಷಣೆಯು ಸಂವಿಧಾನದಿಂದ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕಾಗಿದೆ" ಎಂದು ಸುಪ್ರೀಂ ಕೋರ್ಟ್...

ನೀವು ಮತ್ತು ನಿಮ್ಮ ಪೊಲೀಸರು ಮಹಿಳೆಯರಿಗೆ ಹೆದರುವುದೇಕೆ: ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತರು ಹಾಗೂ ಮಹಿಳಾ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ: ಜನಸಾಮಾನ್ಯರ ನಿರೀಕ್ಷೆಗಳೇನು?–ಭಾಗ 3

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ,...

ರಾಜ್ಯದಲ್ಲಿ ಭೀಕರ ಬರ: 46,000 ಕೋಟಿ ರೂ. ನಷ್ಟ; ಜಿಎಸ್‌ಟಿ ಆದಾಯದ ಮೇಲೆ ಪರಿಣಾಮ

ಕರ್ನಾಟಕದಲ್ಲಿ ಈ ಬಾರಿ ಹಿಂದೆಂದೂ ಕಾಣದಂತಹ ಭೀಕರ ಬರ ಪರಿಸ್ಥಿತಿ ತಲೆದೋರಿದೆ‌....